ದೆಹಲಿ ಜಗಲಿಯಲ್ಲಿ ಡಿಸಿಎಂಗಾಗಿ ಹಗ್ಗಜಗ್ಗಾಟದ ಹಿಂದೆ ಸಿಎಂ ಕನಸು..!

241

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಬೆಂಗಳೂರು: ಯಡಿಯೂರಪ್ಪನವರನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಿದವರ ಸಾಲಿನಲ್ಲಿ ಯತ್ನಾಳ, ಸಿಪಿವೈ, ಅರವಿಂದ ಬೆಲ್ಲದ ಹೆಸರು ಮೇಲ್ನೋಟಕ್ಕೆ ಕಾಣಿಸಿಕೊಂಡರೂ ಒಳಗೊಳಗೆ ಹೆಲವರು ಕೈಜೋಡಿಸಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿಗೆ ಸಿಎಂ ಸ್ಥಾನ ಒಲಿಯಿತು. 2 ವರ್ಷ ಗೃಹ ಸಚಿವರಾಗಿದ್ದರೂ ಹೇಳಿಕೊಳ್ಳುವಂತಹ ಕೆಲಸ ಅವರಿಂದ ಆಗಿಲ್ಲ. ಆದರೂ, ಅವರಿಗೆ ಸಿಎಂ ಸ್ಥಾನ ನೀಡಿರುವುದಕ್ಕೆ ಹಲವರಿಗೆ ಬಿಸಿತುಪ್ಪವಾಗಿದೆ.

ಬೊಮ್ಮಾಯಿ ಸಿಎಂ ಆಗಿದ್ದು, ಸಚಿವ ಸಂಪುಟ ರಚನೆಯ ಕೂಡಿ ಕಳೆಯುವ ಲೆಕ್ಕ ನಡೆದಿದೆ. ಹಳೆ ಹುಲಿಗಳು, ಹೊಸ ಹುಲಿಗಳು, ಬೆಂಬಲ ನೀಡಿದ ಬಾಂಬೆ ಹುಲಿಗಳಿಗೆ ಸಚಿವ ಸ್ಥಾನ ನೀಡುವ ಸಂಬಂಧ ದೆಹಲಿ ಜಗಲಿಯಲ್ಲಿ ಹಗ್ಗಜಗ್ಗಾಟ ನಡೆದಿದೆ. ಹೀಗಾಗಿ ಯಾರಿಗೆ ಗೇಟ್ ಪಾಸ್ ಕೊಡುತ್ತಾರೆ? ಯಾರಿಗೆ ಎಂಟ್ರಿ ಪಾಸ್ ಕೊಡುತ್ತಾರೆ ಅನ್ನೋ ಲೆಕ್ಕಾಚಾರದ ಜೊತೆಗೆ ಐವರು ಡಿಸಿಎಂ ರೇಸಿನಲ್ಲಿದ್ದಾರೆ. ಕೆ.ಎಸ್ ಈಶ್ವರಪ್ಪ, ಆರ್.ಅಶೋಕ, ಬಿ.ಶ್ರೀರಾಮುಲು, ಡಾ.ಅಶ್ವಥನಾರಾಯಣ ಹಾಗೂ ಸಿ.ಟಿ ರವಿ ಹೆಸರು ಜೋರಾಗಿ ಕೇಳಿ ಬರ್ತಿದೆ.

ಸಾಂವಿಧಾನಿಕವಲ್ಲದ ಡಿಸಿಎಂ ಹುದ್ದೆಗೆ ಈ ನಾಯಕರು ಯಾಕೆ ಇಷ್ಟೊಂದು ಸರ್ಕಸ್ ಮಾಡುತ್ತಿದ್ದಾರೆ ಎಂದು ನೋಡಿದ್ರೆ, ಅದು ಮುಂಬರುವ 2023ರ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ. ನಳೀನಕುಮಾರ ಕಟೀಲ ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ. ಅವರು ಚುನಾವಣೆಯ ಹೊತ್ತಿನ ತನಕ ಇರುತ್ತಾರಾ ಅಥವ ಬದಲಾಗುತ್ತಾರಾ ಗೊತ್ತಿಲ್ಲ. ಒಂದು ವೇಳೆ ಅವರಿದ್ದರೂ ಅವರ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುವ ಧೈರ್ಯ ಮಾಡಲ್ಲ. ಇನ್ನು ಅದೃಷ್ಟದಿಂದ ಸಿಎಂ ಆಗಿರುವ ಬೊಮ್ಮಾಯಿ ಅವರ ಮುಂದಾಳತ್ವದಲ್ಲಿಯೂ ಚುನಾವಣೆ ಕಣಕ್ಕೆ ಇಳಿಯುವುದು ಕಷ್ಟ. ಹೀಗಾಗಿ ಮುಂದೆ ಸಾಮೂಹಿಕ ನಾಯಕತ್ವದಲ್ಲಿ ಎಲೆಕ್ಷನ್ ಎದುರಿಸಿದರೆ, ಆಗ ಸಿಎಂ ಕುರ್ಚಿ ಏರಲು ಈ ಡಿಸಿಎಂ ಅನ್ನೋ ಅರ್ಹತೆ ಸಹಾಯಕ್ಕೆ ಬರಬಹುದು ಅನ್ನೋ ಪ್ಲಾನ್ ಇದೆ.

ಮುಂದಿನ ಸಿಎಂ ಆಸೆಯನ್ನ ಕೆ.ಎಸ್ ಈಶ್ವರಪ್ಪ ಈಗ್ಲೇ ಬಿಡುವುದು ಒಳ್ಳೆಯದು. ಹಿಂದೆ ಡಿಸಿಎಂ ಆಗಿದ್ದೇ ದೊಡ್ಡ ಅವಕಾಶ. ಅವರಿಗೆ ಈಗಾಗ್ಲೇ 73 ವರ್ಷ ಆಗಿದೆ. ಬಿಜೆಪಿ ಅಲಿಖಿತ ನಿಯಮದ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಸ್ಥಾನವಿಲ್ಲ. ಯಡಿಯೂರಪ್ಪನವರ ಹಿಂದೆ ನಿಂತುಕೊಂಡ ಸ್ವಾಮೀಜಿಗಳಂತೆ ಇವರ ಹಿಂದೆ ನಿಂತುಕೊಳ್ಳುವುದು ದೂರದ ಮಾತು. ಹೀಗಾಗಿ ಅವರಿಗೆ ಮುಂದಿನ ಸಾರಿ ಟಿಕೆಟ್ ಸಿಗೋದೇ ಡೌಟ್. ಈ ಕಾರಣಕ್ಕೆ ಡಿಸಿಎಂ ಆಗಿಯಾದ್ರೂ ರಾಜಕೀಯ ಜೀವನ ಪೂರ್ಣಗೊಳಿಸಬೇಕು ಅನ್ನೋದು ಅವರ ಉದ್ದೇಶ. ಶ್ರೀರಾಮುಲು, ಅಶ್ವಥನಾರಾಯಣ ಈಗಾಗ್ಲೇ ಒಂದು ಬಾರಿ ಡಿಸಿಎಂ ಆಗಿ ಅನುಭವ ಇದೆ. ಈ ಎಲ್ಲ ಲೆಕ್ಕಾಚಾರದ ಮೇಲೆ ಮುಂದಿನ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೆ ಇನ್ನು ಒಂದೂವರೆ ವರ್ಷ ಅವಕಾಶವಿದ್ದು ಮತದಾರ ಯಾರ ಕಡೆ ವಾಲುತ್ತಾನೆ ಅನ್ನೋದು ಚುನಾವಣೆ ಹೊತ್ತಿನಲ್ಲಿ ತಿಳಿಯಲಿದೆ. ಏನೇ ಆದ್ರೂ ಡಿಸಿಎಂ ಅನ್ನೋ ಅಸ್ತ್ರದ ಮೂಲಕ ಮುಂದೆ ಹೋರಾಟ ಮಾಡಬಹುದು ಅನ್ನೋದು ಅವರ ತಂತ್ರ.




Leave a Reply

Your email address will not be published. Required fields are marked *

error: Content is protected !!