ಹುಲ್ಲೂರ ಗ್ರಾ.ಪಂ ಎದುರು ಪ್ರತಿಭಟನೆ

145

ಪ್ರಜಾಸ್ತ್ರ ಸುದ್ದಿ

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಹೆಸರಿನಲ್ಲಿ ಅವರ ಮಕ್ಕಳು ದರ್ಬಾರ್ ನಡೆಸಿದ್ದಾರೆ ಎಂದು ಆರೋಪಿಸಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯ ಶಿವಾನಂದ ‌ಲಮಾಣಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹುಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಮಾದರ ಪುತ್ರ ಕಲ್ಮೇಶ ಮಾದರ, ಉಪಾಧ್ಯಕ್ಷೆ ಸಿದ್ದಮ್ಮ ಓಲೇಕಾರ ಪುತ್ರ ವಿನೋದ ಓಲೇಕಾರ ಹಾಗೂ ಪ್ರಭಾರಿ ಅಭಿವದ್ಧಿ ಅಧಿಕಾರಿ ರಾಜೇಂದ್ರ ಎಕ್ಸಂಬಿ ಅವರು, ತಮ್ಮ ಮಾತು ಕೇಳುವ ನಾಲ್ಕು ಸದಸ್ಯರನ್ನು ಸೇರಿಸಿಕೊಂಡು ಸಾಮಾನ್ಯ ಸಭೆ ನಡೆಸದೆ ಸರ್ವಾಧಿಕಾರಿತನ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಸವ ವಸತಿ ಯೋಜನೆಯ ಆಯ್ಕೆ ಪ್ರಕ್ರಿಯೆ ತಡೆಗೆ ಕೋರಿ ನಾನು 15 ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದೇನೆ. ಅದಕ್ಕೆ ಕ್ಯಾರೆ ಅನ್ನದೆ ತಾಲೂಕು ಪಂಚಾಯ್ತಿ ಯೋಜನಾಧಿಕಾರಿ ಖುಭಾಸಿಂಗ್ ಜಾಧವ ಅವರ ಕುಮ್ಮಕ್ಕಿನಿಂದ ತರಾತುರಿಯಲ್ಲಿ 72 ಮನೆಗಳನ್ನು ಆಯ್ಕೆ ಮಾಡಿ ಜಿಪಿಎಸ್ ಮಾಡುವ ಮೂಲಕ ಸರ್ಕಾರದ ಆದೇಶ ಗಾಳಿಗೆ ತೂರಲಾಗಿದೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಮನೆ ಇದ್ದವರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂದು ಸದಸ್ಯ ಶಿವಾನಂದ ಲಮಾಣಿ ಆರೋಪಿಸಿದ್ದಾರೆ.

ಪ್ರಭಾರಿ ಪಿಡಿಓ ರಾಜೇಂದ್ರ ಎಕ್ಸಂಬಿ, ನೂತನ ಪಿಡಿಓ ಅರವಿಂದ ಲೋನಾರಮಠ ಹರಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ತಾಲೂಕು ತಾಲೂಕು ಪಂಚಾಯ್ತಿ ಇಒ, ಜಿಲ್ಲಾ ಪಂಚಾಯ್ತಿ ಸಿಇಒ ಅವರು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯ ಶಿವಾನಂದ ಲಮಾಣಿಗೆ ಸದಸ್ಯರಾದ ದೀಲಿಪಕುಮಾರ ನಾಯಕ, ಅಶೋಕಗೌಡ ಬಿರಾದಾರ ಬೆಂಬಲ ನೀಡಿದರು.




Leave a Reply

Your email address will not be published. Required fields are marked *

error: Content is protected !!