ಜಿಲ್ಲಾ ಕೇಂದ್ರ ಸಿಂದಗಿನಾ..? ಇಂಡಿನಾ..?

324

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ಒಂದು ಕಾಲದಲ್ಲಿ ಗುಮ್ಮಟನಗರಿ ಜಿಲ್ಲೆಯ ಅತಿದೊಡ್ಡ ತಾಲೂಕು ಎಂದು ಗುರುತಿಸಿಕೊಂಡಿದ್ದು ಸಿಂದಗಿ. ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ವಿಶಿಷ್ಟ ಸ್ಥಾನ ಪಡೆದಿತ್ತು. ಕಾಲಾನುಕ್ರಮದಲ್ಲಿ ಎಲ್ಲವೂ ಬದಲಾಗುತ್ತಾ ಬಂದಿತು. ಇದರ ಪರಿಣಾಮ ತಾಲೂಕು ಇಬ್ಭಾಗವಾಗುತ್ತಾ ಹೋಯಿತು.

ಸಿಂದಗಿಯಿಂದ ದೇವರ ಹಿಪ್ಪರಗಿ ಪ್ರತ್ಯೇಕವಾಯಿತು. ಆಲಮೇಲ ಪ್ರತ್ಯೇಕವಾಯಿತು. ತಾಲೂಕಿನ ಸಾಕಷ್ಟು ಗ್ರಾಮಗಳು ನೂತನ ತಾಲೂಕು ತಾಳಿಕೋಟಿಗೆ ಸೇರಿದವು. ಎಸಿ ಕಚೇರಿ, ಡಿವೈಎಸ್ಪಿ ಕಚೇರಿ ಇಂಡಿ ಪಾಲಾದವು. ಜಿಲ್ಲೆಯಲ್ಲಿ ಅತಿ ಹೆಚ್ಚು ವಾಹನಗಳ ನೋಂದಣಿಯಾಗುವುದು ಸಿಂದಗಿ ಭಾಗದಿಂದ. ಆದರೆ, ಇಲ್ಲೊಂದು ಆರ್ ಟಿಒ ಕಚೇರಿ ಇಲ್ಲ. ಸ್ವತಂತ್ರ ಬಂದು 75 ವರ್ಷ ಕಳೆದರೂ ರೈಲಿನ ಸದ್ದು ಕೇಳಿಸುತ್ತಲೇ ಇಲ್ಲ. ರಾಜಕೀಯ ಕಾದಾಟ ಬಳಿಕ ಕೊನೆಗೂ ಆಡಳಿತ ಸೌಧ ನಿರ್ಮಾಣವಾಗುತ್ತಿದೆ. ಸೂಪರ್ ಮಾರ್ಕೆಟ್ ಇರಲಿ ಒಂದೊಳ್ಳೆ ತರಕಾರಿ ಮಾರುಕಟ್ಟೆ ಇಲ್ಲದೆ ಹೋಗಿರುವ ಸಿಂದಗಿ ಶೈಕ್ಷಣಿಕ ಕ್ರಾಂತಿ ಮಾಡಿದರೂ ಮೆಡಿಕಲ್, ಇಂಜನಿಯರಿಂಗ್, ಕೃಷಿ, ತೋಟಗಾರಿಕೆ ಕಾಲೇಜುಗಳನ್ನೇ ಹೊಂದಿಲ್ಲ. ಹೀಗೆ ಹಲವು ಇಲ್ಲಗಳ ನಡುವೆ ಕುಂಟುತ್ತಾ ಹೊರಟಿರುವ ಸಿಂದಗಿಗೆ ಮತ್ತೊಂದು ಹಿನ್ನಡೆಯಾಗುವ ಕಾಲ ಬಂದಿದೆ. ಅದುವೇ ಇಂಡಿ ಜಿಲ್ಲಾ ಕೇಂದ್ರವನ್ನಾಗಿಸಿ ಸಿಂದಗಿ ಸೇರ್ಪಡೆಗೊಳಿಸುವ ರಾಜಕೀಯ ತಂತ್ರಗಾರಿಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇಂಡಿ ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ರಾಜಕೀಯ ಚರ್ಚೆ ಜೋರಾಗಿದೆ. ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಏನು ತೀರ್ಮಾನವಾಗಿದೆ ಎನ್ನುವುದು ಗೊತ್ತಿಲ್ಲ. ಆದರೆ, ಸ್ಥಳೀಯವಾಗಿ ಈ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಒಂದು ವೇಳೆ ಇಂಡಿ ಜಿಲ್ಲಾ ಕೇಂದ್ರವಾದರೆ ಸಿಂದಗಿ ಮಾತ್ರ ಸೇರ್ಪಡೆ ಮಾಡಬಾರದು. ಮಾಡುವುದಾದರೆ ಸಿಂದಗಿಯನ್ನೇ ಪ್ರತ್ಯೇಕ ಜಿಲ್ಲಾ ಕೇಂದ್ರ ಮಾಡಿ ಇಲ್ಲವೇ ಈಗಿರುವಂತೆ ವಿಜಯಪುರದೊಂದಿಗೆ ಇರಲಿ ಬಿಡಿ ಎನ್ನುವ ಕೂಗು ಏಳುತ್ತಿದೆ.

ಸಿಂದಗಿ ಬಹುಮುಖ್ಯವಾಗಿ ಅಭಿವೃದ್ಧಿ ಹೊಂದಬೇಕಿದೆ. ಇಂದಲ್ಲ ನಾಳೆ ಜಿಲ್ಲಾ ಕೇಂದ್ರವಾಗುತ್ತೆ. ಆದರೆ, ರಾಜಕೀಯ ದಾಳಕ್ಕೆ ಬಲಿಯಾಗಿ ಇಂಡಿಯೊಂದಿಗೆ ಸೇರ್ಪಡೆಯಾದರೆ ಇದಕ್ಕಿಂತ ದೊಡ್ಡ ಹಿನ್ನಡೆ ಮತ್ತೊಂದು ಇಲ್ಲ ಎನ್ನುವ ಮಾತುಗಳು ತಾಲೂಕಿನ ಹಿರಿಯರು, ಮುಖಂಡರು, ಯುವ ಪಡೆಯಿಂದ ಕೇಳಿ ಬರುತ್ತಿದೆ. ಹಿರಿಯ ರೈತ ಹೋರಾಟಗಾರರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಅವರು, ಸಿಂದಗಿಯನ್ನು ಜಿಲ್ಲಾ ಕೇಂದ್ರ ಮಾಡುವ ವಿಚಾರದ ಕುರಿತು ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್ ಗೆ ಸಲ್ಲಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಾವು ಪಡೆದುಕೊಳ್ಳುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!