ಸಿಂದಗಿ ಉಪ ಕದನ: ಎಸ್ಟಿ ಕಿಚ್ಚು.. ನೋಟಾಗೆ ತಳವಾರ ಸಮಾಜ ಸಜ್ಜು?

517

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆಯ ರಣಾಂಗಣದಲ್ಲಿ ಇದೀಗ ಒಂದಿಷ್ಟು ಜೋಶ್ ಬರುತ್ತಿದೆ. ಚುನಾವಣೆ ದಿನಾಂಕ ಘೋಷಣೆಗೂ ಮೊದ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನ ಘೋಷಿಸಿದೆ. ಇದು ಮೂಲ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಕಾವಿನ ಜೊತೆಗೆ ತಳವಾರ ಸಮಾಜದ ಎಸ್ಟಿ ಹೋರಾಟದ ಕಿಚ್ಚು ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕಳೆದ ಹಲವು ದಶಕಗಳಿಂದ ತಳವಾರ, ಪರಿವಾರ ಸಮಾಜದಿಂದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರಕ್ಕಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಘೋಷಣೆ ಮಾಡಿದ್ರೂ ರಾಜ್ಯ ಸರ್ಕಾರದ ಕೆಲ ಸಚಿವರ ಹುನ್ನಾರದಿಂದ ತಮಗೆ ಪ್ರಮಾಣ ಪತ್ರ ಸಿಗುತ್ತಿಲ್ಲವೆಂದು ಸಮಾಜದ ಮುಖಂಡರು ಆರೋಪಿಸಿ, ವಿಭಿನ್ನ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಾಲೂಕಿನ ಪ್ರತಿ ಹಳ್ಳಿಗಳಿಗೂ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನ ರಾಜ್ಯ ಕೋಲಿ ಕಬ್ಬಲಿಗ ಯುವ ವೇದಿಕೆ ಅಧ್ಯಕ್ಷರಾದ ಶಿವಾಜಿ ಮೆಟಗಾರ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಶಿವಾಜಿ ಮೆಟಗಾರ ಅವರ ತಂಡ, ಸಿಂದಗಿ ತಾಲೂಕಿನ ಬೋರಗಿ, ಬ್ಯಾಕೋಡ, ಬೂದಿಹಾಳ, ಬಂದಾಳ, ಕೊಕಟನೂರ, ಕನ್ನೊಳ್ಳಿ, ಚಾಂದಕೊಟಗಿ, ಬಳಗಾನೂರ ಸೇರಿದಂತೆ ಸುಮಾರು 40 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಎಸ್ಟಿ ಪ್ರಮಾಣ ಪತ್ರದ ವಿಚಾರದಲ್ಲಿ ಅನ್ಯಾಯ ಮಾಡುತ್ತಿರುವ ಬಿಜೆಪಿ ಹಾಗೂ ಮೌನ ವಹಿಸಿರುವ ಕಾಂಗ್ರೆಸ್ ಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಸಂಬಂಧ ನೋಟಾ ಚಲಾವಣೆ ಮಾಡುವ ಕುರಿತು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸಂವಿಧಾನ ಬದ್ಧವಾಗಿ ತಳವಾರ, ಪರಿವಾರ ಸಮಾಜಕ್ಕೆ ಸಿಗಬೇಕಾದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದೆ ಕುತಂತ್ರ ರಾಜಕೀಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಅರೆ ಬೆತ್ತಲೆ ಮೆರವಣಿಗೆ, ರಕ್ತದಾನ, ಉಪವಾಸ ಸತ್ಯಾಗ್ರಹ ಸೇರಿ ಹಲವು ರೀತಿಯ ಹೋರಾಟಗಳನ್ನು ಮಾಡಿದರೂ ಯಾರೂ ನ್ಯಾಯ ಕೊಡಿಸಿಲ್ಲವೆಂದು ಶಿವಾಜಿ ಮೆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಹಳ್ಳಿ ಹಳ್ಳಿ ಸಂಚರಿಸಿ ಈ ಬಾರಿಯ ಉಪ ಚುನಾವಣೆಯಲ್ಲಿ ಸಮಾಜದ ಮತದಾರರು ನೋಟಾ ಚಲಾಯಿಸುವ ಮೂಲಕ ತಮ್ಮ ಶಕ್ತಿ ತೋರಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ನಮ್ಮ ಹೋರಾಟಕ್ಕೆ ಬೇಡ ಜಂಗಮ ಸಂಘದ ರಾಜ್ಯ ಉಪಾಧ್ಯಕ್ಷರಾದ ಮೃತ್ಯುಂಜಯ ಸ್ವಾಮೀಜಿ, ದಲಿತ, ಹಾಲುಮತ, ಅಲ್ಪಸಂಖ್ಯಾತ ಸಮಾಜದ ಮುಖಂಡರು ಸಹ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಮಗೂ ಅನ್ಯಾಯ ಆಗಿದೆ. ನಾವು ನೋಟಾ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಸಂಬಂಧ ವಿಜಯಪುರದಲ್ಲಿ ದೊಡ್ಡ ಹೋರಾಟ ಮಾಡಲಾಗುವುದು.

ಶಿವಾಜಿ ಮೆಟಗಾರ, ಅಧ್ಯಕ್ಷರು, ಕೋಲಿ ಕಬ್ಬಲಿಗ ಯುವ ವೇದಿಕೆ

ಸಿಂದಗಿ ತಾಲೂಕಿನಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಇದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಈ ಕುರಿತಾಗಿ ರಾಜಕೀಯ ನಡೆದಿದೆ ಎಂದು ಸ್ವತಃ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರೆ ಹೇಳಿದ್ದು, ನಿಮ್ಮ ಹೋರಾಟಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ ಅಂತಾ ಶಿವಾಜಿ ಮೆಟಗಾರ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಉಪ ಚುನಾವಣೆಯಲ್ಲಿ ತಳವಾರ, ಪರಿವಾರ ಎಸ್ಟಿ ಹೋರಾಟದ ಕಿಚ್ಚು ಹೊಸ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದು ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!