ಒಬ್ಬ ನಿಜವಾದ ಹೀರೊ ‘ವಿಶ್ವಮಾನವ’

399

ಉಪನ್ಯಾಸಕರು ಹಾಗೂ ಯುವ ಲೇಖಕರು ಆಗಿರುವ ಡಾ.ವಿನಯ ನಂದಿಹಾಳ ಅವರು ಡಾ.ಪುನೀತ್ ರಾಜಕುಮಾರ್ ಅವರ ‘ಗಂಧದಗುಡಿ’ಚಿತ್ರದ ಕುರಿತು ಬರೆದ ತುಂಬಾ ಸೊಗಸಾದ ಲೇಖನ ಇಲ್ಲಿದೆ.ಅವರ ಮೊದಲ ಪುಣ್ಯಸ್ಮರಣೆಯ ಹೊತ್ತಿನಲ್ಲಿ..

ಸಿನಿಮಾ ಎಂದರೆ ವಿವಾದ ಸೃಷ್ಟಿ ಎನ್ನುವಂತಹ ಸಂದರ್ಭ ಇದಾಗಿದೆ. ಈ ಸ್ಥಿತಿ ನಿರ್ಮಿತಿಗೆ ಯಾವ ಮತ್ತು ಎಂತಹ ರಾಜಕೀಯವು ಕಾರಣವಾಗಿದೆ ಎಂಬುದು ಪ್ರಜ್ಞಾವಂತರಾದ ಎಲ್ಲರಿಗೂ ತಿಳಿದೆ ಇದೆ. ಒಂದು ಸಿನಿಮಾ ಎಂದರೆ ಹಲವು ಅಂಶಗಳನ್ನು ತನ್ನೂಳಗೆ ಆಗುಮಾಡಿಕೊಂಡು ನಿರ್ಮಾಣಗೊಂಡಿರುತ್ತದೆ. ಆ ಅಂಶಗಳು ಯಾವುದೇ ವ್ಯಕ್ತಿ, ಪ್ರದೇಶ, ಸಂಸ್ಕೃತಿಯಾಗಿರಬಹುದು. ಒಂದು ಸಿನಿಮಾ ಅಥವಾ ಕಲೆಯ ಅಂತಿಮ ಪರಿಣಾಮದ ಬಗ್ಗೆ ಯೋಚಿಸಬೇಕೇ ಹೊರತು, ಅದರಲ್ಲಿನ ಚಿಕ್ಕಪುಟ್ಟ ಅಂಶಗಳನ್ನು ಎತ್ತಿಕೊಂಡು ವಿವಾದ ಸೃಷ್ಟಿಸುವ ಸಮಾಜದ ಸ್ಥಿತಿ ದೋಷದಿಂದ ಸಾಗುತ್ತದೆ ಎನ್ನುವುದಾಗುತ್ತದೆ. ಒಂದು ಕಲೆಯನ್ನು ಬಿಡಿ ಬಿಡಿಯಾಗಿ ನೋಡದೇ ಇಡಿಯಾಗಿ ನೋಡಿದಾಗ ಅದರ ಪೂರ್ಣತೆ ಲಭಿಸುತ್ತದೆ ಎನ್ನುವ ಸೂಕ್ಷ್ಮತೆಯ ಅರಿವು ಬಹುಮಖ್ಯ. ಇದನ್ನು ಯಾರು, ಯಾರಿಗೆ ಅರ್ಥಮಾಡಿಸಿಬೇಕೆಂಬುದೇ ದೊಡ್ಡ ಸವಾಲಾಗಿದೆ. ಎಲ್ಲರ ಭಾಷೆಯು ಅಧಿಕಾರದ ಭಾಷೆಯಾಗುತ್ತಿರುವುದು ವಿಷಾದನೀಯ. ಎಷ್ಟು ಗೊಂದಲ ಸ್ಥಿತಿ  ಕಲೆಗಳಿಗೆ ಇದೆ ಎಂದರೆ ಈ ಜಾತಿಗೆ, ಈ ಧರ್ಮದವರಿಗೆ ಮಾತ್ರ ಎನ್ನುವಂತಹ ಸಿನಿಮಾಗಳನ್ನು ನಿರ್ಮಾಣ ಮಾಡಬೇಕಾದ ಸ್ಥಿತಿ ಬಂದರೂ ಸಹ ಅಚ್ಚರಿ ಪಡಬೇಕಿಲ್ಲ. ಹಾಗಾದರೆ ನಮ್ಮಲ್ಲಿ ಪರಿಹಾರ ರೂಪದ ಮಾರ್ಗಗಳು, ಕಲೆಗಳು ಇಲ್ಲವೇ ಎಂದು ಪ್ರಶ್ನೆ ಹಾಕಿಕೊಂಡಾಗ, ಅವು ಇವೇ ತುಂಬ ಸಶಕ್ತವಾಗಿವೆ ಎನ್ನುವದು ಸಹ ಹಲವು ಚಿತ್ರಗಳು ಸಾಭಿತು ಮಾಡಿವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ‘ವಿಶ್ವಮಾನವ’ ಪ್ರಜ್ಞೆಯನ್ನು ಜಾಗೃತಗೊಳಿಸುವಂತಹ ಸಿನಿಮಾ ಡಾ.ಪುನೀತ ರಾಜಕುಮಾರ ಅವರ ಕನಸಿನ ಕೂಸು ‘ಗಂಧದಗುಡಿ’ ಇದೊಂದು ಡಾಕ್ಯುಮೆಂಟರಿ ಆದರೂ ಸಹ ಡಾ.ಪುನೀತ ಅವರು ಸಿನಿಮಾ ಎಂದೆ ಕರೆಯುತ್ತಿದ್ದರು. ಅದಕ್ಕೆ ಅರ್ಥ ಸಿನಿಮಾ ನೋಡಿದಾಗ ಹೊಳೆಯುತ್ತದೆ. ಇದು ಬೇರೆ ಡಾಕ್ಯುಮೆಂಟರಿ ಚಿತ್ರಗಳ ಹಾಗೆ ಗಂಭೀರವಾಗಿ ಸಾಗುವ ಮಾದರಿಯದಲ್ಲ. ಇದೊಂದು ಪ್ರಕೃತಿಯೊಂದಿಗಿನ ಭಾವನಾತ್ಮಕ ಪಯಣವಾಗಿದೆ. ಹಾಗಾಗಿ ಇದನ್ನು ಡಾಕ್ಯೂಡ್ರಾಮ ಎನ್ನಬಹುದು. 

ನಾವು ನೈತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಭ್ರಷ್ಟಗೊಂಡು ಕಳೆದುಕೊಂಡಿರುವ ಮುಗ್ಧತೆಯನ್ನು ಈ ಚಿತ್ರ ಮರಳಿ ಪಡೆಯಲು ಪ್ರೇರಿಪಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಸರಳತೆಯ ಶಿಖರ ‘ಅಪ್ಪು’ ಅವರು. ಅವರನ್ನು ದೊಡ್ಡ ಬೆಳ್ಳಿ ಪರದೆಯ ಮೇಲೆ ನೋಡುವ ಸಂತೋಷ ಅಪಾರವಾದದ್ದು, ಅದರ ಜೊತೆಗೆ ಅವರ ಹೇಳುವ ಕೊನೆಯ ಕಥೆ ಇದು ಎನ್ನುವ ನೋವು ಸಹ ಅಷ್ಟೆ ಅಪಾರವಾದದ್ದು. ನಮ್ಮ ಕನ್ನಡನಾಡಿನ ಅರಣ್ಯ ಸಂಪತ್ತನ್ನು ಈ ಚಿತ್ರದಲ್ಲಿ ಎಕ್ಸಪ್ಲೋರ್ ಮಾಡಲಾಗಿದೆ ಇದು ಈ ಚಿತ್ರದ ಭೌತಿಕ ಚಹರೆಯಾದರೆ. ಡಾ.ಪುನೀತ ರಾಜಕುಮಾರ ಅವರ ಪಯಣ ನಮ್ಮ ಅಂತರಂಗದ ಪಯಣವು ಆಗುತ್ತದೆ. ಇದನ್ನು ಇಷ್ಟು ಭಾವನಾತ್ಮಕವಾಗಿ ಹೇಳುತಿರುವುದಕ್ಕೆ  ಎರಡು ಮುಖ್ಯ ಕಾರಣಗಳೆಂದರೆ ಒಂದು ಡಾ.ಪುನೀತ ರಾಜಕುಮಾರ ಅವರಾದರೆ, ಇನ್ನೊಂದು ಕಾಡು. ಒಬ್ಬ ವ್ಯಕ್ತಿ ತನ್ನ ನಾಡಿನ ಬಗ್ಗೆ ಹೊಂದಿರುವ ಪ್ರೀತಿ ಮತ್ತು ತಿಳಿದುಕೊಳ್ಳುವ ಕುತೂಹಲವಿದ್ದರೆ ಎಂಥೆಂತ ಅಡ್ವೆಂಚರ್‌ಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಡಾ.ಪುನೀತ ರಾಜಕುಮಾರ ಅವರ ಈ ಪ್ರಯತ್ನ ಮತ್ತು ಶ್ರಮವೇ ಸಾಕ್ಷಿ. ನಾಗರಹೊಳೆಯಿಂದ ಅತ್ಯಂತ ಉತ್ಸಾಹದಿಂದ ಸಾಗುವ ಈ ಪಯಣದಲ್ಲಿ ಮಲೆನಾಡು, ಕರಾವಳಿ, ಕಾಳಿ ಹೀಗೆ ನಾಡಿನ ಅರಣ್ಯ ಸಂಪತ್ತು, ಪ್ರಾಣಿ-ಪಕ್ಷಿ, ನದಿ, ಸಮುದ್ರ ಎಲ್ಲವನ್ನು ಅತ್ಯಂತ ತಾಧ್ಯಾತ್ಮಕತೆಯಿಂದ ನಮ್ಮೆದರು ತೆರೆದಿಡುತ್ತದೆ. ತನ್ನ ನೆಲೆಯನ್ನು ಅರ್ಥೈಸಿಕೊಳ್ಳುವ ಆ ಮೂಲಕ ಜನರನ್ನು ಎಜ್ಯುಕೆಟ್ ಮಾಡುವ ಪ್ರಯತ್ನ ಭಾಗವಾಗಿಯೇ ಈ ಚಿತ್ರ ಮೂಡಿ ಬಂದಿದೆ.

ಚಿತ್ರದ ಆರಂಭದಿಂದ ಅಂತ್ಯದವರೆಗೆ ಡಾ.ಪುನೀತ ರಾಜಕುಮಾರನ್ನು ನೋಡುತ್ತಾ, ಅವರ ಮಾತನ್ನು ಕೇಳಬೇಕು ಎನಿಸುತ್ತದೆ. ಅವರ ಪ್ರತಿಯೊಂದು ಮಾತಿಗೂ ಇಡಿ ಥೇಟರ್ ಪ್ರತಿಕ್ರಿಯಿಸುವ ರೀತಿ ಅವರು ಎಲ್ಲರ ಮನೆಯ ಮಗನಾಗಿರುವುದಕ್ಕೆ ಸಾಕ್ಷಿಯಾಗಿತ್ತು. ಅವರು ಕಾಡಿಗೆ ತೆರೆದುಕೊಳ್ಳುವ ರೀತಿ, ಅಲ್ಲಿನ ವೈವಿಧ್ಯತೆಯನ್ನು ಅರಿಯುವ ಕುತೂಹಲ, ಅದನ್ನು ಮುಂದಿನ ಪೀಳಿಗೆ ಜೀವನಕ್ಕಾಗಿ ಉಳಿಸಬೇಕಂಬ ಕಾಳಜಿ ಇಂತಹ ಹಲವು ಭಾವನಗೆಳ ಅವರಲ್ಲಿನ ವಿಶ್ವಮಾನವತ್ವದ ಗುಣವನ್ನು ತೆರೆದಿಡುತ್ತ ಹೋಗುತ್ತವೆ. ಅದಕ್ಕಾಗಿಯೇ ಒಬ್ಬ ನಿಜವಾದ ಹೀರೂ ಯಾರು ಎಂದರೆ ‘ವಿಶ್ವಮಾನವ’ ಎನ್ನುವುದನ್ನು ಈ ಚಿತ್ರದಲ್ಲಿ ಹೇಳುವುದು. ಜಿಂಕೆಯ ಕಂಡಾಗ ಪ್ರೀತಿ, ಹುಲಿಯ ಗಾಂಭೀರ್ಯ, ಆನೆಯ ಧೈರ್ಯ, ಮಂಗಗಳ ಚೇಷ್ಟೆ, ಕರಡಿಯ ಸ್ವಾತಂತ್ರ್ಯ ಇವೆಲ್ಲವುಗಳನ್ನು ಡಾ.ಪುನೀತ ರಾಜಕುಮಾರ ಅವರ ಮೂಲಕವಾಗಿ ಅರಿಯುತ್ತಾ ಹೋಗುತ್ತೇವೆ. ಹೀಗೆ ತಮನ್ನು ತಾವು ಹೊಸ ಅಂಶಗಳಿಗೆ ತೆರೆದುಕೊಂಡಾಗ ಹಲವು ಭಯಗಳನ್ನು ಮೀರಿ ಹೊಸ ದೃಷ್ಟಿಕೋನಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತದೆ ‘ಹಾವಿನ’ ಭಯವನ್ನು ಅವರು ಮೀರುವುದೇ ಉದಾಹರಣೆಯಾಗಿದೆ. ಮಾನವನ ಅತಿಕ್ರಮಣದಿಂದ ತನ್ನ ನೆಲವನ್ನು ಕಳೆದುಕೊಳ್ಳವ ಪ್ರಾಣಿಗಳು ಆ ಸ್ಥಳದೊಂದಿಗಿನ ಸಂಬAಧವನ್ನು ತಮ್ಮ ಸ್ಮೃತಿಯಲ್ಲಿ ಉಳಿಸಿಕೊಂಡಿರುತ್ತವೆ, ಹೀಗಾಗಿಯೇ ಅವುಗಳು ತೋಟ, ಗದ್ದೆಗಳಿಗೆ ನುಗ್ಗವುದು. ನಿಜವಾಗಿ ಅದು ಅವುಗಳ ಸ್ಥಳವಾಗಿರುತ್ತದೆ. ಮನುಷ್ಯ ಅಕ್ರಮಣನ ಬುದ್ದಿ ಎಲ್ಲವನ್ನು ಕಬಳಿಸಲೂ ಪ್ರಯತ್ನಿಸುತ್ತದೆ. ಹೀಗಾಗಿಯೇ ಪ್ರಾಣಿಗಳು ನಶಿಸುತ್ತಿರುವುದು. ಪ್ರಾಣಿಗಳಿಗೆ ಮತ್ತು ನದಿಗಳಿಗೆ ತಮ್ಮ ಹರಿವಿನ ದಾರಿಯ ನೆನೆಪು ಇರುತ್ತದೆ ಎಂಬುದನ್ನು ಬಹು ಸುಂದರವಾಗಿ ಇದರಲ್ಲಿ ಅಭಿವ್ಯಕ್ತಗೊಂಡಿದೆ.

ಈ ಚಿತ್ರದಲ್ಲಿ ಕಾಡಿಗೆ ಸಂಬಂಧಿಸಿದ ಜನಪದವಿದೆ. ಅದರಲ್ಲಿ ಮುಖ್ಯವಾದದ್ದು ನಮ್ಮನ್ನು ನಿರಂತರವಾಗಿ ಎಚ್ಚರದಲ್ಲಿಡುವ ಒಂದು ತೋಳದ ಕಥೆಯಿದೆ. ಅದು ಕೆಡಕು ಅನ್ನುವುದನ್ನು ಸಹ ನಾವು ಹೇಗೆ ಸ್ವೀಕರಿಸಬೇಕೆಂಬ ಮಾದರಿಯನ್ನು ಒದಗಿಸುತ್ತದೆ. ಇಂತಹ ಜೀವನಪಾಠವನ್ನು ತಿಳಿಸುವಂತಹ ಹಲವು ಪ್ರಸಂಗಗಳು ಇದರಲ್ಲಿವೆ. ಹೀಗಾಗಿ ಜನಪದವು ಕಾಡಿನೊಂದಿಗೆ ಸ್ಥಾಪಿಸಿಕೊಂಡ ತಾಧ್ಯಾತ್ಮ ಸಂಬಂಧದ ಅರಿವು ನಮಗಾಗುತ್ತದೆ. ಕಾಡ ಸಂರಕ್ಷಣೆಗಾಗಿ ‘ದೇವರಕಾಡು’ ಎನ್ನುವ ಪರಿಕಲ್ಪನೆಯನ್ನು ಜನ ಬೆಳಸಿಕೊಂಡಿದ್ದಾರೆ. ಆ ಮೂಲಕವಾಗಿ ಎಷ್ಟೋ ಕಾಡು ರಕ್ಷಣೆಯಾಗಿದೆ. ಅದು ಅವರ ನಂಬಿಕೆಯಾಗಿದೆ. ಅದು ದೇವರಕಾಡು ಆದರೆ ಡಾ.ಪುನೀತ ರಾಜಕುಮಾರ ಕಾಡು ಒಳಗೆ ಹೋಗವುದೇ ದೇವರ ಪ್ರವೇಶ ಎಂಬಂತಾಗಿದೆ. ಅಲಲ್ಲಿ ಸಿನಿಮಾದ ಸಾಲುಗಳ ಮೂಲಕ ಜೀವನ ಪಾಠವಿದೆ. ನದಿಯಂತಹ ಬದುಕನ್ನು ನಾವು ರೂಪಿಸಿಕೊಳ್ಳವ ಅನಿವಾರ್ಯತೆಯನ್ನು ಚಿತ್ರ ಒತ್ತಿ ಹೇಳುತ್ತದೆ. ನಿಸರ್ಗ ಸಹಜ ಚಲನೆಯ ಬದುಕು ಎಷ್ಟೊಂದು ಸುಂದರವಾಗಿರುತ್ತದೆ ಎನ್ನುವುದು ಈ ಪಯಣ ಸಾಕ್ಷಿಯಾಗಿ ನಿಲ್ಲುತ್ತದೆ. ನಮ್ಮ ಪರಿಸರ ಸಮೃದ್ಧವಾಗಿ ಚೆನ್ನಾಗಿ ರೂಪಗೊಳ್ಳಬೇಕಾದರೆ ಅದಕ್ಕೆ ಕಾಡಿನ ರಕ್ಷಣೆ ಬಹುಮುಖ್ಯ. ಅದನ್ನು ಜನಪದರು ರಕ್ಷಿಸುವ ಪರಿ, ಸರಕಾರದಿಂದ ನೇಮಕಗೊಂಡ ಅರಣ್ಯ ಅಧಿಕಾರಿಗಳು ರಕ್ಷಿಸಿಸುವ ವಿಧಾನದ ಪರಿಚಯ ಇದರಲ್ಲಿದೆ. ಅದರ ಜೊತೆಗೆ ನಮ್ಮ ಜವಾಬ್ದಾರಿ ಏನು ಎಂದು ಪುನೀತ ರಾಜಕುಮಾರ ನೇರವಾಗಿ ತಿಳಿಸುತ್ತಾರೆ.

ಈ ಚಿತ್ರವನ್ನು ಮುಖ್ಯವಾಗಿ ಎಲ್ಲರೂ ನೋಡುವುದು ಡಾ.ಪುನೀತ ರಾಜಕುಮಾರ ಅವರಿಗಾಗಿ ಎನ್ನುವುದು ಸುಳ್ಳಲ್ಲ. ಕಮರ್ಷಿಯಲ್ಲ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅವರನ್ನು ನೋಡಿರುತ್ತೇವೆ. ಡಾ.ಪುನೀತ ರಾಜಕುಮಾರ ಅವರನ್ನು ಅವರಾಗಿಯೇ ನೋಡುವ ಅವಕಾಶ ಇದಾಗಿದೆ. ಇದರಲ್ಲಿ ಮುಖ್ಯವಾಗಿ ಕಂಡು ಬರುವ ಅವರ ಗುಣವೆಂದರೆ ‘ಸರಳತೆ’. ತಾನೊಬ್ಬ ಸೂಪರ್‌ಸ್ಟಾರ್ ಎನ್ನುವ ಹಮ್ಮಬಿಮ್ಮು ಇಲ್ಲದ ಅವರ ವರ್ತನೆ ಆದರ್ಶಪ್ರಾಯವಾದದ್ದು. ಈ ಸರಳತೆ ಕೃತಕವಾದುದಲ್ಲ ಎನ್ನುವುದು ಚಿತ್ರವನ್ನು ನೋಡುತ್ತಿರುವಾಗ ನಮಗೆ ಅನುಭವಕ್ಕೆ ಬರುತ್ತದೆ. ಹಾಗಾಗಿಯೇ ಅವರಲ್ಲಿನ ‘ವಿಶ್ವಮಾನವ’ ನಮಗೆ ಗೋಚರವಾಗುತ್ತಾನೆ. ಪುನೀತ ಕೇವಲ ಒಂದು ಭೌತಿಕ ಚಹರೆ ಅಲ್ಲ; ನಮ್ಮೊಳಗಿನ ವಿಶ್ವಮಾನವ, ನಿಜವಾದ ಹೀರೊ ಯಾರು ಎಂದರೆ ‘ವಿಶ್ವಮಾನವ’ ಕುವೆಂಪು ನೀಡಿದ ಈ ಪರಿಕಲ್ಪನೆಯನ್ನು ಸಾಧ್ಯವಾಗಿಸುವುದು ಪುನೀತ ಎನ್ನುವಂತಹ  ವ್ಯಕ್ತಿತ್ವ ಎಂದರೆ ಉತ್ಪ್ರೇಕ್ಷೆಯಾಗಲಾರದು.  ಈ ಚಿತ್ರ ನೀಡುವ ಬಹುದೊಡ್ಡ ‘ಕಾಣ್ಕೆ’ ಎಂದರೆ ಅಹಂ ನಿರಸನ.

ತಾಂತ್ರಿಕ ದೃಷ್ಟಿಯಿಂದ ಎಲ್ಲದರಲ್ಲೂ ಅತ್ಯುತ್ತಮವಾಗಿದೆ. ಅಶ್ವಿನಿ ಪುನೀತರಾಜಕುಮಾರ ಅವರ ಮಾತುಗಳಿಂದ ಆರಂಭವಾಗುವ ಈ ಚಿತ್ರದ ಕಥನವನ್ನು ನಿರ್ದೇಶಕರಾದ ಅಮೋಘವರ್ಷರವರು ಕಥಿಸುತ್ತಾರೆ. ತುಂಬಾ ಬುದ್ಧಿವಂತಿಕೆಯಿಂದ ಸಂಕಲನ ಮಾಡಿದ್ದಾರೆ ಹೀಗಾಗಿ ಇದನ್ನು ಆರ್ಗಾನಿಕಾಗಿ  ಕಟ್ಟಲು ಸಾಧ್ಯವಾಗಿದೆ. ಅದ್ಬುತವಾದ ಪ್ರಕೃತಿಯ ಚಿತ್ರಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಅದಕ್ಕೆ ಸಿನಿಮಾಟೋಗ್ರಾಫರ್ ಪ್ರತೀಕ ಶೆಟ್ಟಿ ಅವರಿಗೆ ಅಭಿನಂದಿಸಬೇಕು. ಲ್ಯಾಂಡಸ್ಕೇಪ್ ಡ್ರೋಣ್ ಶಾಟ್ಸ್ ಗಳು ಕಾಡಿನ ರಮ್ಯತೆಯ ಅನುಭವನ್ನು ನಮಗೆ ಒದಗಿಸುತ್ತದೆ. ಇದಕ್ಕೆ ಪೂರಕವಾದದ್ದು ಚಿತ್ರದ ಅಜನೀಶ ಲೋಕನಾಥ ಅವರ ಸಂಗೀತ ಪ್ರತಿಯೊಂದು ದೃಶ್ಯಕ್ಕೂ ಅವಶ್ಯವಿರುವ ಹಿನ್ನೆಲೆ ಸಂಗೀತ ಅದ್ಬುತವಾಗಿದೆ. ಸಮುದ್ರದ ನೀರಿನಾಳದಲ್ಲಿನ ದೃಶ್ಯ ಕಣ್ಣಿಗೆ ತಂಪನೆರೆಯುತ್ತಿದ್ದರೆ, ಸಂಗೀತ ನಮ್ಮನ್ನು ಆ ಲೋಕದೊಳಗೆ ಕರದುಕೊಂಡು ಹೋಗುತ್ತದೆ. ಎಂದೂ ಮುಗಿಯದ ಚಿತ್ರ ಇದಾಗಬೇಕಿತ್ತು ಎನಿಸದೆ ಇರದು, ಚಿತ್ರ ಮುಗಿದರೂ ಸಹ ಥೇಟರ್‌ನಿಂದ ಬಹಳಷ್ಟು ಜನಕ್ಕೆ ಎದ್ದು ಹೊರಬರಲು ಆಗುತ್ತಿರಲಿಲ್ಲ. ಕಾರಣವೆಂದರೆ ಹೃದಯಭಾರ. ಅಪ್ಪು ಕರ್ನಾಟಕ ರತ್ನ, ಹೃದಯರತ್ನ.
Leave a Reply

Your email address will not be published. Required fields are marked *

error: Content is protected !!