Search

ಮತ್ತೆ ಜೀವ ಬಂದಿದೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ

526

ಪ್ರಜಾಸ್ತ್ರ ವಿಶೇಷ ವರದಿ:

ಸಿಂದಗಿ: ಪಟ್ಟಣದಿಂದ ಸುಮಾರು 3 ರಿಂದ 4 ಕಿಲೋ ಮೀಟರ್ ದೂರದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವಿದೆ. ಬ್ಯಾಕೋಡ ರಸ್ತೆಯಲ್ಲಿರುವ ಈ ಘಟಕ ಶುರುವಾಗಿದ್ದು 2015ರಲ್ಲಿ. ಆದ್ರೆ, ಇದು ಕಾರ್ಯಾರಂಭ ಮಾಡಿದ್ದು ಮಾತ್ರ 2017ರಲ್ಲಿ. ಅದು ಕೇವಲ ಒಂದು ತಿಂಗಳು ಕೆಲಸ ನಿರ್ವಹಿಸಿದೆ. ಅಲ್ಲಿಂದ ಘಟಕ ಸಂಪೂರ್ಣ ಸ್ತಬ್ಧವಾಗಿತ್ತು. ಈ ವಿಚಾರ ಈಗ್ಯಾಕೆ ಅಂದ್ರೆ, ಇದೀಗ ಮತ್ತೆ ತನ್ನ ಕೆಲಸ ಶುರು ಮಾಡಿದೆ.

ಸಂಗ್ರಹಗೊಂಡ ಘನ ತ್ಯಾಜ್ಯ

ಸುಮಾರು 8 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ವಿಲೇವಾರಿ ಘಟಕ ವಿಜಯಪುರ ಜಿಲ್ಲೆಯಲ್ಲಿಯೇ ದೊಡ್ಡದು. ಆದ್ರೆ, ಇದನ್ನ ಸರಿಯಾಗಿ ಬಳಕೆ ಮಾಡದೆ ಹಾಗೇ ಬಿಡಲಾಗಿತ್ತು. ಇದರ ಪರಿಣಾಮ, ಇಲ್ಲಿರುವ ಮಿಷನ್ ಬಿಡಿ ಭಾಗಗಳನ್ನ ಕಳ್ಳತನ ಮಾಡಲಾಗಿತ್ತು. ಲೈಟಿಂಗ್ ವ್ಯವಸ್ಥೆ ಇರ್ಲಿಲ್ಲ, 30 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ಇದ್ದು ಇಲ್ಲದಂತಾಗಿತ್ತು. ಹೀಗೆ ಸಕಲ ವ್ಯವಸ್ಥೆ ಮಾಡಿದ್ರೂ ಸರಿಯಾಗಿ ನಿರ್ವಹಣೆಯಾಗದೆ ಎಲ್ಲವೂ ಹಾಳಾಗಿ ಹೋಗಿತ್ತು. ಇದ್ರಿಂದಾಗಿ ಪಟ್ಟಣದ ಘನ ತ್ಯಾಜ ವಿಲೇವಾರಿ ಘಟಕ ಹೆಸರಿಗೆ ಮಾತ್ರವಿತ್ತು. ಇದೀಗ ಅದಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆ.

ಕಸದಿಂದ ತಯಾರಾದ ಗೊಬ್ಬರ

ಇಷ್ಟು ವರ್ಷಗಳಿಂದ ಪಾಳು ಬಿದ್ದಿದ್ದ ತ್ಯಾಜ್ಯ ವಿಲೇವಾರಿ ಘಟಕ ಕೆಲ ತಿಂಗಳಿಂದ ತನ್ನ ಕೆಲಸ ಶುರು ಮಾಡಿದೆ. ಪಟ್ಟಣದಿಂದ ನಿತ್ಯ 8 ಟನ್ ಕಸ ಇಲ್ಲಿಗೆ ಬರುತ್ತಿದೆ. ಹೀಗೆ ಹೊತ್ತು ತರುವ ಕಸವನ್ನ ಒಂದ್ಕಡೆ ಸಂಗ್ರಹಿಸಲು ವಿಶಾಲವಾದ ಜಾಗವಿದೆ. ಎರೆಹುಳ ಗೊಬ್ಬರ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ಮಾಡಲಾಗಿದೆ. ಅದರ ಕೆಲಸ ಇನ್ನು ಶುರುವಾಗಿಲ್ಲ. ಸಂಗ್ರಹಗೊಂಡ ಕಸದಿಂದ ನಿತ್ಯ 4 ರಿಂದ 5 ಟನ್ ಗೊಬ್ಬರ ತಯಾರಾಗ್ತಿದೆ ಅಂತಾರೆ ಇಲ್ಲಿನ ಸಿಬ್ಬಂದಿ.

ಘಟಕ ಮರು ಕಾರ್ಯನಿರ್ವಹಿಸುವಂತೆ ಮಾಡಲು 9 ಲಕ್ಷ ರೂಪಾಯಿ ಖರ್ಚಾಗಿದೆ. ಎರೆಹುಳ ಗೊಬ್ಬರ ಕೆಲಸ, ಸೆಕ್ಯೂರಿಟಿ ನೇಮಕ, ಆತನ ಕುಟುಂಬಕ್ಕಾಗಿ ಪ್ರತ್ಯೇಕ ಕೊಠಡಿ ನಿರ್ಮಾಣ, ಕಾಂಪೌಂಡ್ ನಲ್ಲಿರುವ ಬೋರ್ ವೆಲ್ ಸುತ್ತ ಗೋಪುರ, ತಯಾರಾದ ಗೊಬ್ಬರವನ್ನ ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಸೇರಿದಂತೆ ಒಂದಿಷ್ಟು ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ.

ಸೈಯದ ಅಹ್ಮದ, ಪುರಸಭೆ ಮುಖ್ಯಾಧಿಕಾರಿ

ಸ್ಥಳದಲ್ಲಿಯೇ ಇದ್ದ ಪುರಸಭೆ ಮುಖ್ಯಾಧಿಕಾರಿ ಸೈಯದ ಅಹ್ಮದ ಅವರು, ಘಟಕದ ಕಾರ್ಯನಿರ್ವಹಣೆ, ಮರು ಕಾರ್ಯಾರಂಭ, ತಯಾರಾದ ಗೊಬ್ಬರ ಸಂಗ್ರಹ, ಘಟಕದ ಸಾಮರ್ಥ್ಯ, ಸೆಕ್ಯೂರಿಟಿ ಗಾರ್ಡ್ ನೇಮಕ ಸೇರಿದಂತೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ರು. ಇಲ್ಲಿ ತಯಾರಿಸಲಾದ ಗೊಬ್ಬರನ್ನ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತೆ. ಈ ಗೊಬ್ಬರ 2 ರಿಂದ 3 ವರ್ಷಗಳ ಕಾಲ ಮಣ್ಣನ್ನು ಫಲವತ್ತಾಗಿಡುತ್ತೆ ಅಂತಾ ಹೇಳಿದ್ರು.

ಎರೆಹುಳ ಗೊಬ್ಬರದ ಸ್ಥಳ

ಇನ್ನು ಕಂಪೌಂಡ್ ನಿರ್ಮಾಣ ಮಾಡಿದ್ರೂ ಅಲ್ಲಲ್ಲಿ ಒಡೆದು ಹೋಗಿದ್ದು ದನಕರುಗಳು ನುಗ್ಗುತ್ತಿವೆ. ಸಸಿಗಳನ್ನ ನೆಡಲಾಗಿದ್ದು ಅವುಗಳನ್ನ ಪೋಷಣೆ ಇಲ್ಲದೆ ರಾಸುಗಳ ಪಾಲಾಗಿವೆ. ನೀರಿನ ಟ್ಯಾಂಕರ್ ಇದ್ದು ನೀರಿಲ್ಲ. ಸಾಕಷ್ಟು ಕಸ ಹಾಗೆಯೇ ಬಿದ್ದಿದ್ದು ಅದನ್ನ ಆದಷ್ಟು ಬೇಗ ಗೊಬ್ಬರವಾಗಿ ಪರಿವರ್ತಿಸಬೇಕಿದೆ. ಸೆಕ್ಯೂರಿಟಿಗಾರ್ಡ್ ಇಲ್ಲದಿರುವುದ್ರಿಂದ ಯಾರು ಬರುತ್ತಾರೆ, ಏನು ಕಳ್ಳತನ ಮಾಡಿಕೊಂಡು ಹೋಗ್ತಾರೆ ಅನ್ನೋದು ಒಂದೂ ಗೊತ್ತಾಗುವುದಿಲ್ಲ. ಹೀಗೆ ಹಲವು ಸಮಸ್ಯೆಗಳಿದ್ದು ಅವುಗಳನ್ನ ಬಗೆಹರಿಸಿದಾಗ ಘಟಕಕ್ಕೆ ಇನ್ನಷ್ಟು ವೇಗ ಬರುತ್ತೆ. ಈಗೇನೂ ಮತ್ತೆ ಘಟಕ ತನ್ನ ಕೆಲಸ ಶುರು ಮಾಡಿದೆ. ಇದು ಮತ್ತೆಂದೂ ನಿಲ್ಲದಂತೆ ನೋಡಿಕೊಂಡು ಹೋಗುವುದು ಪುರಸಭೆಯ ಅತೀ ಮುಖ್ಯ ಕೆಲಸವಾಗಿದೆ.

ಸಿಬ್ಬಂದಿಯೊಂದಿಗೆ ಪುರಸಭೆ ಮುಖ್ಯಾಧಿಕಾರಿ





Leave a Reply

Your email address will not be published. Required fields are marked *

error: Content is protected !!