ಬ್ರೇಕಿಂಗ್ ನ್ಯೂಸ್
Search

ಉಪ ಕದನ 23ರ ಮಹಾ ಸಮರಕ್ಕೆ ದಿಕ್ಸೂಚಿ ಆಗುತ್ತಾ?

194

ಪ್ರಜಾಸ್ತ್ರ ವಿಶೇಷ ವರದಿ, ನಾಗೇಶ ತಳವಾರ

ಸಿಂದಗಿ: ಹಾವೇರಿಯ ಹಾನಗಲ್ ಹಾಗೂ ವಿಜಯಪುರದ ಸಿಂದಗಿ ವಿಧಾನಸಭೆ ಉಪ ಚುನಾವಣೆ ಕಣ ರಂಗೇರಿದೆ. ರಾಜ್ಯ ನಾಯಕರು ಸರದಿ ಮೇಲೆ ಎರಡೂ ಕ್ಷೇತ್ರಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಹೇಗಾದರೂ ಮಾಡಿ ಎರಡೂ ಕಡೆ ಗಲ್ಲಲ್ಲೇಬೇಕು ಅನ್ನೋ ಹಠದಲ್ಲಿ ಅಖಾಡದಲ್ಲಿ ಆರ್ಭಟಿಸುತ್ತಿದ್ದಾರೆ.

ಹಾವೇರಿಯಲ್ಲಿ ಮರಾಠ ಸಮುದಾಯದ ಶ್ರೀನಿವಾಸ್ ಮಾನೆಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಇವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲವಿದೆ. ಹೊಸ ಮುಖಕ್ಕೆ ಅವಕಾಶ ನೀಡಿರುವ ಬಿಜೆಪಿ ಶಿವರಾಜ್ ಸಜ್ಜನರ್ ಗೆ ಕಣಕ್ಕೆ ಇಳಿಸಿದೆ. ಜೆಡಿಎಸ್ ನಿಂದ ನಿಯಾಜ್ ಶೇಕ್ ಸ್ಪರ್ಧಿಸಿದ್ದಾರೆ. ಇಲ್ಲಿ ಜಾತಿಯ ಲೆಕ್ಕಾಚಾರದ ಜೊತೆಗೆ ಸಿಎಂ ಬೊಮ್ಮಾಯಿ ತವರು ಜಿಲ್ಲೆಯಾಗಿರುವುದರಿಂದ ಬಿಜೆಪಿಗೆ ಗೆಲುವು ಮುಖ್ಯವಾಗಿದೆ. ಇನ್ನು 2018ರ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಮಾನೆ ‘ಕೈ’ಗೆ ಬಲ ತುಂಬಲು ಸಿದ್ದರಾಮಯ್ಯ, ಡಿಕೆಶಿ ಸಜ್ಜಾಗಿದ್ದಾರೆ. ಇವರಿಬ್ಬರ ನಡುವಿನ ಕದನಕ್ಕೆ ಒಂದಿಷ್ಟು ಬ್ರೇಕ್ ಹಾಕಲು ತೆನೆ ಮಹಿಳೆ ಕಣದಲ್ಲಿದ್ದಾಳೆ.

ಇನ್ನು ಸಿಂದಗಿ ಕ್ಷೇತ್ರಕ್ಕೆ ಬಂದರೆ, ಎರಡು ಬಾರಿ ಶಾಸಕರಾಗಿದ್ದ ಭೂಸನೂರಗೆ 2018ರಲ್ಲಾದ ಸೋಲು ಮರೆಯಲು ಹಾಗೂ ಮುಂದಿನ ರಾಜಕೀಯ ಭವಿಷ್ಯಕ್ಕೆ ಈ ಗೆಲುವು ಬೇಕು. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಗೆ ಇದು ಮೊದಲ ಚುನಾವಣೆ. ಕ್ಷೇತ್ರದಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ವಿಜಯ ಸಾಧಿಸಲೇಬೇಕು. ಜೆಡಿಎಸ್ ಇಲ್ಲಿಯೂ ಸಹ ಅಲ್ಪಸಂಖ್ಯಾತ ಅಭ್ಯರ್ಥಿಯ ದಾಳ ಉರುಳಿಸಿದ್ದು, ನಾಜಿಯಾ ಶಕೀಲ್ ಅಂಗಡಿ ಗೆಲುವಿನ ಮೂಲಕ ಈ ಭಾಗದಲ್ಲಿ ಜೆಡಿಎಸ್ ಗೆ ಇನ್ನು ಶಕ್ತಿಯಿದೆ ಅನ್ನೋದು ತೋರಿಸಬೇಕಿದೆ.

ಈ ಚದುರಂಗದಾಟದಲ್ಲಿ ಅಭಿವೃದ್ಧಿಯ ಮಂತ್ರ, ಅನುಕಂಪದ ಮಾತು  ಜಪಿಸಿದರೂ ಕೂಡಿ ಕಳಿಯುವ ಜಾತಿ ಲೆಕ್ಕಾಚಾರ ಬಿಡಲು ಸಾಧ್ಯವೇ ಇಲ್ಲ. ಕೆಲ ಅಂಕಿಸಂಖ್ಯೆಗಳು ಅಹಿಂದ ವರ್ಗದವರು ಹೆಚ್ಚಾಗಿದೆ ಅಂದರೆ, ಇನ್ನು ಕೆಲವು ಮೇಲ್ವರ್ಗದವರ ಮತಗಳು ಹೆಚ್ಚಾಗಿವೆ ಅಂತಿವೆ. ಇದೇನೆ ಇದ್ದರೂ ಮತ ಹಾಕುವ ಪ್ರಭುಗೆ ಏನು ಅನ್ನೋದು ಗೊತ್ತಿದೆ. ಅಭ್ಯರ್ಥಿಗಳ ಸೋಲು ಗೆಲುವಿನ ಜೊತೆಗೆ ಪಕ್ಷಗಳ ಭವಿಷ್ಯ ಸಹ ಇದೆ. ಈ ಚುನಾವಣೆ ಮುಗಿದು ಏಳೆಂಟು ತಿಂಗಳಲ್ಲೇ 2023ರ ಚುನಾವಣೆಗೆ ಸಜ್ಜಾಗಬೇಕು. ಈ ಕಾರಣಕ್ಕೆ ಉಪ ಕದನದ ಗೆಲುವು ಮಹಾ ಸಮರಕ್ಕೆ ದಿಕ್ಸೂಚಿಯಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.




Leave a Reply

Your email address will not be published. Required fields are marked *

error: Content is protected !!