ದೇಶದಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಜನರಲ್ಲಿ ಸಹಜವಾಗಿ ಆತಂಕ ಮೂಡಿದೆ. ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನ್ ಟೈಸರ್ ಬಳಕೆ ಜೊತೆಗೆ ಆಹಾರ ಪದ್ಧತಿ ಸಹ ಮುಖ್ಯವಾಗಿದ್ದು, ಡಯಟಿಷಿಯನ್ ಪೂರ್ಣಿಮಾ ಹೆಗಡೆ ಅವರ ಜೊತೆ ನಾಗೇಶ ತಳವಾರ ನಡೆಸಿದ ಸಂದರ್ಶನ ಇಲ್ಲಿದೆ…
ಕೋವಿಡ್ 19 ಸೋಂಕಿನಿಂದ ದೂರ ಇರಲು ಆಹಾರ ಪದ್ಧತಿ ಹೇಗಿರಬೇಕು?
ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಹಣ್ಣು, ತರಕಾರಿ ಸೇರಿದಂತೆ ತುಳಸಿ, ಅರಿಶಿಣ, ಬೆಳುಳ್ಳಿ, ಹಸಿಶುಂಠಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹೀಗಾಗಿ ದಿನಕ್ಕೆ ನಾಲ್ಕೈದು ತುಳಸಿ ಎಲೆ ತಿನ್ನುವುದು ಒಳ್ಳೆಯದು.
ಹಿರಿಯರು ಹಾಗೂ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡುವುದು ಒಳ್ಳೆಯದು?
ವಯಸ್ಸಾದವರಿಗೆ ಮೊದಲನೆಯದಾಗಿ ಜೀರ್ಣಶಕ್ತಿ ಕಡಿಮೆ ಇರುತ್ತೆ. ಹಲ್ಲುಗಳ ಸಮಸ್ಯೆ ಇರುತ್ತೆ. ಹೀಗಾಗಿ ಜೀರ್ಣವಾಗುವ ಆಹಾರದ ಜೊತೆಗೆ ಬೇಯಿಸಿದ ತರಕಾರಿ, ಹಾಲಿಗೆ ಒಂದಿಷ್ಟು ಅರಿಶಿಣ ಹಾಕಿ ಕುಡಿಯುವುದು. ಹಸಿಶುಂಠಿ, ಚಕ್ಕೆ, ಲವಂಗ ಹಾಕಿದ ಟೀ(ಹಾಲು ಬರೆಸದ ಟೀ) ದಿನಕ್ಕೆ ಒಮ್ಮೆ ಕುಡಿಬೇಕು. ತರಕಾರಿಗಳನ್ನ ನೀರು ಹಾಕದೆ ಒಂದಿಷ್ಟು ಬೇಯಿಸಿ ತಿನ್ನುವುದು. ಆಗಾಗ ಜ್ಯೂಸ್ ಕುಡಿಯುವುದು. ಸಮಯಕ್ಕೆ ತಕ್ಕಂತೆ ಅಲ್ಪ ಪ್ರಮಾಣದಲ್ಲಿ ಊಟ. ಜಾಸ್ತಿ ಕಲರ್ ಇರುವಂತಹ ತರಕಾರಿ, ಹಣ್ಣು ತಿನ್ನುವುದ್ರಿಂದ ಆ್ಯಂಟಿ ಆ್ಯಕ್ಸಿಜನ್ ನಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತೆ.

ಮಕ್ಕಳಿಗೆ ಹಾಲಿನ ಜೊತೆ ನೀಡುವ ಪೌಡರ್ ನಲ್ಲಿ ರಾಸಾಯನಿಕ ಇರುವುದ್ರಿಂದ ದೇಹ ತೆಗೆದುಕೊಳ್ಳುವುದಿಲ್ಲ. ಅದರ ಬದಲು ಮನೆಯಲ್ಲಿ ಕೊಡುವ ಊಟದಿಂದ ಲಾಭವಿದೆ. ನಿತ್ಯ ಮಾಡುವ ಅಡುಗೆಯಲ್ಲೇ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಅದೆ ತರಕಾರಿ, ಹಣ್ಣುಗಳನ್ನ ಬಳಸಿ ಅಡುಗೆ ಮಾಡಬಹುದು. ಮೊಟ್ಟೆ, ನಾನ್ ವೆಜ್ ಸಹ ಬೇರೆ ರೀತಿಯಲ್ಲಿ ಮಾಡಿ ಕೊಡುವುದು. ಯಾಕಂದ್ರೆ, ಮಕ್ಕಳು ಹೊಸದು ಅಂದ ತಕ್ಷಣ ತಿಂದು ಬಿಡ್ತಾರೆ. ಮಕ್ಕಳಿಗೆ ಮೊಸರು ಕೊಡುವುದು ತುಂಬಾ ಒಳ್ಳೆಯದು. ಪ್ರೊಟಿನ್, ದೇಹಕ್ಕೆ ಬೇಕಾದ ಬ್ಯಾಕ್ಟೇರಿಯಾ ನೀಡುತ್ತೆ. ದೇಹಕ್ಕೆ ಶಕ್ತಿ ಬರುತ್ತೆ. ಹೊಟ್ಟೆ ತಂಪು ಇರುತ್ತೆ. ಇದರ ಜೊತೆಗೆ ಒಂದಿಷ್ಟು ಡ್ರೈ ಪ್ರೂಟ್ಸ್ ಕೊಡುವುದ್ರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ.
ಮಳೆಗಾಲದ ಸಂದರ್ಭದಲ್ಲಿ ದೇಹದಲ್ಲಿ ಉಷ್ಣಾಂಶ ಕಾಪಾಡಿಕೊಳ್ಳುವುದು ಹೇಗೆ?
ಮಸಾಲಾ ಪದಾರ್ಥದ ಆಹಾರ, ಸ್ವಲ್ಪ ಖಾರ ಇರುವ(ಹಸಿಮೆಣಸು ಅಲ್ಲ. ಘಾಟಿಯಿರುವ ಮಸಾಲಾ ಪದಾರ್ಥ) ಊಟ. ಸೋಂಪು, ಜೀರಿಗೆ, ದನಿಯಾ ಪುಡಿಮಾಡಿ ಬಿಸಿನೀರಿನಲ್ಲಿ ಕುದಿಸಿ ದಿನಾ ಬೆಳಗ್ಗೆ ಕುಡಿಯುವುದ್ರಿಂದ, ದೇಹದಲ್ಲಿ ಆಗ್ತಿರುವ ಏರಿಳಿತದ ಸಮಸ್ಯೆಯಾಗುವುದಿಲ್ಲ. ಇವಾಗ ಕರಿದ ಪದಾರ್ಥ, ಜಂಕ್ ಫುಡ್ ತಿನ್ನುವುದು ಜಾಸ್ತಿ. ಅದರ ಬದಲು ಹುರಿದು ತಿನ್ನುವುದು ಒಳ್ಳೆಯದು.
ಕಡ್ಲೆಬೀಜ, ಅರಳೆಣ್ಣೆ, ಕೊಬ್ಬರಿ ಎಣ್ಣೆ ಬಳಸುವುದು ಒಳ್ಳೆಯದು. ಈ ಎಣ್ಣೆಗಳಿಂದ ಫ್ಯಾಟ್ ಕಡಿಮೆಯಾಗುತ್ತೆ. ಇದಕ್ಕೆ ಹೆಚ್ ಬಿಎಲ್, ಎಲ್ ಡಿಎಲ್ ಎಂದು ಕರೆಯುತ್ತೇವೆ. ಎಲ್ ಡಿಎಲ್ ದೇಹದಲ್ಲಿ ಹೆಚ್ಚಾದಾಗ ಕೊಬ್ಬಿನಾಂಶ, ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತೆ.
ಆಹಾರದ ಜೊತೆಗೆ ವರ್ಕೌಟ್ ಮಾಡುವುದಾದರೆ..
ಊಟ, ನಿದ್ದೆ, ನೀರು, ಚಟುವಟಿಕೆ ಸರಿಯಾಗಿರಬೇಕು. ಅಂದಾಗ ಮಾತ್ರ ನಾವು ಎಷ್ಟು ತಿನ್ನುತ್ತೇವೋ ಅಷ್ಟು ಜೀರ್ಣವಾಗುತ್ತೆ. ದಿನಕ್ಕೆ 2.5-3 ಲೀಟರ್ ನೀರು ಕುಡಿಯುವುದು ತುಂಬಾ ಮುಖ್ಯ. ಇದ್ರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ. ಇದರಲ್ಲಿ ಊಟ ಮತ್ತು ನಿದ್ದೆ ತುಂಬಾ ಮುಖ್ಯ. 6-8 ಗಂಟೆ ನಿದ್ದೆ ಮಾಡಬೇಕು. ಬೆಳಗ್ಗೆ ಬೀಳುವ ಸೂರ್ಯನ ಕಿರಣ ಒಳ್ಳೆಯದು. 6.30 ರಿಂದ 9.30ರ ಒಳಗಿನ ಬಿಸಿಲು ವಿಟಮಿನ್ ಡಿ ನೀಡುತ್ತೆ. ವಿಟಮಿನ್ ಡಿ ಕರೋನಾ ಟೈಂನಲ್ಲಿ ತುಂಬಾ ಅವಶ್ಯಕ. ಹೀಗಾಗಿ 15 ರಿಂದ 20 ನಿಮಿಷ ಒಂದಿಷ್ಟು ವರ್ಕೌಟ್ ಮಾಡಬೇಕು. ಸಾಧ್ಯವಾದಷ್ಟು ಬೆಳಗ್ಗಿನ ಬಿಸಿಲಿಗೆ ವರ್ಕೌಟ್ ಮಾಡುವುದು ಒಳ್ಳೆಯದು.
ಹೀಗೆ ಒಂದಿಷ್ಟು ಆಹಾರ ಪದ್ಧತಿಯನ್ನ ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಕರೋನಾ ಟೈಂನಲ್ಲಿ ಸೋಂಕಿನಿಂದ ದೂರ ಇರಬಹುದು.