ಸಿಂದಗಿ ಲೋಕಲ್ ಫೈಟ್: ರಂಗೇರುತ್ತಿದೆ ಚುನಾವಣೆ ಕಣ

510

ಪ್ರಜಾಸ್ತ್ರ ವಿಶೇಷ ವರದಿ:

ಸಿಂದಗಿ: ಪಟ್ಟಣದ 23 ವಾರ್ಡ್ ಗಳಿಗೆ ಫೆಬ್ರವರಿ 9ಕ್ಕೆ ಚುನಾವಣೆ ನಡೆಯಲಿದೆ. ಸದಸ್ಯರ ಅವಧಿ ಮುಗಿದು 11 ತಿಂಗಳ ಬಳಿಕ ಎಲೆಕ್ಷನ್ ನಡೆಯುತ್ತಿದೆ. ಇದಕ್ಕಾಗಿ ಹಸಿದ ಹುಲಿಗಳಂತೆ ಕಾದು ಕುಳ್ತಿದ್ದ ಲೋಕಲ್ ಲೀಡರ್ ಗಳು ಅಖಾಡಕ್ಕೆ ಇಳಿದಿದ್ದಾರೆ. ಈ ಹಿಂದೆ ಅಧಿಕಾರದ ರುಚಿ ನೋಡಿದ ಅನುಭವಿ ನಾಯಕರು ಹಾಗೂ ಮುಂದೆ ಅಧಿಕಾರಕ್ಕೆ ಬರಬೇಕು ಅನ್ನೋ ಯುವ ಮುಖಗಳು ಹೊಸ ಹುರುಪಿನಲ್ಲಿ ಓಡಾಡ್ತಿವೆ. ಹೀಗಾಗಿ ದಿನದಿಂದ ದಿನಕ್ಕೆ ಚುನಾವಣೆಯ ಕಣ ರಂಗೇರುತ್ತಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಪಿ ನಾಯಕರು ಗೆಲುವಿಗೆ ಪ್ಲಾನ್, ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ಆಯಾ ಪಕ್ಷದ ಮುಖಂಡರು, ಯುವ ಕಾರ್ಯಕರ್ತರು ಟಿಕೆಟ್ ಪಡೆಯಲು ಪಕ್ಷದ ಕಚೇರಿ, ನಾಯಕರ ಹಿಂದೆ ಮುಂದೆ ಓಡಾಡ್ತಿದ್ದಾರೆ. ಇದರ ಜೊತೆಗೆ ಪಕ್ಷೇತರರಾಗಿ ಅದೃಷ್ಟಪರೀಕ್ಷೆಗೆ ಇಳಿಯಲು ಸಜ್ಜಾಗ್ತಿರುವವರೆಲ್ಲ ಮತದಾರರನ್ನು ಸೆಳೆಯಲು ಏನು ಮಾಡಬೇಕು ಅನ್ನೋದರ ಕುರಿತು ತಮ್ಮ ಆಪ್ತರೊಂದಿಗೆ ಭರ್ಜರಿಯಾಗಿ ಚರ್ಚೆ ನಡೆಸಿದ್ದಾರೆ. ಇನ್ನು ಕೆಲವರು ಆ ಮನಿ ಪಿ ಈ ಮನಿ ಪಿ ಎಂದು ಎಲ್ಲ ಕಡೆ ಸುತ್ತಾಡಿ ಎಲ್ಲಿ ವಾತಾವರಣ ಹೇಗಿದೆ? ಎಲ್ಲಿ ತಮಗೆ ಲಾಭವಾಗುತ್ತೆ? ಯಾರು ಈ ಬಾರಿ ನಮಗೆ ಕೈ ಹಿಡಿಯುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿರುವುದು ಕಂಡು ಬರ್ತಿದೆ.

ಸಾಂದರ್ಭಿಕ ಚಿತ್ರ

ನಾಮಪತ್ರ ಸಲ್ಲಿಸುವ ಡೇಟ್ ಹತ್ತಿರ ಬರ್ತಿದ್ದಂತೆ ಕೆಲವರಲ್ಲಿ ಟೆನ್ಷನ್, ಇನ್ನು ಕೆಲವರಲ್ಲಿ ಹುರುಪು ಬಂದಿದೆ. ಈಗಾಗ್ಲೇ ತಮಗೆ ಟಿಕೆಟ್ ಫಿಕ್ಸ್ ಎಂದುಕೊಂಡವರು ಯಾವುದೇ ತಲೆನೋವು ಇಲ್ಲದೆ ಆರಾಮಾಗಿದ್ದು, ಗೆಲ್ಲಲು ಒಂದಿಷ್ಟು ಪ್ಲಾನ್ ಮಾಡ್ತಿದ್ದಾರೆ. ಈ ಬಾರಿ ಏನಾದ್ರೂ ಮಾಡಿ ಪುರಸಭೆಯನ್ನ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಒಮ್ಮೆಯಾದ್ರೂ ಲೋಕಲ್ ಆಡಳಿತದ ರುಚಿ ನೋಡಬೇಕು ಅಂತಾ ಬಿಜೆಪಿ ಲೆಕ್ಕಾಚಾರ ಹಾಕ್ತಿದೆ. ಪುರಸಭೆ ಹುಟ್ಟಿದ ದಿನದಿಂದ ಅಧಿಕಾರದ ರುಚಿ ಉಂಡಿರುವ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್ ಕೊಡಲು ನೋಡ್ತಿದೆ. ಇತ್ತ ತೆನೆ ಹೊತ್ತ ಮಹಿಳೆ ನಿಮ್ಮಿಬ್ಬರಿಗೂ ಠಕ್ಕರ್ ಕೊಡಲು ರೆಡಿಯಾಗಿದ್ದೇನೆ ಅಂತಾ ಹೇಳ್ತಿದ್ದಾಳೆ. ಯಾಕಂದ್ರೆ ಕ್ಷೇತ್ರದ ಶಾಸಕರು ನಮ್ಮವರು ಅನ್ನೋದು ಆಕೆಗೆ ಧೈರ್ಯ ತಂದಿದೆ. ಇವರ ಜೊತೆಗೆ ನಾನು ಒಂದು ಕೈ ನೋಡುತ್ತೇನೆ ಎಂದು ಆನೆ ಎಂಟ್ರಿಯಾಗ್ತಿದೆ. ಇವರೆಲ್ಲರ ಜೊತೆ ನಮ್ಮದು ಒಂದು ಝೆಂಡಾ ಹಾರಾಡಲಿ ಅನ್ನೋದು ಪಕ್ಷೇತರರಾಗಿ ಸ್ಪರ್ಧಿಸಲು ಸಜ್ಜಾದವರ ಆಸೆ. ಈ ಎಲ್ಲ ಕಾರಣಗಳಿಂದ ಸಿಂದಗಿ ಪುರಸಭೆ ಚುನಾವಣೆ ಅಖಾಡ ದಿನದಿಂದಕ್ಕೆ ಕಾವು ಪಡೆದುಕೊಳ್ತಿದ್ದು ಜನರಲ್ಲಿ ಕುತೂಹಲ ಮೂಡಿಸಿದ್ದು ಮಾತ್ರ ಸುಳ್ಳಲ್ಲ.




Leave a Reply

Your email address will not be published. Required fields are marked *

error: Content is protected !!