ಯಾಕೆ ಗಟ್ಟಿಯಾಗಲಿಲ್ಲ ಘಟಬಂಧನ್?

428
ಕರುನಾಡಲ್ಲಿ ಮೈತ್ರಿ ಸರ್ಕಾರ ಬರುತ್ತಿದ್ದಂತೆ, ಮಹಾಘಟಬಂಧನ ವಿಷ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಯ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರದ ಘಟಾನುಘಟಿ ನಾಯಕರುಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರಮಾಣ ವಚನ ಸಂದರ್ಭದಲ್ಲಿ ಸೇರಿದ್ದ ಲೀಡರ್ ಗಳು, ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದವು. ಆದ್ರೆ, ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿರೋದು ನಿಮಗೆಲ್ಲ ಗೊತ್ತಿರುವ ವಿಷ್ಯ.
ಕೇಂದ್ರದಲ್ಲಿ ಎನ್ ಡಿಎ ಟೀಂಗೆ ಆಡಳಿತ ನಡೆಸಲು ಅವಕಾಶ ಕೊಡಬಾರದು ಅನ್ನೋ ಕಾರಣಕ್ಕೆ, ಮುನಿಸಿಕೊಂಡಿದ್ದ ನಾಯಕರೆಲ್ಲ ಒಂದಾಗಿ ಮಹಾಘಟಬಂಧನ ಸೃಷ್ಟಿಸಿದ್ದರು. ಇದಕ್ಕೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಸರಿ ಪಡೆಯ ನಾಯಕರು ಟೀಕಾಸ್ತ್ರ ಪ್ರಯೋಗಿಸಿದ್ರು. ಅದೇನೋ ಗೊತ್ತಿಲ್ಲ, ಈ ಘಟಬಂಧನ್ ಗಟ್ಟಿಯಾಗುವ ಬದಲು ಸಡಿಲಗೊಂಡು, ಬೆಂಗಳೂರಲ್ಲಿ ಸೇರಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದಾವ್ ಸೇರಿದಂತೆ ಎಡರಂಗದ ಪಕ್ಷಗಳು ಬೇರೆ ಬೇರೆ ಮುಖ ಮಾಡಿದ್ವು.
ರಾಜ್ಯದಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸಿದ್ದ ಕಾಂಗ್ರೆಸ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶ, ಬಿಹಾರ್ ಸೇರಿ ಬಹುತೇಕ ರಾಜ್ಯಗಳಲ್ಲಿ ಏಕಾಂಗಿಯಾಗಿ ಹೋರಾಟಕ್ಕೆ ಸಜ್ಜಾಯ್ತು. ಇದರಿಂದಾಗಿ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಟಿಎಂಸಿ, ಆಪ್, ಟಿಡಿಪಿ ಪಕ್ಷಗಳಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಕಿತ್ತಾಟ ಶುರುವಾಯ್ತು. ನಾವೆಲ್ಲ ಒಂದೇ ಅಂತಾ ಹೇಳಿದ ಕೆಲ ದಿನಗಳಲ್ಲಿ ವಿರೋಧಿ ಬಣವಾಗಿ ಟೀಕೆಗಳ ಮಳೆಯನ್ನೇ ಸುರಿಸಿದ್ರು. ಇದರ ಪರಿಣಾಮ 2019ರ ಲೋಕಸಭಾ ಚುನಾವಣೆಯಲ್ಲಿ ಘಟಬಂಧನ್ ಆರಂಭದಲ್ಲಿ ಅಂತ್ಯವಾಯ್ತು. ಹೀಗಾಗಿ ಇದು ಬಿಜೆಪಿಗೆ ಪ್ಲಸ್ ಆಗುವ ಸಾಧ್ಯತೆಯೇ ಹೆಚ್ಚು ಅನ್ನೋದು ರಾಜಕೀಯ ವಿಶ್ಲೇಷಕರ ಮಾತು.
ಘಟಬಂಧನದಲ್ಲಿರವು ಬಹುತೇಕ ನಾಯಕರು ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ. ಮತ್ತೊಂದು ಚಾನ್ಸ್ ಸಿಕ್ರೆ ನಾನು ಪಿಎಂ ಆಗುತ್ತೇನೆ ಅನ್ನೋದು ಮಾಜಿ ಪ್ರಧಾನಿ ದೇವೇಗೌಡರ ಆಸೆ. ಇನ್ನು ಮಾಯಾವತಿ, ದೀದಿ ಸಹ ರೇಸಿನಲ್ಲಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಇವರಿಂದ ದೂರವಾದ್ರು. ಯಾಕಂದ್ರೆ, ಇವರ್ಯಾರಿಗೂ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಆಸೆ ಇಲ್ಲ. ಹೀಗಾಗಿ ಜೋಡಿಸಿದ್ದ ಕೈ ಬಿಚ್ಚಿಕೊಂಡು ಚುನಾವಣೆ ಎದುರಿಸ್ತಿದ್ದಾರೆ. ಇದು ಇವರಿಗೆಲ್ಲ ಎಷ್ಟು ಲಾಭ ತಂದುಕೊಡುತ್ತೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.
ಇದೆಲ್ಲದರ ನಡುವೆ ಒಟ್ಟು 543 ಲೋಕಸಭಾ ಮತಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬಹುತೇಕ ರಾಜ್ಯಗಳ ಚುನಾವಣೆ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿನ ಚುನಾವಣೆಯಲ್ಲಿ ಹಿಂಸಾರೂಪ ಪಡೆದುಕೊಂಡಿದ್ದು, ಇನ್ನುಳಿದ ಕ್ಷೇತ್ರಗಳ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಇದೆಲ್ಲದರ ನಡುವೆ ಮೇ 23ಕ್ಕೆ ಫಲಿತಾಂಶ ಹೊರ ಬರುತ್ತೆ. ಜೂನ್ 3ಕ್ಕೆ 16ನೇ ಲೋಕಸಭೆಯ ಅವಧಿ ಅಂತ್ಯಗೊಳ್ಳಲಿದೆ. ಹೀಗಾಗಿ ಈ ಬಾರಿ ಕೇಂದ್ರದಲ್ಲಿ ಮತ್ತೆ ಎನ್ ಡಿಎ ಸರ್ಕಾರ ಬರುತ್ತಾ, ಯುಪಿಎ ಸರ್ಕಾರ ಬರುತ್ತಾ ಅಥವ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಾ ಅನ್ನೋ ಕುತೂಹಲ ಮೂಡಿದೆ.



Leave a Reply

Your email address will not be published. Required fields are marked *

error: Content is protected !!