ಮಾಜಿ ಸಿಎಂ ಪುತ್ರನ ಮುಖ್ಯಮಂತ್ರಿ ಹಾದಿವರೆಗಿನ ರಾಜಕೀಯ ಜೀವನ

304

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ ಆಗಿದ್ದಾರೆ. ಬಿಜೆಪಿಯ ಕೋರ್ ಕಮಿಟಿಯಲ್ಲಿ ಸರ್ವಸಮ್ಮತದಿಂದ ಬೊಮ್ಮಾಯಿ ಅವರನ್ನ ಹೊಸ ಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ. ರಾಜ್ಯ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಸನ್ ರೆಡ್ಡಿ ಅವರು ಹೊಸ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿದ್ರು.

ಮಾಜಿ ಸಿಎಂ ದಿ.ಎಸ್.ಆರ್ ಬೊಮ್ಮಾಯಿ

ಬಿಎಸ್ವೈ ಬಳಗದಲ್ಲಿ ಆಪ್ತರಾಗಿ ಗುರುತಿಸಿಕೊಂಡಿರುವ ಬೊಮ್ಮಾಯಿ ಆಯ್ಕೆ ಬಹುತೇಕರಿಗೆ ಒಪ್ಪಿಗೆ ಇದೆ. ಯಡಿಯೂರಪ್ಪ ಸೇರಿ ಅವರ ಕುಟುಂಬವನ್ನ ಸದಾ ಕಟು ಮಾತುಗಳಿಂದ ಟೀಕಿಸುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಇದನ್ನ ಒಪ್ಪಿಕೊಂಡಿದ್ದಾರೆ. ಸಿಎಂ ರೇಸಿನಲ್ಲಿದ್ದ ನಿರಾಣಿ, ಬೆಲ್ಲದ, ಅಶ್ವಥನಾರಾಯಣ, ಜೋಶಿ ಅಲ್ಲದೇ ಬಿ.ಎಲ್ ಸಂತೋಷ, ಸಿ.ಟಿ ರವಿ ಹೆಸರು ಸಹ ಕೇಳಿ ಬಂದಿದ್ವು. ಕೊನೆಗೆ ಬೊಮ್ಮಾಯಿಗೆ ಸಿಎಂ ಅದೃಷ್ಟ ಒಲಿದಿದೆ. ಅವರ ರಾಜಕೀಯ ಹಾದಿ ಇಲ್ಲಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನವರಿ 18, 1960ರಲ್ಲಿ ಜನಿಸಿದ್ರು. ಧಾರವಾಡದಿಂದ ಹಾವೇರಿ ಪ್ರತ್ಯೇಕವಾದ್ಮೇಲೆ ಹಾವೇರಿ ಜಿಲ್ಲೆ ಕುಂದುಗೋಳದ ಬಸವರಾಜ ಬೊಮ್ಮಾಯಿ ಆದರು. ಮೊದಲು ಜನತಾ ದಳದಲ್ಲಿ ಇದ್ದರು. ಇವರ ತಂದೆ ಎಸ್.ಆರ್ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ ಬೊಮ್ಮಾಯಿ ಅವರು ಬಿಜೆಪಿಗೆ ಸೇರ್ಪಡೆಯಾದರು.

ಮೆಕ್ಯಾನಿಕಲ್ ಎಂಜನಿಯರಿಂಗ್ ಪದವಿ ಮುಗಿಸಿದ್ದಾರೆ. ಪತ್ನಿಯ ಹೆಸರು ಚೆನ್ನಮ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 1998 ಹಾಗೂ 2004ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಜನತಾ ದಳದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2008ರಲ್ಲಿ ಬಿಜೆಪಿ ಸೇರ್ಪಡೆಯಾದರು. ಮತ್ತೆ ಶಾಸಕರಾಗಿ ಆಯ್ಕೆ ಆದ್ರು. ಮುಂದು ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ರು.

ಹಾವೇರಿ ಜಿಲ್ಲೆ ಶಿಗ್ಗಾಂವ ಕ್ಷೇತ್ರದಿಂದ 3 ಬಾರಿ ವಿಧಾನಸಭೆಗೆ ಆಯ್ಕೆ ಆದ್ರು. 2019ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ಜಗದೀಶ ಶೆಟ್ಟರ್ ಹಾಗೂ ಸದಾನಂದಗೌಡ ಸಿಎಂ ಆಗಿದ್ದಾಗ ಸಹಕಾರ ಖಾತೆ, ಕಾನೂನು ಮತ್ತು ಸಂಸದೀಯ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು ಬುಧವಾರ ಮಧ್ಯಾಹ್ನ 3.30ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!