ಪಕ್ಷ ಒಂದು.. ಸುದ್ದಿಗೋಷ್ಠಿ ಎರಡು ಯಾಕೆ..?

698

ಪ್ರಜಾಸ್ತ್ರ ವಿಶೇಷ ವರದಿ:

ಸಿಂದಗಿ: ಪಟ್ಟಣದಲ್ಲಿ 23 ವಾರ್ಡ್ ಗಳ ಪುರಸಭೆಯ ಚುನಾವಣೆಯ ಕಾವು ಜೋರಾಗಿದೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿಗೆ ಇಳಿಯಲು ಸಜ್ಜಾಗ್ತಿದ್ದಾರೆ. ಇದರ ನಡುವೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ ನಾಯಕರ ನಡುವಿನ ಮುಸುಕಿನ ಗುದ್ದಾಟ ಎಲೆಕ್ಷನ್ ಹೊತ್ತಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ ಹಾಗೂ ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳೂರ ಅವರ ನಡುವೆ ಹೊಂದಾಣಿಕೆ ಕಂಡು ಬರ್ತಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಒಂದು ಪಕ್ಷದ ಎರಡು ಪ್ರತ್ಯೇಕ ಸುದ್ದಿಗೋಷ್ಠಿ ಸಾಕ್ಷಿಯಾಗಿವೆ.

ಶರಣಪ್ಪ ಸುಣಗಾರ

ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಶರಣಪ್ಪ ಸುಣಗಾರ ಅವರು ಜನವರಿ 15ರಂದು ಪತ್ರಿಕಾಗೋಷ್ಠಿ ಕರೆದು ಲೂಟಿ ಮಾಡಿದವರಿಗೆ ಟಿಕೆಟ್ ನೀಡುವುದಿಲ್ಲವೆಂದು ಹೇಳಿದ್ದಾರೆ. ಅಲ್ದೇ, ಟಿಕೆಟ್ ಬಯಸುವ ಅಭ್ಯರ್ಥಿಯ ಮಾನದಂಡದ ಬಗ್ಗೆ ಮಾತ್ನಾಡಿದ್ದಾರೆ. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಾಜರಿರಲಿಲ್ಲ. ಈ ಬಗ್ಗೆ ಅವರನ್ನ ಕೇಳಿದ್ರೆ, ಮಾಜಿ ಶಾಸಕರು ಕರೆದ ಪತ್ರಿಕಾಗೋಷ್ಠಿ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಹೇಳ್ತಿದ್ದಾರೆ. ಅಲ್ದೇ, ಪಕ್ಷದ ಕಚೇರಿಯಿಂದ ನಡೆಸುವ ಪತ್ರಿಕಾಗೋಷ್ಠಿ ಅಧಿಕೃತವೆಂದು ಹೇಳಿದ್ದಾರೆ. ಹಾಗಾದ್ರೆ, ಇದು ನಾಯಕರಿಬ್ಬರ ನಡುವಿನ ಸಂವಹನದ ಕೊರತೆಯೋ ಅಥವ ಅವರಿಬ್ಬರ ನಡುವೆ ತಿಕ್ಕಾಟ ನಡೆಯುತ್ತಿದೆಯಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಒಂದ್ಕಡೆ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದು ಇಬ್ಬರು ನಾಯಕರು ಹೇಳ್ತಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೀವಿ ಎಂದು ಹೇಳ್ತಾರೆ. ಆದ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನವರಿ 16ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರ ಗೈರು ಎದ್ದು ಕಾಣ್ತಿತ್ತು. ಇದು ಮತ್ತಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರತ್ಯೇಕ ಸುದ್ದಿಗೋಷ್ಠಿ ಬಗ್ಗೆ ಮಾಜಿ ಶಾಸಕರನ್ನ ಕೇಳಿದ್ರೆ, ನಾವು ಬ್ಲಾಕ್ ಕಾಂಗ್ರೆಸ್ ಕಮಿಟಿಯೆಂದು ಸುದ್ದಿಗೋಷ್ಠಿ ಕರೆದಿದ್ದೇವೆ. ನಾನು 15 ವರ್ಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, 12 ವರ್ಷ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷನಾಗಿದ್ದೀನಿ. ಅವನು ನಮ್ಮವನು ಎಂದುಕೊಂಡು ಕಮಿಟಿಗಿ ಹಾಕಿಕೊಂಡಿನಿ ಅಂತಾ ಹೇಳ್ತಿದ್ದಾರೆ. ಅಲ್ದೇ, ನಮ್ಮಲಿ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯವೆಲ್ಲವೆಂದು ಮಾಜಿ ಶಾಸಕರು ಸಹ ಹೇಳ್ತಿದ್ದಾರೆ. ಆದ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕರೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರು ಕಾಣಿಸಿಕೊಂಡಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ ಮೂಡಿಸ್ತಿದೆ. ಅಲ್ದೇ, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಗುದ್ದಾಟ ನಡೆಸಿದ್ದಾರೆ. ಇದು ನಾಯಕರ ಗಮನಕ್ಕೆ ಇಲ್ವಾ ಅನ್ನೋ ಮಾತುಗಳು ಕೇಳಿ ಬರ್ತಿವೆ.

ವಿಠ್ಠಲ ಕೊಳೂರ

ಹೇಗಾದ್ರು ಮಾಡಿ ಈ ಬಾರಿ ಪುರಸಭೆಯನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಪ್ಲಾನ್ ನಡೆಸಿದೆ. ಇತ್ತ ಜೆಡಿಎಸ್ ಸಹ ರಣತಂತ್ರ ರೆಡಿ ಮಾಡ್ತಿದೆ. ಮೇಲಾಗಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇರುವುದ್ರಿಂದ ಅವರಿಗೆ ಒಂದಿಷ್ಟು ಪ್ಲಸ್ ಆಗುವ ಸಾಧ್ಯತೆಯಿದೆ. ದೋಸ್ತಿ ಸರ್ಕಾರ ಪತನವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಮೊದಲಿನ ಸ್ಥಿತಿಯಿಲ್ಲ. ಈಗ ಬಿಜೆಪಿ ಸರ್ಕಾರವಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರಿಬ್ಬರ ಈ ನಡೆ ಪುರಸಭೆ ಚುನಾವಣೆ ಹಾಗೂ ಪಕ್ಷದ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋ ವಿಚಾರ ಮಾಡಿದಂತೆ ಕಾಣಿಸ್ತಿಲ್ಲ. ಹೀಗಾಗಿ ಇದರ ಲಾಭ ಇತರರಿಗೆ ಆಗುವ ಸಾಧ್ಯತೆ ಹೆಚ್ಚು. ಇಬ್ಬರೂ ನಾಯಕರು ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ, ಭಿನ್ನಾಭಿಪ್ರಾಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೇವೆ ಅನ್ನೋ ಮಾತನ್ನ ಹೇಳ್ತಾರೆ. ಆದ್ರೆ, ಪ್ರತ್ಯೇಕವಾಗಿ ನಡೆಸಿದ ಸುದ್ದಿಗೋಷ್ಠಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ನಾಯಕರಿಬ್ಬರು ಒಟ್ಟಿಗೆ ಕಾಣಿಸಿಕೊಂಡು ಕಾರ್ಯಕರ್ತರಲ್ಲಿ, ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡ್ತಾರಾ ಅಥವ ಈ ಪ್ರತ್ಯೇಕ ನಡೆ ಮುಂದುವರೆಯುತ್ತಾ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!