ಪ್ರಜಾಸ್ತ್ರ ಸುದ್ದಿ
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿ ಕ್ಯಾಂಪ್ ನಲ್ಲಿ 5 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಇದರಿಂದಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳಿಂದ ಬಾಲಕಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ವೈದ್ಯರು ಸಿಂಧನೂರಿಗೆ ಕರೆದುಕೊಂಡು ಹೋಗಿ ಎಂದಿದ್ದರು. ರಕ್ತದ ಮಾದರಿ ಪರೀಕ್ಷೆ ನಡೆಸಿದ್ದು, ಡೆಂಗ್ಯೂ ಮಾದರಿಯ ಶಂಕಿತ ಝಿಕಾ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಹಾರೈಸಿದ್ದಾರೆ.