ಖಾಲಿ ಕಿಸೆಯಲ್ಲಿ ಕಂಡ ಕನಸು…

882

ಪ್ರಿಯ ಸ್ನೇಹಿತರೆ, ಇದು ನನ್ನ ವೃತ್ತಿ ಬದುಕಿನ ಹೊಸ ಅನುಭವ. ಹೊರಟ ಹಾದಿ ಹೊಸದಲ್ಲ. ಆದರೆ, ಈ ಪಯಣದಲ್ಲಿ ತೆಗೆದುಕೊಂಡ ನಿರ್ಧಾರ ಹೊಸತು. ಹೀಗಾಗಿ ಮೊದಲ ಅಂಕಣದಲ್ಲಿ ನನ್ನ ವೃತ್ತಿ ಬದುಕಿನ ಬಗ್ಗೆ ಒಂದಿಷ್ಟು ಮೆಲಕು ಹಾಕುತ್ತೇನೆ. ಮುಂದಿನ ಅಂಕಣದಿಂದ ಪತ್ರಕರ್ತನಾಗಿ ಬದುಕು ಕಟ್ಟಿಕೊಳ್ಳುವ, ಕಟ್ಟಿಕೊಂಡಿರುವ ನನ್ನ ಸಂಗಾತಿಗಳ ಜೀವನಗಾಥೆಯನ್ನ ಹೇಳುತ್ತೇನೆ.

ಕಳೆದ 7 ವರ್ಷಗಳಿಂದ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ನಾನು, ಒಂದು ಸಂಜೆ ಮನೆಗೆ ಫೋನ್ ಮಾಡಿ ನನ್ನ ನಿರ್ಧಾರ ತಿಳಿಸಿದೆ. 35 ಸಾವಿರ ರೂಪಾಯಿ ಸಂಬಳ ಪಡೆಯುತ್ತಿರುವವನು ನೀನು. ಈಗ್ಲೇ ಇದೆಲ್ಲ ಯಾಕೆ ಬೇಕು ಅಂತಾ ಯಾರೊಬ್ಬರೂ ಹೇಳಲಿಲ್ಲ. ನನ್ನ ಮಾತುಗಳಿಗೆ ಕಿವಿ ಕೊಟ್ಟು, ಮರು ಪ್ರಶ್ನೆಯಿಲ್ಲದೆ ಗ್ರೀನ್ ಸಿಗ್ನಲ್ ಕೊಟ್ಟರು. ಹೀಗಾಗಿ ಏಕಾಏಕಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರ ಬಂದೆ. ಇದಕ್ಕೆ ನನ್ನ ಧೈರ್ಯ ಅಂತಿರೋ.. ಹುಂಬತನ ಅಂತಿರೋ ಗೊತ್ತಿಲ್ಲ. ಹೀಗೆ ಆಚೆ ಬಂದ ನನಗೆ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇತ್ತು.

ನಾನು ಈ ಕನಸು ಕಂಡಿದ್ದು, ಖಾಲಿ ಕಿಸೆಯಲ್ಲಿ ತಿರುಗುತ್ತಿದ್ದಾಗ. ಬರುವ ಸಂಬಳದಲ್ಲಿ ಒಂದಿಷ್ಟು ಪಿಜಿಗೆ ಕಟ್ಟಿ, ಬಸ್ ಪಾಸ್ ಪಡೆದ ಮೇಲೆ ಉಳಿಯುವ ಹಣದಲ್ಲಿ ತಿಂಗಳ ಪೂರ್ತಿ ಈ ಬಾಡಿ ಓಡಬೇಕಿತ್ತು. ಅಂತಹ ಹೊತ್ತಿನಲ್ಲಿ ಮುಂದೊಂದು ದಿನ ನನ್ನದೆಯಾದ ಪತ್ರಿಕೆ ಶುರು ಮಾಡಬೇಕು ಅನ್ನೋ ಕನಸು ಕಂಡೆ. ಅದು ಇದೀಗ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ. ಈ ಬಗ್ಗೆ ನೂರು ಮಂದಿ ನೂರು ತರ ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ್ದು ನನ್ನ ಒಳ್ಳೆಯದಕ್ಕೆ ಅಂತಾ ಗೊತ್ತು. ಅವರ ಸಲಹೆ ರೂಪದ ಎಚ್ಚರಿಕೆಯ ಮಾತುಗಳನ್ನ ಕೇಳಿಸಿಕೊಳ್ಳುತ್ತ ಮುಂದೆ ಸಾಗುತ್ತಿದ್ದೇನೆ. ನನ್ನ ಈ ಕೆಲಸದಿಂದ ಏನೋ ಸಾಧಿಸಿ ಬಿಡುತ್ತೇನೆ ಅಥವ ಒಂದೇ ದಿನದಲ್ಲಿ ಸಕ್ಸಸ್ ಸಿಗುತ್ತೆ ಅನ್ನೋ ಭ್ರಮೆಯಲ್ಲಿ ಇಲ್ಲ.

‘ಪ್ರಜಾಸ್ತ್ರ’ ನನ್ನ ಕಲ್ಪನೆಯ ಕೂಸು. ಇಷ್ಟು ವರ್ಷ ನನ್ನೊಳಗೆ ಅಡಗಿ ಕುಳಿತಿತ್ತು. ಇನ್ನು ಇರಲು ಸಾಧ್ಯವಿಲ್ಲ ಅನ್ನೋ ಹೊತ್ತಿನಲ್ಲಿ ಹೊರ ಬಂದಿದೆ. 2013ರಲ್ಲಿ ಎಂಎ ಪತ್ರಿಕೋದ್ಯಮ ಕೋರ್ಸ್ ಮುಗಿದ ನಂತರ, ‘TV9’ ನಲ್ಲಿ ಕಾಪಿ ಎಡಿಟರ್ ಆಗಿ ಸೇರಿಕೊಂಡೆ. ಮುಂದೆ 2015ರಲ್ಲಿ ‘BTV’ಯಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಶುರು ಮಾಡಿದೆ. ಬಳಿಕ 2018ರ ನಡುವೆ ಅಲ್ಲಿಂದ ಹೊರ ಬಂದೆ. ಹಿರಿಯರೆಲ್ಲ ಸೇರಿಕೊಂಡು ‘G6’ ಅನ್ನೋ ಹೊಸ ಚಾನಲ್ ಶುರು ಮಾಡುತ್ತಿದ್ದರು, ಅವರ ಜೊತೆಯಾದೆ. ಐದಾರು ತಿಂಗಳು ಕೆಲಸ ಮಾಡಿದೆ. ಲೋಗೋ ಸಹ ಲಾಂಚ್ ಆಯಿತು. ಆದರೆ, ನಮ್ಮ ಹಣೆಬರಹಕ್ಕೋ ಓನರ್ ಬಾಡ್ ಲಕ್ಕೋ ಗೊತ್ತಿಲ್ಲ. ಚಾನಲ್ ಹುಟ್ಟುವ ಮೊದ್ಲೇ ಸತ್ತು ಹೋಯಿತು..!

ಮುಂದೇನು ಅನ್ನೋ ಟೈಂನಲ್ಲಿ ‘NewsX Kannada’ ಚಾನಲ್ ಬಂತು. ಅಲ್ಲಿ ಕೆಲಸಕ್ಕೆ ಸೇರಿದೆ. ಒಂದಿಷ್ಟು ತಿಂಗಳು ಕೆಲಸ ಮಾಡಿದೆ. ಅದೇನೋ ಗೊತ್ತಿಲ್ಲ, ಈ ಕೆಲಸ ಸಾಕು ಅನಿಸಿತು. ಡೆಸ್ಕ್ ನಲ್ಲಿ ಕೆಲಸ ಮಾಡಿ ಮಾಡಿ ಹೈಡ್ ಆಗುತ್ತಿದ್ದೇನೆ ಅನ್ನೋ ಫೀಲ್ ಶುರುವಾಯ್ತು. ಸ್ವಂತ ಪತ್ರಿಕೆ ಕನಸು ಆಗಾಗ ಡಿಸ್ಟರ್ಬ್ ಮಾಡುತ್ತಿತ್ತು. ಸೀದಾ ಎದ್ದು ಬಂದೆ. ಹೀಗೆ ನಡೆದ ಸಂಚಾರದಲ್ಲಿ ಗಳಿಸಿದ್ದೇನು..? ಕಳೆದುಕೊಂಡಿದ್ದೇನು..?

ಪತ್ರಕರ್ತನಾಗಬೇಕೆಂಬ ಕನಸು ಕಟ್ಟಿಕೊಂಡು ಈ ಜಗತ್ತಿಗೆ ಕಾಲಿಡುವವರ ಕಣ್ಣುಗಳಲ್ಲಿನ ಆಸೆ ಕನಸುಗಳು ಏನಾಗಿರುತ್ತೆ. ಇಲ್ಲಿಗೆ ಬಂದ ಮೇಲೆ ಅವರ ನಿಜವಾದ ಬದುಕು ಏನು ಅನ್ನೋದರ ಬಗ್ಗೆ ಈ ಕಾಲಂನಲ್ಲಿ ಪ್ರತಿ ಭಾನುವಾರ ಬರೆಯುತ್ತೇನೆ. ಯಾಕಂದರೆ, ಚಿಮಣಿ ಬುಡದಲ್ಲಿರುವ ಕತ್ತಲೆಯನ್ನ ನಾವೇ ಗುರುತಿಸಬೇಕಲ್ವೆ. ಇದಕ್ಕೆ ನಿಮ್ಮ ಸಹಕಾರ ಹೀಗೆ ಇರಲಿ ಅಂತಾ ಕೇಳಿಕೊಳ್ಳುತ್ತೇನೆ.

ನಿಮ್ಮ ಅಭಿಪ್ರಾಯಗಳಿಗೆ :Prajaastra18@gmail.com


TAG


Leave a Reply

Your email address will not be published. Required fields are marked *

error: Content is protected !!