ಕಾವೇರಿ ತಾಯಿ ಮಕ್ಕಳ ಕಿಚ್ಚು

187

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದೆ. ಜನರಿಗೆ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಿರುವಾಗ ಕಾವೇರಿ ನದಿ ಪ್ರಾಧಿಕಾರ ಪದೆಪದೆ ಕರ್ನಾಟಕದ ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಹೋರಾಟದ ನಡುವೆ ಮಂಗಳವಾರ 3 ಸಾವಿರ ಕ್ಯೂಸೆಕ್ ನೀರನ್ನು ಮುಂದಿನ 18 ದಿನಗಳ ಕಾಲ ಬಿಡಬೇಕು ಎಂದು ಆದೇಶಿಸಿದೆ.

ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶದ ವಿರುದ್ಧ ರಾಜ್ಯದಲ್ಲಿ ಹೋರಾಟಗಳು ಜೋರಾಗುತ್ತಿವೆ. ಶುಕ್ರವಾರ ಇಡೀ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ಆದರೆ, ಕಳೆದ ಸುಮಾರು 2 ವರ್ಷಗಳ ಹಿಂದೆ ಕಾವೇರಿ ಕಾಲಿಂಗ್ ಎಂದು ಬೃಹತ್ ಅಭಿಯಾನ ಶುರು ಮಾಡಿದ ಸದ್ಗುರು ಜಗ್ಗಿವಾಸುದೇವ್ ಎಲ್ಲಿ ಎಂದು ಜನರು ಕೇಳುತ್ತಿದ್ದಾರೆ. 242 ಕೋಟಿ ಮರಗಳನ್ನು ನೆಡಲು, ಕಾವೇರಿಯನ್ನು ಪುನರುಜ್ಜೀವನಗೊಳಿಸಲು ಅಭಿಯಾನ ನಡೆಸಲಾಯಿತು. ರಾಜಕಾರಣಿಗಳು, ಸಿನಿ ತಾರೆಯರು, ಉದ್ಯಮಿಗಳು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು. ಇದು ಮುಂದೇನಾಯಿತು ಎಂದು ಯಾರಿಗೂ ಗೊತ್ತಿಲ್ಲ. ನೀರು ಉಳಿಸಿ, ಮಣ್ಣು ಉಳಿಸಿ ಎಂದು ವಿಶ್ವ ಪರ್ಯಟನೆ ಮಾಡುವ ಸದ್ಗುರು ಕಾವೇರಿ ಹೋರಾಟದ ಬಗ್ಗೆ ಇದೂವರೆಗೂ ತುಟಿನೇ ಬಿಚ್ಚಿಲ್ಲ.

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ವ್ಯಾಪ್ತಿಯ ಕೌರನಹಳ್ಳಿ ಹತ್ತಿರ 112 ಅಡಿ ಎತ್ತರದ ಬೃಹತ್ ಆದಿ ಯೋಗಿ ಶಿವನ ಮೂರ್ತಿಯನ್ನು ಇದೇ ಸದ್ಗುರು ಜಗ್ಗಿವಾಸುದೇವ್ ನಡೆಸಿಕೊಂಡು ಬರುತ್ತಿರುವ ಇಶಾ ಫೌಂಡೇಶನ್ ಮೂಲಕ ನಿರ್ಮಿಸಲಾಗಿದೆ. ಇದಕ್ಕಾಗಿ ಅಪಾರ ಪ್ರಮಾಣದ ಜಾಗ, ಕೋಟ್ಯಾಂತರ ರೂಪಾಯಿ ಅನುದಾನ ನೀಡುವ ಮೂಲಕ ಹಿಂದಿನ ಬಿಜೆಪಿ ಸರ್ಕಾರ, ಜನರ ವಿರೋಧದ ನಡುವೆಯೂ ಅದ್ಧೂರಿ ಕಾರ್ಯಕ್ರಮ ನಡೆಸಿತು.

ಈ ನೆಲ, ಜಲ, ಕಾಡು, ಪ್ರಾಣಿ, ಪಕ್ಷಿ ಸಂಕುಲಗಳಿಗೆ ಇರುವ ನಂದಿ ಬೆಟ್ಟದ ಹತ್ತಿರದ ಭೂಮಿ ಬಳಿ ಭವ್ಯವಾದ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಈಗ ಇದೇ ಜಗ್ಗಿವಾಸುದೇವ್, ಇಲ್ಲಿನ ಜನರ ಸಂಕಷ್ಟದ ಬಗ್ಗೆ ಮಾತನಾಡುತ್ತಿಲ್ಲ. ಜಗತ್ತಿನಾದ್ಯಂತ ಅತ್ಯಂತ ದುಬಾರಿ ಬೆಲೆಯ ಬೈಕ್, ಕಾರಿನಲ್ಲಿ ನೀರು, ಮಣ್ಣು ಉಳಿಸುವ ಅಭಿಯಾನ ಮಾಡುವವರು ತಮ್ಮ ನೆಲದಲ್ಲಿಯೇ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲವೆಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ, ಈಗೇನು ಪ್ರಯೋಜನ. ಕಾಲ ಮಿಂಚಿದೆ ಎಂದು ಅಂದು ಹೋರಾಟ ಮಾಡಿದ ಜನರು ಹೇಳುತ್ತಿದ್ದಾರೆ.

ಇನ್ನು ಇದರಲ್ಲಿ ಪ್ರತಿಯೊಂದು ರಾಜಕೀಯದವರ ಬೆಂಬಲ ದಾರಾಳವಾಗಿ ಇರುತ್ತೆ. ಜನರ ಜೀನವಮಟ್ಟ ಸುಧಾರಣೆಯಲ್ಲಿ ತೋರಿಸದ ಆಸಕ್ತಿಯನ್ನು ಈ ರೀತಿಯ ಕೆಲಸಗಳಿಗೆ ತೋರಿಸಿ, ತೆರಿಗೆ ಹಣವನ್ನು ಪೋಲು ಮಾಡಲಾಗುತ್ತೆ. ನೀರಿನ ಮೂಲ, ವನ ಸಂಪತ್ತು, ಜನರ ಆರೋಗ್ಯದ ಗುಣಮಟ್ಟ ಯಾಕೆ ಪಾತಾಳಕ್ಕೆ ಹೋಗುತ್ತಿದೆ ಅನ್ನೋದು ಗೊತ್ತಿದ್ದು, ಸರ್ಕಾರದ ಪ್ರಯೋಜಕತ್ವದಲ್ಲಿ ಇಂತಹ ಕೆಲಸಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿರುವುದು ನೋಡಿದರೆ ಮುಂದೊಂದು ದಿನ ದೊಡ್ಡ ಬೆಲೆ ಕಟ್ಟಬೇಕಾಗುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!