ಕೋಟಿ ಕಂಠ ಗಾಯನ: ಸಿಂದಗಿಯಲ್ಲಿ ಮೂಕ ಪ್ರೇಕ್ಷಕರಾದ ವಿದ್ಯಾರ್ಥಿಗಳು!

305

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಕ್ಟೋಬರ್ 28ರಂದು ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಕೋಟಿ ಕಂಠ ಗಾಯನ ಅನ್ನೋ ಕಾರ್ಯಕ್ರಮಕ್ಕೆ ಆದೇಶಿಸಲಾಗಿತ್ತು. ಅದರಂತೆ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನ ನಡೆಸಲಾಯಿತು.

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು. ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಸಿಪಿಐ ವಿನಯ ಒಕ್ಕುಂದ, ತಾಲೂಕು ಶಿಕ್ಷಣಾಧಿಕಾರಿ ಎಚ್.ಎಂ ಹರನಾಳ, ಕಸಾಪ ತಾಲೂಕಾಧ್ಯಕ್ಷ ರಾಜಶೇಖರ ಕುಚಬಾಳ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುವೆಂಪು ಅವರ ರಚನೆಯ ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಿ.ಎಸ್ ಕರ್ಕಿ ಅವರ ಹಚ್ಚೇವ ಕನ್ನಡದ ದೀಪ, ಕಣವಿ ಅವರ ವಿಶ್ವ ವಿನೂತನ ವಿದ್ಯಾಚೇತನ, ಹಂಸಲೇಖ ಅವರ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡುಗಳನ್ನು ರಾಗರಂಜಿನಿ ಸಂಗೀತ ಅಕಾಡೆಮಿಯ ಪ್ರಕಾಶ ಮೂಡಲಗಿ ಹಾಗೂ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.

ಎಲ್ಲ ವಿದ್ಯಾರ್ಥಿಗಳನ್ನು ಒಳಗೊಳ್ಳಿಸಿಕೊಳ್ಳದೆ ಕೇವಲ ವೇದಿಕೆ ಮೇಲೆ ಹಾಡುವವರಿಗೆ ಮಾತ್ರ ಗಾಯನ ಸೀಮಿತವಾಗಿತ್ತು. ಸರ್ಕಾರಿ ಹಾಗೂ ಇತರೆ ಶಾಲೆಯ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಒಂದು ತಂಡದಿಂದಲೇ 6 ಗೀತೆಗಳನ್ನು ಹಾಡಿಸುವ ಮೂಲಕ, ಆಗಮಿಸಿದ ವಿದ್ಯಾರ್ಥಿಗಳು ಮೂಕ ಪ್ರೇಕ್ಷಕರಂತೆ ನಿಂತುಕೊಳ್ಳಬೇಕಾಯಿತು ಅನ್ನೋ ಮಾತುಗಳು ಕೇಳಿ ಬಂದವು.

ಕನ್ನಡದ ಕಾರ್ಯಕ್ರಮದಲ್ಲಿ ತಾಲೂಕಿನ ಕನ್ನಡಪರ ಸಂಘಟನಗಳೆ ಇಲ್ಲ ಅನ್ನೋ ಮಾತುಗಳು ಸಹ ಅಲ್ಲಿದ್ದ ಜನರಿಂದ ಕೇಳಿ ಬಂದವು. ತಾಲೂಕು ಆಡಳಿತ ಸರಿಯಾಗಿ ವ್ಯವಸ್ಥೆ ಮಾಡದೆ ಕಾಟಾಚಾರಕ್ಕೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಿತು ಅನ್ನೋ ಆರೋಪ ಕೇಳಿ ಬಂದಿದೆ.




Leave a Reply

Your email address will not be published. Required fields are marked *

error: Content is protected !!