ಪ್ರಚಾರಕ್ಕೆ ಕಾರ್ಯಕರ್ತರು, ಅಧಿಕಾರಕ್ಕೆ ಕುಟುಂಬಸ್ಥರು

80

ಪ್ರಜಾಸ್ತ್ರ ಡೆಸ್ಕ್

ಎಲ್ಲೆಡೆ ಇದೀಗ ಲೋಕಸಭಾ ಚುನಾವಣೆ ತಯಾರಿ ಭರ್ಜರಿಯಾಗಿ ನಡೆದಿದೆ. ಕರ್ನಾಟಕದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದ್ದು, ಎಂದಿನಂತೆ ಕುಟುಂಬ ರಾಜಕಾರಣ ತಾಂಡವಾಡುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಮುಂದುವರೆದಿದೆ. ಈ ಮೂಲಕ ಪ್ರಚಾರಕ್ಕೆ ಕಾರ್ಯಕರ್ತರು ಅಧಿಕಾರಕ್ಕೆ ಕುಟುಂಬಸ್ಥರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ನಲ್ಲೀಗ ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಪೈಪೋಟಿಯಲ್ಲಿವೆ.

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಮಕ್ಕಳು(ಹಾಲಿ ಸಂಸದ ರಾಘವೇಂದ್ರಗೆ ಟಿಕೆಟ್ ಸಿಕ್ಕಿದೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ.), ದಾವಣಗೆರೆಯಲ್ಲಿ ಜಿ.ಎಂ ಸಿದ್ದೇಶ್ವರ ಪತ್ನಿ(ಟಿಕೆಟ್ ಸಿಕ್ಕಿದೆ), ಬೆಳಗಾವಿಯಲ್ಲಿ ದಿ.ಸುರೇಶ್ ಅಂಗಡಿ ಪತ್ನಿ ಹಾಲಿ ಸಂಸದೆ ಮಂಗಳಾ, ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮುಂಜುನಾಥ್, ದೇವೇಗೌಡರ ಅಳಿಯ. ಸೇರಿ ಇತರರ ಹೆಸರು ಚರ್ಚೆಯಲ್ಲಿವೆ. ಜೆಡಿಎಸ್ ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ನಿಖಲ್ ಕುಮಾರಸ್ವಾಮಿ ಅಥವ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆಯಿದೆ. ಹೀಗೆ ಎಲ್ಲಿ ನೋಡಿದರೂ ರಾಜ್ಯದ 28 ಲೋಕಸಭಾ ಕ್ಷೇತ್ರ, 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಕುಟುಂಬಗಳ ಪ್ರಾಬಲ್ಯವೇ ಹೆಚ್ಚಾಗುತ್ತಿದೆ.

ಸ್ವತಂತ್ರ ಬಂದು 75 ವರ್ಷಗಳು ಕಳೆದಿವೆ. ರಾಜ ಮನತನಗಳು ಹೋಗಿವೆ. ರಾಜಕೀಯ ಮನೆತನಗಳು ತಲೆ ಎತ್ತುತ್ತಿವೆ. ಹೀಗಾಗಿ ಮೂರು, ನಾಲ್ಕು ತಲೆಮಾರುಗಳಿಂದ ಎಲ್ಲ ರಾಜಕೀಯ ಸ್ಥಾನಮಾನ, ಅಧಿಕಾರವನ್ನು ಎರಡ್ಮೂರು ಕುಟುಂಬಗಳು ಮಾತ್ರ ಪ್ರತಿ ತಾಲೂಕು, ಜಿಲ್ಲೆಯಲ್ಲಿ ಅನುಭವಿಸುತ್ತಿವೆ. ಪಕ್ಷದ ಬಾವುಟ ಹಿಡಿಯುವುದಿಲ್ಲ, ಪ್ರತಿಭಟನೆಯಲ್ಲಿ ಭಾಗವಹಿಸಿರುವುದಿಲ್ಲ, ಪಕ್ಷ ಸಂಘಟನೆಗಾಗಿ ಓಡಾಟ ಮಾಡಿರುವುದಿಲ್ಲ, ಹೋರಾಟದಲ್ಲಿ ಭಾಗವಹಿಸಿ ಯಾವುದೇ ಪೊಲೀಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಿಲ್ಲ. ಆದರೆ ನೇರವಾಗಿ ಟಿಕೆಟ್ ಪಡೆದು ಚುನಾವಣೆಗೆ ನಿಂತು ಅಧಿಕಾರಕ್ಕೆ ಬರುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತೆ ಆಗುತ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!