ಕರುನಾಡಿಗೆ ಮಿಡಿಯದ ಚೌಕಿದಾರ್ ಹೃದಯ!

525

ನಾಗೇಶ ತಳವಾರ

ಇದೀಗ ಇಡೀ ಕರ್ನಾಟಕದಲ್ಲಿ ಕೇಳಿ ಬರ್ತಿರುವ ಒಂದೇ ಒಂದು ಕೂಗು ಅಂದ್ರೆ ಪ್ರವಾಹ ಪರಿಹಾರ. ಯಾಕಂದ್ರೆ, ಕೆಲ ಮಾಹಿತಿ ಪ್ರಕಾರ 105 ವರ್ಷಗಳ ಬಳಿಕ ಇಷ್ಟೊಂದು ಭೀಕರ ನೆರೆಯನ್ನ ಕರುನಾಡು ಎದುರಿಸಬೇಕಾಯ್ತು. ಅದರಲ್ಲೂ ಉತ್ತರ ಕರ್ನಾಟಕ ಅಕ್ಷರಶಃ ಬೆಚ್ಚಿಬಿದ್ದಿತು. ಕಷ್ಟಪಟ್ಟು ಕಟ್ಟಿಕೊಂಡ ಬದುಕು ಕ್ಷಣಾರ್ಧದಲ್ಲಿ ಕೊಚ್ಚಿಕೊಂಡು ಹೋಯ್ತು. ಇದಕ್ಕೆ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಿತು. ಇದರ ಜೊತೆಗೆ ನಾಡಿನ ಜನತೆ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕೈಗಳಾದ್ರು.

ನೆರೆ ಇಳಿದ್ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು ಕೇಂದ್ರದತ್ತ. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ. ಹೀಗಾಗಿ ನಮ್ಮ ನೋವಿಗೆ ತಕ್ಷಣ ಸ್ಪಂದಿಸ್ತಾರೆ ಅಂದುಕೊಂಡಿದ್ದ ಜನಕ್ಕೆ ನಿರಾಸೆ. ದೇಶದ ಜನ ಪ್ರವಾಹದಲ್ಲಿ ನರಳುತ್ತಿರುವಾಗ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡು ದೊಡ್ಡ ತಪ್ಪು ಮಾಡಿದ್ರು. ಇಲ್ಲಿ ತುತ್ತು ಅನ್ನಕ್ಕೂ ಅಂಗಲಾಚುತ್ತಿರುವ ಜನರಿಗೆ ಧೈರ್ಯದ ಮಾತುಗಳನ್ನ ಹೇಳಬೇಕಾದ ದೇಶದ ಚೌಕಿದಾರ್, ವಿದೇಶದಲ್ಲಿ ಅಬ್ಬರಿಸಿದ್ದು ಮಾತ್ರ ದುರಂತ.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬರೋಬ್ಬರಿ 25 ಸಂಸದರನ್ನ ನೀಡಿದ ಏಕೈಕ ರಾಜ್ಯ ಕರ್ನಾಟಕ. ಒಬ್ಬರು ಬಿಜೆಪಿ ಬೆಂಬಲಿತ ಸಂಸದರು. ಇಷ್ಟಿದ್ರೂ ತಕ್ಷಣಕ್ಕೆ ಒಂದಿಷ್ಟು ಪರಿಹಾರ ಕೊಡಿಸುವಲ್ಲಿ ಫೇಲಾದ್ರು. ವಿಪಕ್ಷಗಳ ಬಾಯಿಗೆ ಆಹಾರವಾದ್ರು. ಕೊನೆಗೆ ಜನರು ಸಹ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಿಎಂ ಕಚೇರಿಯ ಮೂಲಗಳ ಪ್ರಕಾರ, 61 ಜನರ ಸಾವು. 15 ಜನರ ಕಣ್ಮರೆ. 859 ಪ್ರಾಣಿಗಳ ಸಾವು. 6,97,948 ಜನರ ಸ್ಥಳಾಂತರ. 51,460 ಪ್ರಾಣಿಗಳ ರಕ್ಷಣೆ. 1,160 ಗಂಜಿ ಕೇಂದ್ರಗಳಲ್ಲಿ 3,96,617 ಜನ ಆಶ್ರಯ ಪಡೆದಿದ್ರು. 22 ಜಿಲ್ಲೆಯ 103 ತಾಲೂಕುಗಳು ಪ್ರವಾಹಕ್ಕೆ ಸಿಲುಕಿದ್ವು. 56,381 ಮನೆಗಳಿಗೆ ಹಾನಿಯಾದ್ರೆ, ಸುಮಾರು 4 ಸಾವಿರ ಮನೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ. ಪ್ರಾಥಮಿಕ ವರದಿ ಪ್ರಕಾರ 4.58 ಲಕ್ಷ ಹೆಕ್ಟರ್ ಕೃಷಿ ಭೂಮಿಗೆ ಹಾನಿ.

ಇಷ್ಟೊಂದು ಪ್ರಮಾಣದ ಹಾನಿಯಾದಾಗ ಮಾನವೀಯ ದೃಷ್ಟಿಯಿಂದಲಾದ್ರೂ ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯದ ಜೊತೆ ನಿಲ್ಲಬೇಕಿತ್ತು. ಆಯ್ಕೆಯಾದ 28 ಸಂಸದರಲ್ಲಿ 25 ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿ ಮಧ್ಯಂತರ ಪರಿಹಾರ ತರಿಸುವ ಕೆಲಸ ಮಾಡಬೇಕಿತ್ತು. ಅದ್ಯಾವುದೂ ಆಗ್ಲಿಲ್ಲ. ರಾಜ್ಯದ ವರದಿ ಹಾಗೂ ಕೇಂದ್ರದ ವರದಿ ತಾಳೆಯಾಗ್ತಿಲ್ಲವೆಂದು ಹೇಳಿ ವಾಪಸ್ ಕೇಳಿಸಿ ನೊಂದವರಿಗೆ ಮತ್ತಷ್ಟು ಬರೆ ಎಳೆಯಲಾಯ್ತು. ಕೆಲ ಸಂಸದರು ಅಜ್ಞಾನಿಗಳಂತೆ ಮಾತ್ನಾಡಿದ್ರು. ಮೋದಿ ಮತ್ತು ಬಿಜೆಪಿಗಾಗಿಯೇ ದುಡಿಯುತ್ತಿರುವ ಸೂಲಿಬೆಲೆ ಅವರನ್ನೇ ದೇಶದ್ರೋಹಿ ಅಂದ್ರು.

2009ರಲ್ಲಿ ಪ್ರವಾಹ ನೆನಪಿಸಿಕೊಂಡ್ರೆ ಸುಮಾರು 200 ಜನ ಜೀವ ಕಳೆದುಕೊಂಡಿದ್ರು. 4 ಸಾವಿರ ಮನೆಗಳು ಕೊಚ್ಚಿಕೊಂಡು ಹೋಗಿದ್ವು. 20 ಸಾವಿರ ಕೋಟಿ ಹಾನಿಯಾಗಿತ್ತು. ಆಗ್ಲೂ ಸಿಎಂ ಆಗಿದ್ದ ಬಿಎಸ್ವೈ ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಪರಿಹಾರ ಸಂಗ್ರಹಿಸಿದ್ರು. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ 10 ಸಾವಿರ ಕೋಟಿ ತಕ್ಷಣದ ಪರಿಹಾರ ಕೇಳಿದ್ರೆ, 2 ಸಾವಿರ ಕೋಟಿ ಬಿಡುಗಡೆಯಾಗಿತ್ತು. ಅಂದ್ರೆ, ಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ಮುಖ್ಯ. ಈ ಕೆಲಸ ಜನ ನಂಬಿದ ಮೋದಿ ಸರ್ಕಾರ ಮಾಡ್ಲಿಲ್ಲ.

ಹಿಂದಿನ ಅನುಭವದಿಂದ ಎಚ್ಚೆತ್ತ ಕಂದಾಯ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿದೆ. ಜಿಲ್ಲೆಗೊಬ್ಬ ಪ್ರೊಫೆಷನಲ್ ಅಧಿಕಾರಿ. ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿ ನೇಮಿಸಿದೆ. ರಾಜ್ಯದಲ್ಲಿರುವ 6 ಸಾವಿರ ಮಳೆ ಮಾಪನಗಳು, ಮಳೆಯ ತೀವ್ರತೆಯನ್ನ ಪ್ರತಿ 15 ನಿಮಿಷಕ್ಕೆ ಕೊಡುತ್ತವೆ. ಹವಾಮಾನ ಇಲಾಖೆ ಪ್ರತಿ 3 ಗಂಟೆಗೆ ನೌ ಕಾಸ್ಟ್ (ಪ್ರಸ್ತುತ ಮುನ್ಸೂಚನೆ) ಜಿಲ್ಲಾಧಿಕಾರಿಗಳಿಗೆ ನೀಡುತ್ತೆ. ಇದ್ರಿಂದಾಗಿ ತುರ್ತು ಕ್ರಮಗಳನ್ನ ತೆಗೆದುಕೊಳ್ಳಲು ಅನುಕೂಲವಾಯ್ತು. ಹೆಚ್ಚಿನ ಜೀವಹಾನಿ ತಪ್ಪಿತು. ಆದ್ರೆ, ಕೊಚ್ಚಿಹೋದ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಇಂದಿಗೂ ಮೀನಾಮೇಷ ಎಣಿಸ್ತಿದೆ. ಈಗ ರಿಲೀಸ್ ಮಾಡಿರುವ 1,200 ಕೋಟಿ ರೂಪಾಯಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದಂತಾಗಿದೆ.

ಈ ವಾರ ‘ಆಫ್ ದಿ ಸ್ಕ್ರೀನ್’ ಅಂಕಣ ಇಲ್ಲ.. ನಿಮ್ಮ ಪ್ರತಿಕ್ರಿಯೆಗೆ : prajaastra18@gmail.com




Leave a Reply

Your email address will not be published. Required fields are marked *

error: Content is protected !!