ರೈತರ ಜೀವ ಹಿಂಡುತ್ತಿರುವ ಎರಡು ರೂಪಾಯಿ ಪೆನ್ನು.. ಒಂದು ರೂಪಾಯಿ ಹಾಳೆ!

703

ಬೆಳೆ ಖರೀದಿ ಕೇಂದ್ರಗಳಲ್ಲಿ ಭ್ರಷ್ಟಾಚಾರ ಹೇಗೆ ಆಟವಾಡ್ತಿದೆ. ಇದಕ್ಕೆ ಮೂಲ ಕಾರಣ ಯಾರು ಅನ್ನೋದನ್ನ ಬಮ್ಮನಜೋಗಿಯ ಹವ್ಯಾಸಿ ಬರಹಗಾರ ವಿಠ್ಠಲ ಆರ್ ಯಂಕಂಚಿ ಅವರ ಬರೆದ ಲೇಖನ ಇಲ್ಲಿದೆ…

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧವಾಗಿ ಹೋರಾಟ ಮಾಡುವ ನಾಯಕರುಗಳೆ ರೈತರ ಗೋಳು ಸ್ವಲ್ಪ ಕೇಳಿ. ಒಂದೆಡೆ ಹಳ್ಳ ಕೊಳ್ಳ, ಕೆರೆಕಟ್ಟೆಗಳು ಮತ್ತು ಸಣ್ಣ ಸಣ್ಣ ಕಾಲುವೆಗಳು ಬತ್ತಿ ಹೋಗಿವೆ. ಮತ್ತೊಂದೆಡೆ ರೈತ ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಯಾಕೆ ನೀವು ಮೌನವಾಗಿದ್ದೀರಿ? ಮಾನ್ಯ ಮುಖ್ಯಮಂತ್ರಿಗಳು ಬೀದರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರು ಬೆಳೆದ  ತೊಗರಿಯನ್ನು 10 ಕ್ವಿಂಟಾಲ್ ದಿಂದ 20 ಕ್ವಿಂಟಾಲ್ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಹೋಗಿದ್ದಾರೆ. ಆದರೆ ಅದು ಇನ್ನು ಜಾರಿಯಾಗದೆ ಅಧಿಕಾರಿಗಳು ಬೇಜಾವಾಬ್ದಾರಿ ಉತ್ತರ ಕೊಡುತ್ತಿದ್ದಾರೆ. ಆದ್ದರಿಂದ ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು.

ಕಷ್ಟಪಟ್ಟು ಬೆಳೆಯನ್ನು ಬೆಳೆಯುವ ರೈತರು ಹಸಿವನ್ನು ನೀಗಿಸಿಕೊಳ್ಳಲಾಗದೆ, ಮಡದಿ ಮಕ್ಕಳನ್ನು ಸಾಕಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಶೋಚನೀಯ. ರೈತರನ್ನು ಸಾಯುವಂತೆ ಮಾಡುತ್ತಿರುವುದು ಈ ಮೂವರುಗಳು.. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ದಲ್ಲಾಳಿ ವ್ಯಾಪಾರಸ್ಥರೆ ಕಾರಣಿಭೂತರಾಗಿದ್ದಾರೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ಕೊಡಿಸುವುದರಲ್ಲಿ ಜನಪ್ರತಿನಿಧಿಗಳು ವಿಫಲರಾಗುತ್ತಿದ್ದಾರೆ.

ಇನ್ನು ಅಧಿಕಾರಿಗಳು ಸವಲತ್ತನ್ನು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ದಿಕ್ಕು ತೋರದಂತ್ತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಪ್ರಾದೇಶಿಕವಾಗಿ ಸಿಗುತ್ತಿರುವ ವಸ್ತುಗಳನ್ನುˌ ಬೆಳೆಗಳನ್ನು ಮತ್ತು ಹಣ್ಣುಗಳನ್ನು ಆಯಾ ಸ್ಥಳದಲ್ಲಿಯೇ ಸಿದ್ಧ ವಸ್ತುವನ್ನಾಗಿಸುವ ಕಾರ್ಖಾನೆಗಳನ್ನು ಸ್ಥಾಪಿಸಲು ಸರಕಾರಕ್ಕೆ ಸಲಹೆ ನೀಡುವುದನ್ನು ಬಿಟ್ಟು ರೈತರಿಗೆ ತಲೆನೋವನ್ನು ಕೊಡಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ಹಣ್ಣುಗಳ ಜಿಲ್ಲೆ ಎಂದೇ ಪ್ರಸಿದ್ಧಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಹಣ್ಣುಗಳ ಸಂರಕ್ಷಣೆ ಮಾಡುವ ಮತ್ತು ಹಣ್ಣಿನಿಂದ ತಯಾರಾಗುವ ಯಾವುದೆ ಸಿದ್ಧ ವಸ್ತುಗಳ ತಯಾರಿಕಾ ಘಟಕ ಇಲ್ಲದಿರುವುದು ದುರಂತ. ಇದರ ಜೊತೆಗೆ ಅಧಿಕಾರಿಗಳು ದಲ್ಲಾಳಿಗಳ ಜೊತೆ ಸೇರಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಒಂದೆಡೆ ಸಾಲ ಮಾಡಿ ಬೆಳೆ ಬೆಳೆದ ರೈತನಿಗೆ ಒಳ್ಳೆಯ ಬೆಲೆ ಸಿಗದೆ ಸಾಯುತ್ತಿದ್ದರೆ, ಮತ್ತೊಂದೆಡೆ ಸರಕಾರದ ಬೆಂಬಲ ಬೆಲೆಯಲ್ಲಿ ನೂರೆಂಟು ತೊಡಕುಗಳಿರುವುದರಿಂದ ದಲ್ಲಾಳಿಗಳ ಮೊರೆ ಹೋಗಿ ನಷ್ಟ ಅನುಭವಿಸುವಂತ್ತಾಗಿದೆ. ದಲ್ಲಾಳಿಗಳು ಕಡಿಮೆ ಬೆಲೆಗೆ ತೆಗೆದುಕೊಂಡು ಸರಕಾರದ ಅಧಿಕಾರಿಗಳ ಸಹಾಯದಿಂದ ಹೆಚ್ಚಿನ ಬೆಲೆಗೆ ಮಾರಲು ಅನುಕೂಲವಾಗುತ್ತಿದೆ. ಹೀಗಾಗಿ ಕಷ್ಟಪಟ್ಟು ಬೆಳೆ ಬೆಳೆದ ರೈತರು ಬೆವರಿನ ಹನಿಯಲ್ಲಿ ನರಳುತ್ತಿದ್ದರೆ, ದಲ್ಲಾಳಿಗಳು ಎಸಿ ರೂಮಿನಲ್ಲಿ ಹಾಯಾಗಿ ನಗುತ್ತಿದ್ದಾರೆ.

2 ರೂಪಾಯಿ ಪೆನ್ನು, 1 ರೂಪಾಯಿ ಹಾಳೆ ತೆಗೆದುಕೊಂಡು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ‘ಅನ್ನ ಬೆಳೆಯುವ ರೈತ ಯಾವತ್ತೂ ಕಣ್ಣೀರು ಹಾಕಬಾರದು. ದೇಶ ಕಾಯುವ ಯೋಧ ಯಾವತ್ತೂ ತಲೆ ಕೆಳಗೆ ಮಾಡಬಾರದು’ ಎಂಬ ನಾಣ್ನುಡಿಯನ್ನು ಪ್ರಸ್ತುತ ವಾತಾವರಣಕ್ಕೆ ತದ್ವಿರುದ್ಧವಾಗಿದೆ. ಕೃಷಿ ಸಚಿವರೆ, ಉತ್ತರ ಕರ್ನಾಟಕದ ರೈತರ ಪರಿಸ್ಥಿತಿ ಸ್ವಲ್ಪ ಗಮನಿಸಿ. ಈ ಹಿಂದೆ ಸಿಎಂ ಆಗದ್ದ ಸಿದ್ರಾಮಯ್ಯನವರು ಜಾರಿಗೊಳಿಸಿದ ಕೃಷಿ ಹೊಂಡ ಮತ್ತು ಹನಿ ನೀರಾವರಿಯ ಪೈಪುಗಳ ಸದ್ಯ ತಡೆಹಿಡಿಯಲಾಗಿದೆ. ರೈತಪರವಿರುವ ಬಿಎಸ್ವೈ ಸರ್ಕಾರ ಕೂಡಲೇ ಇದನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಆಜ್ಞಾಪಿಸಬೇಕು. ರೈತರ ಕಣ್ಣೀರನ್ನು ಒರೆಸುವಂತಹ ಕೆಲಸವಾಗಬೇಕು.




Leave a Reply

Your email address will not be published. Required fields are marked *

error: Content is protected !!