ಚೌಡೇಶ್ವರಿ ಜಾತ್ರೆ ಮತ್ತು ಐತಿಹಾಸಿಕ ಹಿನ್ನೆಲೆ

1278

ನಮ್ಮ ಈ ನೆಲದಲ್ಲಿನ ಧರ್ಮ, ದೇವರು, ಆಚರಣೆ ಅನ್ನೋದಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಒಂದೊಂದು ಆಚರಣೆ ಹಿಂದೆ ಒಂದಿಷ್ಟು ಕಥೆಗಳಿವೆ. ಕೆಲವು ಕಥೆಗಳು ಪುರಾಣ, ಹರಿಕಥೆ, ರಾಮಾಯಣ, ಮಹಾಭಾರತದಿಂದ ಬಂದಿದ್ರೆ, ಇನ್ನು ಕೆಲ ಕಥೆಗಳು ನಮ್ಮ ಜನಪದೀಯ ಮೂಲದಿಂದ ಬಂದಿದ್ದಾಗಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮ ದೇವರುಗಳ ಆಚರಣೆ ತುಂಬಾ ವಿಶಿಷ್ಟ ಹಾಗೂ ಪ್ರಸಿದ್ಧಿ ಪಡೆದಿವೆ. ಅದರಲ್ಲಿ ಸಿಂದಗಿಯ ಚೌಡೇಶ್ವರಿದೇವಿ ಜಾತ್ರೆ.

ನಾಡಿನ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮದೇವತೆಯ ಪೂಜೆ ನೋಡುತ್ತೇವೆ. ಭಕ್ತರಿಂದ ಪೂಜೆ ಮಾಡಿಸಿಕೊಳ್ಳುವ ತಾಯಿ ಒಬ್ಬಳ್ಳೆಯಾದ್ರೂ, ಆಕೆಯನ್ನ ನಾನಾ ಹೆಸರುಗಳಿಂದ ಕರೆಯಲಾಗುತ್ತೆ. ಉತ್ತರ ಕರ್ನಾಟಕ ಭಾಗದಲ್ಲಿ ಚೌಡಮ್ಮ, ಚೌಡೇಶ್ವರಿ, ಚೌಡಿ ಅಂತಾಲೆ ಕರೆದ್ರೆ, ಮೈಸೂರು ಭಾಗದ ಕಡೆ ಚಾಮುಂಡಿ, ಚಾಮುಂಡೇಶ್ವರಿ ಅಂತೆಲ್ಲ ಕರೆಯುತ್ತಾರೆ. ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಗ್ರಾಮದೇವತೆಯ ಜಾತ್ರೆ ಬಾದಮಿ ಅಮವಾಸ್ಯೆಯಂದು ನಡೆಯುತ್ತದೆ. ಹೀಗಾಗಿ ಇಂದು ಸಿಂದಗಿ ನೆಲದಲ್ಲಿ ಚೌಡೇಶ್ವರಿಯ ಅದ್ಧೂರಿ ಜಾತ್ರೆ ನಡೆಯುತ್ತಿದೆ.

ಚೌಡೇಶ್ವರಿಯ ಹಿನ್ನೆಲೆ:

ಚೌಡ ಅಂದ್ರೆ ತಲೆ, ನೆತ್ತಿ, ಅಗ್ರ ಶಿಖರ, ತುರಾಯಿ ಅನ್ನೋ ಅರ್ಥವಿದೆ. ಚವುಡ ಅಂದ್ರೆ ಕಠಾರಿ ಅನ್ನೋ ಅರ್ಥವಿದೆ. ಈ ಅರ್ಥಗಳನ್ನು ನೋಡಿದಾಗ ಸಿಂಹವಾಹಿನಿಯಾಗಿರುವ, ಕಿರೀಟ ಹಾಗೂ ಖಡ್ಗಧಾರಿಯಾದ ದೇವತೆಯ ಮುಖ ಕೆಂಪು ಇರುತ್ತೆ. ಉಗ್ರ ರೂಪದ ಕಣ್ಣುಗಳು, ಕೋರೆ ಹಲ್ಲುಗಳು, ಹರಿದ ಕೂದಲುಗಳಿಂದ ಮೂರ್ತಿ ಕಂಗೊಳಿಸುತ್ತೆ. ಹೀಗಾಗಿ ಇವಳಿಗೆ ಚವುಡಿ ಅನ್ನೋ ಹೆಸರು ಬಂದಿರಬೇಕು. ಮುಂದೆ ಅದು ಚೌಡಿ, ಚೌಡೇಶ್ವರಿ, ಚಾಮುಂಡಿ ಆಗಿರಬಹುದು ಅಂತಾರೆ ಸಂಶೋಧಕರು.

ಶ್ರೀಚೌಡೇಶ್ವರಿದೇವಿ

ಹೀಗೆ ಉತ್ತರ ಕರ್ನಾಕಟದ ಭಾಗಗಳಲ್ಲಿ ಪೂಜೆಗೊಳ್ಳುವ ಚೌಡೇಶ್ವರಿಯ ಅರ್ಚಕರು ಕುಂಬಾರರು ಆಗಿರುತ್ತಾರೆ. ಪೂಜೆ ಪುನಸ್ಕಾರ ವಿಚಾರಗಳಲ್ಲಿ ಕಟ್ಟುನಿಟ್ಟಿನಿಂದ ಕೂಡಿರಬೇಕಾಗಿರುತ್ತೆ. ಪ್ರತಿ ವರ್ಷ ಬಾದಮಿ ಅಮವಾಸ್ಯೆಯಂದು ಈ ಭಾಗದ ಎಲ್ಲ ಹಳ್ಳಿಗಳಲ್ಲಿ ಈ ದೇವಿಯ ಜಾತ್ರೆ ನಡೆಯುತ್ತೆ. ಅಮವಾಸ್ಯೆಯ ಹಿಂದಿನ ರಾತ್ರಿ ‘ಬಾಳಬಟ್ಟಲ’ವನ್ನ ಪ್ರಧಾನ ಅರ್ಚಕ ಎರಡು ಕೈಗಳಲ್ಲಿ ಹಿಡಿದುಕೊಂಡು ಊರ ತುಂಬಾ ಸಂಚಾರ ಮಾಡ್ತಾನೆ. ವಿಶೇಷ ಅಲಂಕಾರಗಳಿಂದ ಸಿದ್ಧಗೊಂಡಿರುವ ಅರ್ಚಕ, ಮಧ್ಯರಾತ್ರಿಯಲ್ಲ ಊರ ತುಂಬಾ ಸಂಚಾರ ಮಾಡುವಾಗ ನೂರಾರು ಜನ ಭಕ್ತರು ಆತನ ಹಿಂದೆ ಹ್ಯೂಲೋ ಹ್ಯೂಲೋ ಅಂತಾ ಓಡ್ತಾರೆ. ಇದನ್ನ ನೋಡಲು ಇಡೀ ಊರು ಎಚ್ಚರವಾಗಿರುತ್ತೆ.

ಬಾಳಬಟ್ಟಲ ರೂಪದಲ್ಲಿ ಪ್ರಧಾನ ಅರ್ಚಕ

ಬಾಳಬಟ್ಟಲ ಅಂದ್ರೆ ಖಡ್ಗ ಅನ್ನೋ ಅರ್ಥವಿದೆ. ಒಂದು ಕೈಯಲ್ಲಿ ಖಡ್ಗ, ಇನ್ನೊಂದರಲ್ಲಿ ಉರಿಯುವ ಬಟ್ಟಲು ಹಿಡಿದಿರುತ್ತಾಳೆ. ಈ ವೇಳೆ ಭಕ್ತರ ಕೈಯಲ್ಲಿ ಪಂಜಿಗಳಿರುತ್ತವೆ. ಹೀಗೆ ಸಂಚಾರ ಮಾಡುವಾಗ ಊರಿನ ಎಲ್ಲ ವರ್ಗಗಳ ಮನೆಗಳಿಗೆ ತೆರಳಿ ಪೂಜೆಗೊಳ್ಳುವ ದೇವರು ಮೊದಲು ಅಗಸರ ಮತ್ತು ಗಾಣಿಗರ ಮನೆಗಳಿಗೆ ಹೋಗುವುದರ ಅರ್ಥ, ಕಾಯಕವನ್ನ ದೇವರೆಂದು ನಂಬಿದವರ ಮನೆಗೆ ಹೋಗುವುದನ್ನ ಗಮನಿಸಬೇಕಾಗುತ್ತೆ. ನಂತರ ಉಳಿದ ಪ್ರತಿಷ್ಠಿತರ ಮನೆಗಳಿಗೆ, ಭಕ್ತರ ಮನೆಗಳಿಗೆ ದೇವತೆ ತೆರಳುತ್ತಾಳೆ. ಹೀಗೆ ಹೋಗುವಾಗ ದೇವಿ ಹೆಜ್ಜೆ ಇಡಲು ಹಿಂದು ಮುಂದು ನೋಡುತ್ತಾಳೋ ಅಲ್ಲಿ ದುಷ್ಟಶಕ್ತಿ ಇರುತ್ತೆ ಅನ್ನೋ ನಂಬಿಕೆ ಜನರಲ್ಲಿದೆ.

ಜಾತ್ರೆಯ ದಿನದ ಸಂಭ್ರಮ:

ಇನ್ನು ಅಮಾವಸ್ಯೆಯ ದಿನ ದೇವಸ್ಥಾನದಲ್ಲಿ ಭಕ್ತರಿಂದ ತುಂಬಿತುಳುಕುತ್ತಿರುತ್ತೆ. ಈ ವೇಳೆ ಪೂಜೆ, ಪುನಸ್ಕಾರ, ಹರಕೆ ತೀರಿಸುವುದು, ಹರಕೆ ಕಟ್ಟಿಕೊಳ್ಳುವುದು, ಉಡಿ ತುಂಬಿಸುವುದು, ದೇವಿಗೆ ಕಣ್ಣ ಬಟ್ಟು ಮಾಡಿಸುವುದು ಸೇರಿದಂತೆ ವಿಶೇಷತೆಗಳು ನಡೆಯುತ್ತಲೇ ಇರುತ್ತವೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಪ್ರಧಾನ ಅರ್ಚಕನ ಮೈಯನ್ನ ಚೌಡೇಶ್ವರಿ ತುಂಬಿಕೊಳ್ಳುತ್ತಾಳೆ. ಆಗ ಅರ್ಚಕನಿಗೆ ದೇವಿಯ ಮುಖವಾಡ ಧರಿಸಿ, ಹಸಿರು ಸೀರೆ ಉಡಿಸಿ, ಕೈಯಲ್ಲಿ ಖಡ್ಗ ಕೊಡ್ತಾರೆ. ಉಗ್ರಸ್ವರೂಪದಿಂದ ಕೂಡಿರುವ ತಾಯಿ ಭಕ್ತರಿಗೆ ದರ್ಶನ ಕೊಡ್ತಾಳೆ. ವರ್ಷಪೂರ್ತಿ ತನ್ನ ಬಳಿ ಭಕ್ತರನ್ನ ಕರೆಸಿಕೊಳ್ಳುವ ದೇವಿ, ವರ್ಷದಲ್ಲಿ ಒಂದು ದಿನ ಭಕ್ತರ ಬಳಿ ಹೋಗಿ ದರ್ಶನ ಕೊಡುವುದರ ಸಂಕೇತವಾಗಿದೆ ಎನ್ನಲಾಗುತ್ತೆ.

ಈ ವೇಳೆ ದೇವಿಯಿಂದ ಒಂದಿಷ್ಟು ಕಾರ್ಯಗಳು ನಡೆಯುತ್ತವೆ. ಮಜ್ಜಿಗೆ ಮಾಡುವ ಕಾರ್ಯ ಮೊದಲು ನಡೆಯುತ್ತೆ. ಮಜ್ಜಿಗೆ ಕಂಬವೊಂದು ನೆಟ್ಟಿರುತ್ತಾರೆ. ಅಲ್ಲಿ ಬೇವಿನ ತಪ್ಪಲುಗಳಿಂದ ಶೃಂಗರಿಸಲಾಗಿರುತ್ತೆ. ಇಲ್ಲಿಗೆ ಬರುವ ದೇವಿ ಮಜ್ಜಿಗೆ ಮಾಡುವ ನಟನೆ ನಡೆಯುತ್ತೆ. ಇದು ಪಶುಪಾಲನೆ ಹಾಗೂ ಹೈನುಗಾರಿಕೆ ಸಂಕೇತ ಸೂಚಿಸುತ್ತೆ ಅಂತಾರೆ. ನಂತರ ಅಗ್ಗಿ, ಕೆಂಡ ತುಳಿಯುವ ಕಾರ್ಯ. ದೇವಿಯ ಹಿಂದೆ ಭಕ್ತರು ಸಹ ಕೆಂಡ ತುಳಿಯುತ್ತಾರೆ. ಇದರ ಸಂಕೇತ ತಿಳಿಯುವುದಿಲ್ಲ. ತದನಂತರ ಕೋಲಾಟ ಆಡುವುದು. ಚೌಡೇಶ್ವರಿ ತಳವಾರರೊಂದಿಗೆ ಬೃಹತ ಕೋಲುಗಳಿಂದ ಬಡಿದಾಡುತ್ತಾಳೆ. ಅವರನ್ನ ಊರ ಅಗಸಿವರೆಗೂ ಹಿಮ್ಮೆಟ್ಟಿಸಿಕೊಂಡು ಹೋಗ್ತಾಳೆ. ತಳವಾರರು ಇಲ್ಲಿ ಅಸರುಶಕ್ತಿಯನ್ನ ಪ್ರತಿನಿಧಿಸಬಹುದು. ಅವರನ್ನ ತಾಯಿ ಹಿಮ್ಮೆಟ್ಟಿಸುತ್ತಾಳೆ ಅನ್ನೋ ಸಂಕೇತ ಇರಬಹುದು ಎನ್ನಲಾಗುತ್ತೆ. ಇಷ್ಟೆಲ್ಲ ಸಾಹಸವಾದ್ಮೇಲೆ ಪಗಡೆ ಆಡ್ತಾಳೆ. ಕೊನೆಯದಾಗಿ ದೇವಿಯ ಮುಖವಾಡ ಧರಿಸಿದ ಅರ್ಚಕ ಆಡುವ ಮಾತುಗಳು ತಾಯಿಯ ಮಾತುಗಳಾಗಿದ್ದು, ಅವಳು ಹೇಳಿದಂತೆ ನಡೆಯುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಪೂಜೆಗೊಳ್ಳುವ ಚೌಡೇಶ್ವರಿಯ ಆಚರಣೆ, ಅದರ ಹಿಂದಿರುವ ಸಂಕೇತ ಇದೆಲ್ಲವನ್ನು ಹೇಳುತ್ತೆ. ಇದರಲ್ಲಿ ಒಂದಿಷ್ಟು ಮೂಢನಂಬಿಕೆಗಳಿವೆ ಅನ್ನೋ ಜನರು ಸಹ ಇದ್ದಾರೆ. ಅದರ ಮೂಲಕ್ಕೆ ಹೋದಾಗ ನಂಬಿಕೆ ಹಾಗೂ ಮೂಢನಂಬಿಕೆ ಜಟಿಲಗೊಳ್ಳುತ್ತಲೇ ಹೋಗುತ್ತೆ. ಅದೇನೆ ಇರ್ಲಿ, ಬಾದಮಿ ಅಮವಾಸ್ಯೆಯೆಂದು ನಡೆಯುವ ಚೌಡೇಶ್ವರಿ ಜಾತ್ರೆ ತುಂಬಾ ವಿಶೇಷತೆಯಿಂದ ಕೂಡಿರುತ್ತೆ.

ಆಕರಗ್ರಂಥ: ಸಂಶೋಧಕ ಡಾ ಎಂ.ಎಂ ಪಡಶೆಟ್ಟಿ ಅವರ ಅಡಕಲು ಕೃತಿಯಲ್ಲಿನ ‘ಚೌಡಮ್ಮ: ಒಂದು ಗ್ರಾಮದೇವತೆ’ ಅನ್ನೋ ಲೇಖನದಿಂದ.




Leave a Reply

Your email address will not be published. Required fields are marked *

error: Content is protected !!