ವಿಪಕ್ಷಗಳ ಗೈರಿನ ನಡುವೆ 5 ವಿಧೇಯಕಗಳು ಅಂಗೀಕಾರ

112

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ತಿನಲ್ಲಿ 5 ವಿಧೇಯಕಗಳು ಅಂಗೀಕಾರಗೊಂಡಿವೆ. ಸಭಾಪತಿ ಬಸವರಾಜ್ ಹೊರಟ್ಟಿ ಕಲಾಪ ನಡೆಸಿದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಗೆ ಕಲಾಪದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ಆದರೆ, ಎರಡೂ ಪಕ್ಷದವರು ಭಾಗವಹಿಸದೆ ಸದನ ನಡೆಸಿ ಎಂದು ಹೇಳಿದರು.

ಸಭಾಪತಿಗಳು ಕಲಾಪದಲ್ಲಿ ಭಾಗವಹಿಸಲು ಹೇಳಿದ ಮಾತನ್ನು ಬಿಜೆಪಿ, ಜೆಡಿಎಸ್ ಸದಸ್ಯರು ಕೇಳಲಿಲ್ಲ. ಹೀಗಾಗಿ ವಿಪಕ್ಷಗಳ ಗೈರಿನ ನಡುವೆ 5 ವಿಧೇಯಕಗಳಿಗೆ ಅಂಗೀಕಾರ ಸಿಕ್ಕಿತು. ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕ, ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ ಮಂಡಿಸಿದರು.

ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ, ನೋಂದಣಿ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಮಂಡಿಸಿದರು. ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕವನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ ಮಂಡಿಸಿದರು. ಈ 5 ವಿಧೇಯಕಗಳಿಗೆ ಹಾಜರಿದ್ದ ಸದಸ್ಯರಿಂದ ಒಪ್ಪಿಗೆ ಸಿಕ್ಕಿದ್ದರಿಂದ ಅಂಗೀಕರಸಲಾಯಿತು.

ಕಾಂಗ್ರೆಸ್ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದನ್ನು ಖಂಡಿಸಿ ಬುಧವಾರ ವಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಉಪ ಸಭಾಪತಿ ಮುಖದ ಮೇಲೆ ಆದೇಶ ಪ್ರತಿ ಹರಿದು ಹಾಕಿದ್ದರು. ಹೀಗಾಗಿ ಬಿಜೆಪಿಯ 10 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇದನ್ನು ಖಂಡಿಸಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿತು. ಕಲಾಪದಿಂದ ದೂರ ಉಳಿಯಿತು. ಸಭೆಯ ನೆಪದಲ್ಲಿ ಜೆಡಿಎಸ್ ಸದಸ್ಯರು ಸಹ ಕಲಾಪದಲ್ಲಿ ಭಾಗವಹಿಸಲಿಲ್ಲ.




Leave a Reply

Your email address will not be published. Required fields are marked *

error: Content is protected !!