ಮಾತೃಭಾಷೆಯ ಹೆಬ್ಬಾಗಿಲು ಮುಚ್ಚುತ್ತಿದ್ದೇವೆ: ಮುಕ್ತಾಯಕ್ಕ ಕಟ್ಟಿ

303

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಅಂತರಂಗದ ಭಾವ ತೀವ್ರತೆಯನ್ನು ಹೊರಹಾಕಲು ಸಾಧ್ಯವಾಗುವುದು ತಾಯಿ ಭಾಷೆಯಿಂದ ಮಾತ್ರ ಸಾಧ್ಯ. ಆದರೆ, ನಾವು ಅದನ್ನು ಮರೆತು ಮಾತೃಭಾಷೆ ಅನ್ನೋ ಹೆಬ್ಬಾಗಿಲು ಮುಚ್ಚಿ ಇಂಗ್ಲಿಷ್ ಅನ್ನೋ ಕಿಟಕಿಯಿಂದ ಜಗತ್ತನ್ನು ನೋಡಲು ಹೊರಟಿದ್ದೇವೆ ಎಂದು ಉಪನ್ಯಾಸಕಿ ಮುಕ್ತಾಯಕ್ಕ ಕಟ್ಟಿ ಹೇಳಿದರು.

ಪಟ್ಟಣದ ಮಲ್ಲು ಹಿರೋಳ್ಳಿ ಅವರ ನಿವಾಸದಲ್ಲಿ ಮಂಗಳವಾರ ಸಂಜೆ ಮಾಧ್ಯಮರಂಗದ ವತಿಯಿಂದ ಅಂತರಾಷ್ಟ್ರೀಯ ಮಾತೃಭಾಷಾ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ‘ಅನ್ನದ ಭಾಷೆಯಾಗಿ ಕನ್ನಡ’ ಎನ್ನುವ ಕುರಿತು ಮಾತನಾಡಿದರು. ಭಾಷೆ ಚೆನ್ನಾಗಿದೆ. ಮನಕ್ಕೆ ಮುಟ್ಟುತ್ತದೆ ಎಂದರೆ ಸಾಲದು. ಅದನ್ನು ಎಲ್ಲೆಡೆ ಪಸರಿಸುವ ಅದನ್ನು ಉಳಿಸಿಕೊಂಡು‌ ಹೋಗುವ ಕೆಲಸವಾಗಬೇಕು. ಇವತ್ತಿನ ಇಂಗ್ಲಿಷ್ ನ ವ್ಯಾಮೋಹಕ್ಕೆ ಸಿಲುಕಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಚೀನಾ ತನ್ನದೆ ಭಾಷೆಯಲ್ಲಿಯೇ ವೈಜ್ಞಾನಿಕ, ತಾಂತ್ರಿಕ ಕ್ರಾಂತಿ ಮಾಡಿರುವುದನ್ನು ನಾವು ಅರಿತುಕೊಳ್ಳಬೇಕಿದೆ. ಕನ್ನಡದಲ್ಲಿ ಓದಿದ ನಮ್ಮ ದೇಶದ ಖ್ಯಾತ ವಿಜ್ಞಾನಿ ಭಾರತರತ್ನ ಸಿ.ಎನ್ ಆರ್ ರಾವ್ ನಮ್ಮ ಕಣ್ಮುಂದೆ ಇದ್ದಾರೆ.

ವಿಮಾನ, ರೈಲ್ವೆ ವಲಯ ಸೇರಿ ಎಲ್ಲೆಡೆ ಕನ್ನಡ ಬರಬೇಕು. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ತಾಯಿ ಭಾಷೆ ಕಡೆಗಣಿಸಬಾರದು. ಹೀಗಾಗಿ ವಿಶ್ವದ ಜ್ಞಾನವನ್ನು ಕನ್ನಡಕ್ಕೆ ಅನುವಾದ ಮಾಡಿ ಅದರಲ್ಲಿಯೇ ಅಧ್ಯಯನ ಮಾಡಿ, ಉದ್ಯೋಗ ಮಾಡಬೇಕು. ಪರ ಊರಿನಿಂದ ಬಂದವರ ಜೊತೆಗೆ ಅವರ ಭಾಷೆಯಲ್ಲಿ ಮಾತನಾಡುವ ಬದಲು ನಮ್ಮ ಭಾಷೆಯನ್ನು ಅವರಿಗೆ ಕಲಿಸೋಣ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಯುವ ಲೇಖಕ ಅಶೋಕ ಬಿರಾದಾರ ಮಾತನಾಡಿ, ಸಾವಿರಾರು ವರ್ಷಗಳ‌ ಇತಿಹಾಸ ಇರುವ ಕನ್ನಡ ಜೀವ ಸಂಸ್ಕೃತಿ. ಪ್ರೀತಿ, ಪ್ರೇಮ, ಸೌಜನ್ಯ ಕಲಿಸುತ್ತೆ ಎಂದರು. ಬೇಂದ್ರೆ ಅವರ ಮಾತೃಭಾಷೆ ಮರಾಠಿ, ಗೋವಿಂದ ಪೈ ಅವರದ್ದು ಕೊಂಕಣಿ, ಜೆ.ಪಿ ರಾಜರತ್ನಂ ಅವರದ್ದು ತಮಿಳು. ಆದರೆ, ಅವರು ಕನ್ನಡವನ್ನೇ ತಾಯಿ‌ ಭಾಷೆ ಎಂದು ಸಾಹಿತ್ಯದಲ್ಲಿ ಅಮೂಲ್ಯ ಕೊಡುಗೆ ನೀಡಿದರು. ಆ ನಿಟ್ಟಿನಲ್ಲಿ ನಾವೆಲ್ಲ ಸಾಗಬೇಕು. ಯಾಕಂದ್ರೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನೋ ಸಂಚು ನಡೆಯುತ್ತಿದೆ. ಹೀಗಾಗಿ ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಸಹ ಎಲ್ಲಡೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಮಾಧ್ಯಮರಂಗ ತಂಡದ ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯ ರಮೇಶ ಪೂಜಾರಿ, ರಾಘು ಜೋಶಿ, ದೇವು ಮಾಕೊಂಡ, ಲಕ್ಕಣ್ಣ ಬೀರಗೊಂಡ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಜಶೇಖರ ಶೆಟ್ಟಿ, ಬಸವರಾಜ ಕುರನಳ್ಳಿ, ಸಿದ್ದು ಹದ್ನೂರ, ಪದ್ಮಾರವಿ, ಸಹನಾ, ಗೌರಿ, ಶ್ರೇಯಸ್ ಸೇರಿ ಅನೇಕರು ಉಪಸ್ಥಿತರಿದ್ದರು. ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ನಿರೂಪಿಸಿದರು. ಸಂಜೀವಕುಮಾರ ಡಾಂಗಿ ಸ್ವಾಗತಿಸಿದರು.
Leave a Reply

Your email address will not be published. Required fields are marked *

error: Content is protected !!