ಬಿಲ್ಲಹಬ್ಬ ನೆನಪಿನಂಗಳದಿಂದ

895

ಅಮ್ಮಾ.. ಸುರತ್ಕಲ್ ನ ಮಾದರಿ ಶಾಲೆಯಲ್ಲಿ ಯಕ್ಷಗಾನ ಸ್ಪರ್ಧೆ ಉಂಟಂತೆ. ನಮ್ಮ ಶಾಲೆಯ ಏಳನೇ ಕ್ಲಾಸಿನ ಮಕ್ಕಳ ಜೊತೆಗೆ ನನ್ನನ್ನೂ ಸೇರಿಸಿಕೊoಡಿದ್ದಾರಮ್ಮ.. ನನಗೆ ಅರ್ಜುನನ ಪಾರ್ಟು… ನಾಳೆ ಪ್ರಾಕ್ಟೀಸ್ ಗೆ ಬಿಲ್ಲು ತೆಗೆದುಕೊoಡು ಹೋಗಬೇಕಂತೆ.. ಶಾಲಾ ಚೀಲವನ್ನು ಚಾವಡಿಯಲ್ಲಿರಿಸಿ ತುoಬಿದ ಉತ್ಸಾಹದಿಂದ ಒಂದೇ ಉಸಿರಿಗೆ ಹೇಳಿ ಹತ್ತೆoಟು ಅಡಿಕೆಗಳ ಮೇಲೆ ಕೈಯಾಡಿಸುತ್ತಾ ಕುಳಿತಿದ್ದ ಅಮ್ಮನ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿoತೆ.

ನೀನು ರಾಮಕುಂಜಕ್ಕೆ ತ್ಯಾಗರಾಜ ಆರಾಧನೆಗೆ ಹಾಡುಗಾರಿಕೆಗೆ ಹೋಗುವಾಗ ಇಪ್ಪತ್ತೈದು ರೂಪಾಯಿ ಬಸ್ ಚಾರ್ಜ್ ಕೊಟ್ಟಾಗಿದೆ. ಇನ್ನು ಪುನಃ ಸುರತ್ಕಲ್ ಅಂತ ಅದಕ್ಕೆಷ್ಟು ದುಡ್ಡು ಕೊಡಬೇಕೋ.. ನೀನು ಯಕ್ಷಗಾನ ಕುಣಿಯದಿದ್ದರೆ ಶಾಲೆ ಏನೂ ಬಿದ್ದು ಹೋಗುವುದಿಲ್ಲ. ನಿನ್ನ ಬದಲಿಗೆ ಬೇರೆ ಯಾರನ್ನಾದರೂ ಸೇರಿಸಿಕೊಳ್ಳಲು ಆ ದುರ್ಗಾದೇವಿ ಟೀಚರ್ ಗೆ ಹೋಗಿ ಹೇಳು.

ಕನಸಿನ ಗೋಪುರ ದೊಪ್ಪನೆ ಕುಸಿದoತಾಗಿ ನನಗೆ ಅಳುವೇ ಬಂದಿತ್ತು. ಸುಮ್ಮನೆ ಮನೆಯೊಳಗೆ ನಡೆದೆ. ಕೈ ತೊಳೆದುಕೊಂಡು ಒಳ ಬಂದ ಅಮ್ಮ ಹಲಸಿನ ಹಪ್ಪಳ ಸುಟ್ಟು ಕೊಟ್ಟಳು. ನಾನು ಶಾಲೆಯಿಂದ ಬರುವುದನ್ನೇ ಕಾದು ಕುಳಿತಿದ್ದ ನಾಯಿಗೆ ಅಂದು ನನ್ನಿಂದ ಎಂದಿಗಿಂತ ಹೆಚ್ಚು ಪಾಲು ತಿಂಡಿ ಸಿಕ್ಕಿತ್ತು. ಮೂರನೇ ತರಗತಿಯಿoದ ಯಕ್ಷಗಾನ ಕಲಿಕೆ ಕಡ್ಡಾಯವಾಗಿದ್ದುದರಿಂದ ಆ ಕಲೆಯಲ್ಲಿ ನನಗೇಕೋ ಅತೀವ ಒಲವಿತ್ತು. ಆದರೆ ಎಲ್ಲಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವುದಕ್ಕೂ ಹಣಕಾಸಿನ ಸಮಸ್ಯೆ ಇತ್ತು.

ರಾತ್ರಿ ಅಪ್ಪ ಪೂಜೆ ಮಾಡಲು ಕುಳಿತಾಗ ನಾ ಮಾಡಿದ ಭಜನೆ ಏಕೋ ತಾಳಕ್ಕೇ ಸಿಗುತ್ತಿರಲಿಲ್ಲ. ಪ್ರಭಾವತಿಯ ಅಮ್ಮ ಅವಳನ್ನು ಪ್ರವಾಸಕ್ಕೆ ಕೂಡಾ ಕಳಿಸಿದ್ದರು. ನನ್ನನ್ನು ಒಂದು ಸ್ಪರ್ಧೆಗೂ ಕಳಿಸುವುದಿಲ್ಲವಲ್ಲಾ ಎಂದು ಬೇಸರಪಟ್ಟುಕೊಂಡೆನಾದರೂ ಪುನಃ ಅಪ್ಪನಲ್ಲಿ ಕೇಳುವ ಧೈರ್ಯ ಮಾಡಿರಲಿಲ್ಲ.

ಮರುದಿನ ಶಾಲೆಗೆ ಹೊರಡುವಾಗ ನನ್ನ ಜಡೆ ಹೆಣೆಯುತ್ತಾ ಅಮ್ಮ ಹೇಳಿದ ಮಾತು ನನ್ನ ಮನಸ್ಸಿಗೆ ತಾಗಿತ್ತು.

ನೋಡು ಮಗಳೇ, ನಮ್ಮ ಕೊಟ್ಟಿಗೆ ಬಿದ್ದು ಹೋಗಿ ಇಷ್ಟು ಸಮಯವಾದರೂ ನಮಗೆ ಕಟ್ಟಲಾಗಿಲ್ಲ. ಇನ್ನು ಮಳೆ ಶುರುವಾದರೆ ಕಪಿಲೆ.. ಕುಟ್ಟ ಎಲ್ಲವೂ ಮಳೆಗೆ ನೆನೆಯುತ್ತವೆ. ದುಡ್ಡಿಗೆ ಬಾರಿ ಕಷ್ಟ ಉಂಟು. ಸುಮ್ಮನೆ ಶಾಲೆಗೆ ಹೋಗಿ ಬಾ. ದನಕರುಗಳನ್ನು ಬಹಳ ಇಷ್ಟ ಪಡುತ್ತಿದ್ದ ನನಗೆ ಅಮ್ಮನ ಮಾತು ಸರಿ ಎನಿಸಿತು.

ಮರುದಿನ ಶಾಲೆಗೆ ಹೋದವಳೇ ದುರ್ಗಾದೇವಿ ಟೀಚರ್ ರಲ್ಲಿ ಅಮ್ಮ ಹೇಳಿದ ಹಾಗೆ ಹೇಳಿದೆ. ನಿನ್ನ ಬಸ್ ಚಾರ್ಜ್ ನಾನು ಕೊಡುತ್ತೇನೆ. ಹಳೆ ವಿದ್ಯಾರ್ಥಿ ಸಂಘದವರು ವೇಷ-ಭೂಷಣಗಳನ್ನು ಕೊಡುತ್ತಾರoತೆ. ಸಂಜೆ ನಿನ್ನ ಅಪ್ಪ ಹಾಲಿನ ಸೊಸೈಟಿ ಗೆ ಹೋಗುತ್ತಾರಲ್ಲ, ಆಗ ನನ್ನನ್ನೊಮ್ಮೆ ಕಾಣಲು ಹೇಳು ಎಂದು ಅವರು ಹೇಳಿದ್ದಷ್ಟೇ.. ಮತ್ತೆ ಮರುದಿನ ಅಪ್ಪ ಬಿಲ್ಲು ತಯಾರಿಸಿ ಕೊಟ್ಟಿದ್ದರು. ನಂತರದ ಘಟನೆಗಳೆಲ್ಲ ಸವಿನೆನಪುಗಳೇ..

ಪ್ರತಾಪ್ ರೈ ಯ ವ್ಯಾನಿನಲ್ಲಿ ಸುರತ್ಕಲ್ ಗೆ ಹೋಗಿದ್ದು.. ಕಿರೀಟ, ಎದೆಹಾರ, ನಡುಪಟ್ಟಿ, ಮೇಲಂಗಿ ಮೊದಲಾದ ವೇಷ -ಭೂಷಣಗಳ ಜೊತೆಗೆ ಬಿಲ್ಲು ಹಿಡಿದು ನಾನೇ ಅರ್ಜುನ ಎಂದು ಬೀಗಿ ಕುಣಿದದ್ದು.. ಅಲ್ಲಿನ ಶಾಲಾ ಆವರಣದ ನೆಲ್ಲಿಕಾಯಿ ಮರವೇರಿ ಕುಳಿತಿದ್ದ ಕೋಡಂಗಿ ಪಾತ್ರಧಾರಿ ಪೂವಪ್ಪನನ್ನು ವೇದಿಕೆಗೆ ಕರೆಯಲಿಕ್ಕಾಗಿಯೇ ನಮ್ಮ ಭಾಗವತರು ಹಾಡೊಂದನ್ನು ಸೃಸ್ಟಿಸಿದ್ದು. ಸ್ಪರ್ಧೆಯಲ್ಲಿ ನಮ್ಮ “ಬಿಲ್ಲಹಬ್ಬ” ಯಕ್ಷಗಾನ ಪ್ರಥಮ ಸ್ಥಾನ ಗಳಿಸಿದ್ದು ಗೆದ್ದೆವಪೊ.. ಗೆದ್ದೆವು ಎಂದು ಹೆಮ್ಮೆಯಿoದ ಕಿರುಚುತ್ತ ತಿರುಗಿ ಬಂದದ್ದು. ಎಲ್ಲವೂ ಮನದಾಳದಲ್ಲಿ ಅಚ್ಚಳಿಯದೆ ಅಚ್ಚ ಹಸಿರಾಗಿ ಉಳಿದ ಸವಿನೆನಪುಗಳು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನನಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದ ನನ್ನ ದುರ್ಗಾದೇವಿ ಟೀಚರ್ ಇಂದು ನಮ್ಮೊಂದಿಗೆ ಇಲ್ಲ. ಅವರ ಭೌತಿಕ ದೇಹ ನಮ್ಮ ಜೊತೆ ಇಲ್ಲದಿದ್ದರೇನoತೆ…

“ಗಜಮುಖ ನಾ ನಿನ್ನ ಪಾದವ ನೆನೆವೆ… ನಿಜವಾಗಿ ಕರುಣಿಸು ವರಗಳ ಎಮಗೆ… ಎಂದು ಭಾಗವತಿಕೆ ಮಾಡುತ್ತಾ ಅವರು ನಮಗೆ ಕಲಿಸುತ್ತಿದ್ದ ಯಕ್ಷಗಾನ ಕುಣಿತದ ಒನಪು ನೆನೆದಾಗ ಮುದ ನೀಡುವ ಸವಿನೆನಪು…

ಕತೆಗಾರ್ತಿ: ಜಯಲಕ್ಷ್ಮಿ ಕೆ

ಉಪನ್ಯಾಸಕಿ, ಸಂತ ಜೋಸೆಫರ್ ಕಾಲೇಜು, ಮಡಿಕೇರಿ





Leave a Reply

Your email address will not be published. Required fields are marked *

error: Content is protected !!