ಚರಂಡಿ ಕೋಡಿ.. ಸಿಂದಗಿ ಬದುಕು ರಾಡಿ…

617

ಸಿಂದಗಿ: ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಅನ್ನೋದು ಮರಭೂಮಿಯಲ್ಲಿ ಬೊಗಸೆ ನೀರು ಹುಡುಕಿದಂತಾಗಿದೆ. ರಸ್ತೆ ಗುಂಡಿಗಳಂತೂ ಲೆಕ್ಕಕ್ಕಿಲ್ಲ. ಬೀದಿ ದನಗಳ ಬಗ್ಗೆ ಸುದ್ದಿ ಮಾಡಿದ್ರೂ ಕ್ಯಾರೆ ಅನ್ನದ ಪುರಸಭೆ, ತಾಲೂಕು ಆಡಳಿತ. ಇದೀಗ ಚರಂಡಿ ನೀರಿನ ದುರ್ನಾತ.

ಕೇಂದ್ರ ಬಸ್ ನಿಲ್ದಾಣದ ಸುತ್ತಮುತ್ತ ಚರಂಡಿ ನೀರು, ಸಾರ್ವಜನಿಕ ಶೌಚಾಲಯದ ಕೊಳಚೆ ನೀರು ರಸ್ತೆ ತುಂಬಾ ಹರಿದಾಡ್ತಿದೆ. ಇದರ ಮೇಲೆಯೇ ನಿಂತುಕೊಂಡು ಹಣ್ಣು, ತರಕಾರಿ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸಣ್ಣಪುಟ್ಟ ಟೀ ಅಂಗಡಿಗಳ ಮುಂದೆಯೂ ಹರಿಯುತ್ತಿದ್ದು, ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗ್ತಿದೆ.

ಕಳೆದ ಎರಡ್ಮೂರು ದಿನಗಳಿಂದ ಚರಂಡಿ ನೀರು ಇಷ್ಟೊಂದು ಪ್ರಮಾಣದಲ್ಲಿ ಹರಿದು ಜನರ ಜನಜೀವನ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಾದ ಪುರಸಭೆ ಕಣ್ಣಿದ್ದು ಕುರುಡಾಗಿದೆ. ಮೂಗಿದ್ದು ಮುಚ್ಚಿಕೊಂಡು ಕುಳಿತುಕೊಂಡಿದೆ. ಈ ಮೂಲಕ ಪುರಸಭೆ ಇದ್ದು ಸತ್ತಿದೆ ಅಂತಾ ವ್ಯಾಪಾರಸ್ಥರಾದ ಸೈಪನ್ ಯಂಕಂಚಿ, ಮೈಹಿಬೂಬ ಮರ್ತೂರ, ಬಾಬು ಭಾಗವಾನ, ದಸ್ತಗಿರ್ ನರಸೋಣಗಿ, ಹುಸೇನ್ ಮರ್ತೂರ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ತಾಲೂಕು ಆಡಳಿತ ಸಹ ಗಮನ ಹರಿಸುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತಿಲ್ಲ ಅಂತಾ ಹಣ್ಣು ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿ ಮಾಲೀಕರು ಕಿಡಿ ಕಾರುತ್ತಿದ್ದಾರೆ. ಡೆಂಗ್ಯೂ ಜ್ವರದ ಹಾವಳಿ ಜೋರಾಗಿದೆ. ನಾಳೆ ಏನಾದ್ರು ಅನಾಹುತವಾದ್ರೆ ಯಾರು ಜವಾಬ್ದಾರರು ಅಂತಾ ಸ್ಥಳೀಯರಾದ ನಬಿಲಾಲ ಮರ್ತೂರ, ದಾವಲಬಿ ಮಳ್ಳಿ, ಲಾಲು ಮರ್ತೂರ, ಬಂದೇನವಾಜ್ ಬಾಗವಾನ ಹಾಗೂ ಅಲ್ಲಾ ವಲಿ ಖೇಡ ಸೇರಿದಂತೆ ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏನು ಉತ್ತರ ಕೊಡ್ತಾರೆ ನೋಡಬೇಕು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!