ಕನ್ನಡ ಕವಿ ಮತ್ತು ಸಾಹಿತಿಗಳ ಬಗ್ಗೆ ಹೆಮ್ಮೆ ಇದೆ: ಡಾ.ವೈರಮುತ್ತು

507

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಚೆನ್ನೈ: ಅನುವಾದದ ಮುಖೇನ ಇನ್ನೊಂದು ಭಾಷೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಇದರಿಂದ ಭಾಷಾ ಸಾಮರಸ್ಯ ಉಂಟಾಗುತ್ತೆ. ಅನುವಾದಗಳಿಂದಾಗಿ ನಾನು ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದೇನೆ. ಹೀಗಾಗಿ ಕನ್ನಡ ಕವಿ, ಸಾಹಿತಿಗಳ ಬಗ್ಗೆ ಹೆಮ್ಮೆ ಇದೆ ಎಂದು ಪದ್ಮಭೂಷಣ ಪುರಸ್ಕೃತ ಖ್ಯಾತ ತಮಿಳು ಕವಿ, ಲೇಖಕ, ಚಿತ್ರ ಸಾಹಿತಿ ಡಾ.ವೈರಮುತ್ತು ಅವರು ಹೇಳಿದ್ದಾರೆ.

ಅವರ 70ನೇ ಹುಟ್ಟು ಹಬ್ಬದ ನಿಮಿತ್ತ ಕನ್ನಡದ ಬರಹಗಾರರೊಂದಿಗೆ ಅವರ ನಿವಾಸದಲ್ಲಿ ಜುಲೈ 14ರಂದು ನಡೆಸಿದ ಸಂವಾದದ ವೇಳೆ ಈ ರೀತಿ ಹೇಳಿದರು. ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿ ಅನೇಕರನ್ನು ಓದಿಕೊಂಡಿದ್ದೇನೆ. ಕಂಬಾರರು ತಮ್ಮ ನಾಟಕಗಳಲ್ಲಿ ಕವಿತ್ವ ಹಾಗೂ ಗ್ರಾಮೀಣ ಸೊಗಡನ್ನು ತುಂಬಾ ಚೆನ್ನಾಗಿ ತರುತ್ತಾರೆ. ಹೀಗಾಗಿ ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ನನಗೆ ತಿಳಿದ ಹಾಗೇ ತಮಿಳಿಗರು ಕನ್ನಡ ಸಾಹಿತ್ಯವನ್ನು ತಿಳಿದುಕೊಂಡಿದ್ದಕ್ಕಿಂತ ಕನ್ನಡಿಗರು ತಮಿಳು ಸಾಹಿತ್ಯವನ್ನು ಹೆಚ್ಚಾಗಿ ತಿಳಿದುಕೊಂಡಿದ್ದಾರೆ. ಹೀಗಾಗಿ ನನಗೆ ಪ್ರೀತಿಯ ಮತ್ಸರದ ಜೊತೆಗೆ ಕನ್ನಡಿಗರ ಬಗ್ಗೆ  ಹೆಮ್ಮೆಇದೆ ಅಂತಾ ಹೇಳಿದರು.

ಕನ್ನಡದ ಬರಹಗಾರರು ಹಾಗೂ ಅಭಿಮಾನಿಗಳೊಂದಿಗೆ ಡಾ.ವೈರಮುತ್ತು ಅವರು.

ಹೀಗೆ ಕನ್ನಡ, ತಮಿಳು ಸಾಹಿತ್ಯದ ಜೊತೆ ಜೊತೆಗೆ ಅವರ ಹೋರಾಟದ ಬದುಕು, ಬರವಣಿಗೆ, ಚಿತ್ರ ಸಾಹಿತ್ಯದ ಕುರಿತು ಮಾತನಾಡಿದರು. ಸಂವಾದದಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ  ಪ್ರಾಧ್ಯಾಪಕಿ ಡಾ.ಮಲರ್ ವಿಳಿ.ಕೆ, ಶಿವಮೊಗ್ಗದ ಮಲಯಾಳಂ-ಕನ್ನಡ ಅನುವಾದಕರಾದ ಪ್ರಭಾಕರನ್, ಮಂಗಳೂರಿನ ಪತ್ರಕರ್ತ, ಕವಿ ವಿಲ್ಸನ್ ಕಟೀಲ್, ಬೆಂಗಳೂರಿನ ತಮಿಳು ಕವಿ ರಾಜಾ ಮೊಹಮ್ಮದ್, ವಿಜಯಪುರದ ಪತ್ರಕರ್ತ, ಬರಹಗಾರ ನಾಗೇಶ ತಳವಾರ, ಕನ್ನಡ ಸಿನಿಮಾ ನಿರ್ದೇಶಕ ಸೇಂದಿಲ್ ಭಾಗವಹಿಸಿದ್ದರು.

ಈ ವೇಳೆ ವೈರಮುತ್ತು ಅವರ ಅಭಿಮಾನಿಗಳಾದ ಸೇಂದಿಲ್ ಕುಮಾರ್, ವಿವೇಕ್, ದೀಪಿಕಾ, ದಕ್ಷಿತ್, ಭಾರತಿ, ನರ್ಮದ, ಅರುಳ್ ನಾಧನ್ ಸೇರಿ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!