5 ದಿನ ಪಿಎಂ.. 2 ದಿನ ಸರ್ಕಾರಿ ಡಾಕ್ಟರ್…

464

ಇಲ್ಲೊಬ್ಬರು ಪ್ರಧಾನಿ ಇದ್ದಾರೆ. ಶನಿವಾರ ಹಾಗೂ ಭಾನುವಾರ ಬಂದ್ರೆ ಸಾಕು ತಮ್ಮ ಮೂಲ ವೃತ್ತಿ ಮಾಡ್ತಾರೆ. ಸೋಮವಾರ ಶುರುವಾಗ್ತಿದ್ದಂತೆ ದೇಶ ಮುನ್ನಡೆಸುವ ಕೆಲಸ. ಇಂಥಾ ವಿಶೇಷ ಪಿಎಂ ಸ್ಟೋರಿ ಇಲ್ಲಿದೆ…

ಡಾ.ಲೋತೆ ಶೇರಿಂಗ್

ನಮ್ಮಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಆದ್ರೆ ಸಾಕು, ಅವರ ಗತ್ತು ಗಮತ್ತು ನೋಡಬೇಕು. ಇನ್ನು ಶಾಸಕ, ಮಂತ್ರಿ ಅವರ ಬಗ್ಗೆ ಹೇಳುವುದೇ ಬೇಡ. ತಾವು ಬಂದ ಹಾದಿಯನ್ನ ಮರೆತು ನಡೆದುಕೊಳ್ಳುವವರೇ ಹೆಚ್ಚು. ಆದ್ರೆ, ಭೂತನ ಪ್ರಧಾನಿ ತನ್ನ ಬದುಕು ರೂಪಿಸಿದ ಮೂಲ ವೃತ್ತಿಯನ್ನ ಮಾತ್ರ ಇಂದಿಗೂ ಮರೆತಿಲ್ಲ. ವಾರದಲ್ಲಿ ಎರಡು ದಿನ ಸರ್ಕಾರಿ ಆಸ್ಪತ್ರೆಗೆ ಓಡುತ್ತಾರೆ.

ರೋಗಿಗೆ ಚಿಕಿತ್ಸೆ ನೀಡ್ತಿರುವ ಪ್ರಧಾನಿ

ಪ್ರಕೃತಿ ಸೌಂದರ್ಯದಿಂದ ಭೂತಾನ್ ಜನರನ್ನ ಆಕರ್ಷಿಸುವ ಪುಟ್ಟ ದೇಶ. ಇಲ್ಲಿನ ಶ್ರೀಮಂತಿಕೆಯನ್ನ ಅವರ ಸಂತೋಷದಿಂದ ಅಳೆಯಲಾಗುತ್ತೆ. ಹೀಗಿರುವ ದೇಶದ ಪ್ರಧಾನಿಯಾಗಿ 50 ವರ್ಷದ ಲೋತೆ ಶೇರಿಂಗ್ ನವೆಂಬರ್ 7, 2018ರಂದು ಅಧಿಕಾರವಹಿಸಿಕೊಂಡ್ರು. ರಾಷ್ಟ್ರದ ಚುಕ್ಕಾಣಿ ಹಿಡಿದ ಪ್ರಧಾನಿ, ತಾನು ಬಂದ ಹಾದಿಯನ್ನ ಮರೆಯಲಿಲ್ಲ. ಹೀಗಾಗಿ ಇಂದಿಗೂ ವೈದ್ಯಕೀಯ ವೃತ್ತಿ ಮಾಡ್ತಿದ್ದಾರೆ. ವಾರದ ಐದು ದಿನ ದೇಶ ಸೇವೆ ಮಾಡಿದ್ರೆ, ಶನಿವಾರ ಹಾಗೂ ಭಾನುವಾರ ಸರ್ಕಾರಿ ಆಸ್ಪತ್ರೆಗೆ ಬಂದು ಬಡಜನರ ಸೇವೆ ಮಾಡ್ತಿದ್ದಾರೆ.

ರೋಗಿಯೊಂದಿಗೆ ಪ್ರಧಾನಿ ಲೋತೆ ಶೇರಿಂಗ್

ವೀಕೆಂಡ್ ಎಂದು ಮೋಜು ಮಸ್ತಿ ಮಾಡುವ ಜನರ ನಡುವೆ, ಉನ್ನತ ಸ್ಥಾನದಲ್ಲಿರುವ ಲೋತೆ ಶೇರಿಂಗ್, ರಾಜಧಾನಿ ಥಿಂಪುವಿನಲ್ಲಿರುವ ಜಿಗ್ಮೆ ಡೋರ್ಜಿ ವಾಂಗ್ಚುಕ್‌ ನ್ಯಾಷನಲ್‌ ರೆಫರಲ್‌ ಆಸ್ಪತ್ರೆಯಲ್ಲಿ ಹಾಜರಿ ಹಾಕ್ತಾರೆ. ಹೀಗೆ ಬರುವಾಗ ಪ್ರಧಾನಿ ಅನ್ನುವ ಠೀವಿ ಅವರಲ್ಲಿ ಇರೋದಿಲ್ಲ. ಇಲ್ಲಿನ ಸಿಬ್ಬಂದಿ ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಿರ್ತಾರೆ.

ಭಾರತದ ಈ ಹಿಂದಿನ ವಿದೇಶಾಂಗ ಸಚಿವೆ ಜೊತೆ

ಈ ಬಗ್ಗೆ ಭೂತಾನ್ ಪ್ರಧಾನಿಯನ್ನ ಕೇಳಿದ್ರೆ, ಒತ್ತಡ ಮುಕ್ತಗೊಳಿಸಿಕೊಳ್ಳಲು ಅಂತಾರೆ. ಜನರು ವಾರದ ಕೊನೆಯಲ್ಲಿ ತಮ್ಮ ಇಷ್ಟದ ಜಾಗಕ್ಕೆ ಹೋಗ್ತಾರೆ. ಅದೇ ರೀತಿ ನಾನು ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಖುಷಿಯಾಗಿರ್ತಿನಿ ಅಂತಾರೆ.

ಪಿಎಂ ಕುರ್ಚಿ ಮೇಲೆ ವೈದ್ಯರ ಕೋಟ್

2008ರಲ್ಲಿ ಭೂತಾನ್ ನಲ್ಲಿ ಪ್ರಜಾಭುತ್ವ ಜಾರಿಗೆ ಬಂದಿದೆ. ಬಾಂಗ್ಲಾದೇಶ, ಜಪಾನ್‌, ಆಸ್ಪ್ರೇಲಿಯಾ ಹಾಗೂ ಅಮೆರಿಕದಲ್ಲಿ ಡಾಕ್ಟರ್ ತರಬೇತಿ ಪಡೆದಿರುವ ಶೇರಿಂಗ್‌, 2013ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರ ಪಕ್ಷ ಅಧಿಕಾರಕ್ಕೆ ಬರ್ಲಿಲ್ಲ. ಪರಾಭವಗೊಂಡಿದ್ದ ಶೇರಿಂಗ್‌ ಅವರನ್ನ ರಾಜ ಜಿಗ್ಮೆ ಕೇಸರ್‌ ನಾಮ್‌ಗ್ಯೇಲ್‌ ವಾಂಗ್ಚುಕ್‌ ಕರೆದು, ವೈದ್ಯರ ತಂಡ ಮುನ್ನಡೆಸುವಂತೆ ಹೇಳಿದ್ರು. ಇದ್ರಿಂದಾಗಿ ದೂರದ ಗ್ರಾಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುವ ಜವಾಬ್ದಾರಿ ನೀಡಲಾಯ್ತು.

ರಾಹುಲ್ ಗಾಂಧಿ ಭೂತಾನ್ ಪ್ರವಾಸ ಕೈಗೊಂಡಾಗ

ಪಿಎಂ ಆದ ಬಳಿಕವೂ ಶೇರಿಂಗ್‌ ತಮ್ಮ ಮೂಲ ವೃತ್ತಿ ಬಿಟ್ಟಿಲ್ಲ. ಗುರುವಾರ ಬೆಳಗ್ಗೆ ಟ್ರೇನಿಗಳು ಹಾಗೂ ವೈದ್ಯರಿಗೆ ವೈದ್ಯಕೀಯ ಸಲಹೆ ಕೊಡ್ತಾರೆ. ಪ್ರಧಾನಿ ಕಚೇರಿಯಲ್ಲಿರುವ ಇವರ ಕುರ್ಚಿಯಲ್ಲಿ ವೈದ್ಯರ ಕೋಟ್ ಯಾವಾಗಲೂ ಇರುತ್ತೆ. ಸರ್ವರ್ ಸೋಮಣ್ಣ ಸಿನ್ಮಾದಲ್ಲಿ ನಟ ಜಗ್ಗೇಶ್ ಸ್ಟಾರ್ ಹೀರೋ ಆದ್ರೂ ಹೋಟೆಲ್ ಸರ್ವರ್ ಡ್ರೆಸ್ ನ್ನ ಮನೆಯ ಗೋಡೆಗೆ ನೇತು ಹಾಕಿದ ದೃಶ್ಯ ಕಣ್ಮುಂದೆ ಬರುತ್ತೆ. ಈ ರೀತಿಯ ಮನಸ್ಸುಳ್ಳವರು ರಾಜಕೀಯಕ್ಕೆ ಬಂದ್ರೆ ಬದಲಾವಣೆ ಅನ್ನೋದು ಖಂಡಿತ ಆಗುತ್ತೆ. ಬರೀ ಮಾತಿನಿಂದಲ್ಲ. ಕಾಯಕದಿಂದ ಕೈಲಾಸ ಕಾಣು ಅನ್ನೋ ವಿಶ್ವಗುರುವಿನ ಸಂದೇಶವನ್ನ ಇಂಥವರು ಪಾಲಿಸ್ತಿದ್ದಾರೆ. ಆದ್ರೆ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ನೆಲದಲ್ಲಿ ಇದು ಕಾಣೋದು ಯಾವಾಗ…

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೊತೆ ಭೂತಾನ್ ಪಿಎಂ



Leave a Reply

Your email address will not be published. Required fields are marked *

error: Content is protected !!