ಮನಮಿಡಿಯುತ್ತೆ ಹಸಿ ಪಾರಿವಾಳ ತಿಂದವಳ ಕಹಾನಿ

445

ರಾಂಚಿ: ಈ ಹಸಿವು ಅನ್ನೋದು ಇದೆಯಲ್ಲ, ನಿಜಕ್ಕೂ ಒಮ್ಮೊಮ್ಮೆ ಕ್ರೂರಿಯನ್ನಾಗಿ ಮಾಡುತ್ತೆ. ತುತ್ತು ಅನ್ನಕ್ಕಾಗಿ ಮನುಷ್ಯನ ಕೈಯಿಂದ ಏನೆಲ್ಲ ಮಾಡಿಸುತ್ತೆ. ಬುದ್ದಿ ಸರಿಯಿರುವ ಅದೆಷ್ಟೋ ಜನಗಳು ಹಸಿದ ಹೊಟ್ಟೆಗಾಗಿ ಪಡಬಾರದ ಪಾಡು ಪಡ್ತಾರೆ. ಆದ್ರೆ, ಮಾನಸಿಕತೆಯಿಂದ ಬಳಲುತ್ತಿರುವವರ ಪಾಡು ಏನು ಹೇಳಿ. ಈ ಹಸಿವು ಎಷ್ಟೊಂದು ಕೆಟ್ಟದ್ದು ಅನ್ನೋದಕ್ಕೆ ಜಾರ್ಖಂಡ್ ನ ರಾಂಚಿಯೊಂದರಲ್ಲಿ ನಡೆದ ಮನಕಲಕುವ ಘಟನೆ ಸಾಕ್ಷಿ.

ರಿಮ್ಸ್ (ರಾಜೇಂದ್ರ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯಲ್ಲಿ ಮಾನಸಿಕ ಅಸ್ಥವ್ಯಸ್ಥೆಯೊಬ್ಬಳು ಹಸಿವು ತಾಳಲಾರದೆ ಪಾರಿವಾಳವೊಂದು ಕೊಂದು ತಿನ್ನುತ್ತಿರುವ ದೃಶ್ಯ ನೋಡುವರ ಎದೆಯನ್ನ ಒಂದು ಕ್ಷಣ ಝಲ್ ಎನಿಸುತ್ತೆ. ಆಕೆಯ ಸ್ಥಿತಿ ಕಂಡಾಕ್ಷಣ ಕಣ್ಣಂಚಲ್ಲಿ ನೀರು ಜಿನುಗುತ್ತೆ. ನಮ್ಮ ವ್ಯವಸ್ಥೆಯ ವಿರುದ್ಧ ಆಕ್ರೋಶ ಸಹ ಬುಗಿಲೇಳುತ್ತೆ.

ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ಹತ್ತಿರ ಈ ದೃಶ್ಯ ಕಂಡು ಬಂದಿದೆ. ಈಕೆ ಹೋಗಿ ಬರುವವರಲ್ಲಿ ಅನ್ನಕ್ಕಾಗಿ ಅಂಗಲಾಚಿದ್ದಾಳೆ. ಬೇಡಿದ್ದಾಳೆ. ಅತ್ತಿದ್ದಾಳೆ. ಆದ್ರೆ, ಸ್ವಾರ್ಥಿ ಮನುಷ್ಯನ ಎದೆಗೆ ಆಕೆಯ ಆರ್ಥನಾದ ಇಳಿದಿಲ್ಲ. ಹೀಗಾಗಿ ನೋಡಿ ನೋಡದಂತೆ ಸುಮ್ಮನೆ ಹೋಗಿದ್ದಾರೆ. ಆಗ ಪಕ್ಕದಲ್ಲಿ ಓಡಾಡ್ತಿದ್ದ ಪಾರಿವಾಳ ಆಕೆಯ ಕಣ್ಣಿಗೆ ಬದ್ದಿದೆ. ಅದಕ್ಕೇನು ಗೊತ್ತು ನಾನು ಇವಳ ಹಸಿವು ನೀಗಿಸುತ್ತೇನೆ. ಇದು ನನ್ನ ಕೊನೆಯ ಹಾರಾಟವೆಂದು. ಆಕೆಯ ಕೈಗೆ ಸಿಕ್ಕಿದೆ. ಹಿಡಿದು ತಿಂದಿದ್ದಾಳೆ. ಇದಕ್ಕೆ ಸೃಷ್ಟಿಕರ್ತ ಕಾರಣನೋ.. ಆಸ್ಪತ್ರೆಯಲ್ಲಿನ ಮನುಷ್ಯತ್ವ ಇಲ್ಲದ ವ್ಯವಸ್ಥೆ ಕಾರಣವೋ.. ಹಸಿವು ಎಂದಾಗ ಅನ್ನ ನೀಡದೆ ದೂರ ಸರಿದವರು ಕಾರಣವೋ ಗೊತ್ತಿಲ್ಲ. ಒಟ್ನಲ್ಲಿ ಪಾರಿವಾಳ ರೂಪಕದಲ್ಲಿ ಮನುಷ್ಯತ್ವ ಸತ್ತಿದೆ.

ಈ ಬಗ್ಗೆ ರಿಮ್ಸ್ ನ ನಿರ್ದೇಶಕ ಡಾ.ಡಿ.ಕೆ ಸಿಂಗ್ ಅವರನ್ನ ಕೇಳಿದ್ರೆ, ಮನುಷ್ಯನ ಸಹನೆಯ ನಡುವೆಯೂ ಇಂತಹ ರೋಗಿಗಳಿಗೆ ಸಹಾಯ ಮಾಡಲು ಆಗುವುದಿಲ್ಲ. ಇಂತಹ ರೋಗಿಗಳ ಕಾರಣದಿಂದ ರಿಮ್ಸ್ ನಲ್ಲಿ ಅವ್ಯವಸ್ಥೆಯಿದೆ ಅಂತಾ ಹೇಳ್ತಾರೆ. ಇವರ ಮಾತುಗಳನ್ನ ಕೇಳಿದ್ರೆ ಹೃದಯವಿಲ್ಲದ ಮನುಷ್ಯ ಡಾಕ್ಟರ್ ಹೆಸರಿನಲ್ಲಿ ಬಡರೋಗಿಗಳ ಬಾಳಲ್ಲಿ ಚೆಲ್ಲಾಟವಾಡ್ತಿದ್ದಾನೆ ಅನ್ನೋದು ಗೋಚರಿಸುತ್ತೆ.

ಜಾರ್ಖಂಡ್ ನ ಅತಿ ದೊಡ್ಡ ಆಸ್ಪತ್ರೆಯಲ್ಲಿಯೇ ಇಂತಹದೊಂದು ಹೃದಯವಿದ್ರಾವಕ ದೃಶ್ಯ ಕಾಣಿಸಿದೆ ಅಂದ್ಮೇಲೆ, ಸಣ್ಣಪುಟ್ಟ ಆಸ್ಪತ್ರೆಯಲ್ಲಿನ ಸ್ಥಿತಿ ಇನ್ನೂ ಘೋರವಾಗಿರುತ್ತೆ. ಭಾರತದಲ್ಲಿನ ಹಸಿವು, ಬಡತನ, ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಹೇ ವಿಧಿ ನಿನಗೊಂದು ಮನವಿ.. ಯಾರಿಗೂ ಈ ಪರಿಸ್ಥಿತಿ ಸೃಷ್ಟಿಸಬೇಡ.




Leave a Reply

Your email address will not be published. Required fields are marked *

error: Content is protected !!