ಶತಕದಾಟಿದ ‘ಮದುಮಗಳು’.. ‘ವಚನ ಕಲ್ಯಾಣ’ದತ್ತ ಸೂತ್ರದಾರನ ಚಿತ್ತ…

490

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನ 9 ಗಂಟೆಗಳ ಪ್ರಯೋಗಾತ್ಮಕ ರಂಗರೂಪ ಮಾಡಿದ ನಿರ್ದೇಶಕ ಹಾಗೂ ಬೆಂಗಳೂರಿನಲ್ಲಿರುವ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ದ ನಿರ್ದೇಶಕರಾಗಿರುವ ಸಿ.ಬಸವಲಿಂಗ್ಯವರೊಂದಿಗೆ ನಾಗೇಶ ತಳವಾರ ನಡೆಸಿದ ಸಂದರ್ಶನ ಇಲ್ಲಿದೆ…

ಸಿ.ಬಸವಲಿಂಗಯ್ಯ, ನಿರ್ದೇಶಕರು

ಮೊದಲ ಬಾರಿಗೆ ಮೈಸೂರಿನಲ್ಲಿ ಮದುಮಗಳು ನಾಟಕ ಮಾಡಿದಾಗ ಮತ್ತು ನೂರು ಪ್ರದರ್ಶನ ಕಂಡಿರುವ ಹೊತ್ತಿನಲ್ಲಿ ಮಾತನಾಡುವುದಾದರೆ..

ಬಹುಮುಖ್ಯವಾಗಿ ಇದನ್ನು ಮಾಡುವಾಗ ರಂಗಾಯಣ ತುಂಬಾ ಬಿಕ್ಕಟ್ಟಿನಲ್ಲಿತ್ತು. ಕಲಾವಿದರು ಎಲ್ಲೆಲ್ಲೋ ಇದ್ದರು. ಏನೇನೋ ಸುದ್ದಿಯಾಗ್ತಿತ್ತು. ಕಾತಾ ಚಿಕ್ಕಣ್ಣ ಹಾಗೂ ಜಯರಾಮರಾಜ ಅರಸ ಅತಾ ಇದ್ದರು. ರಂಗಾಯಣದಲ್ಲಿ 10 ವರ್ಷ ಇದ್ದೀರಿ. ಏನಾದ್ರೂ ಮಾಡಿ ಅಂದಾಗ, ಒಳ್ಳೊಳ್ಳೆ ನಾಟಕ ಮಾಡಿ ಅಂತಾ ಸಲಹೆ ಕೊಟ್ಟೆ. ಅವರ ನನಗೆ ಹೇಳಿದರು. ರಂಗಾಯಣದ ಹುಡ್ಗರು ಬಂದರು. ಇದು ಎರಡನೇ ರಂಗಾಯಣ. ಉತ್ಕೃಷ್ಟವಾದ ಪ್ರಯೋಗಗಳನ್ನ ಮಾಡಬೇಕು ಅನ್ನೋದು ಬಿ.ವಿ ಕಾರಂತರ ಕನಸಾಗಿತ್ತು. ಅದು ಅಮ್ಯೂಚರ್ ಟೀಂ ಅಲ್ಲ. ತರಬೇತಿಯಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ. ಆ ಸಮಯದಲ್ಲಿ ನಾನು ಮಲೆಗಳಲ್ಲಿ ಮದುಗಳು ಹೇಳಿದೆ. 9 ಗಂಟೆಗೆ ಅಂದಾಗ ಎಲ್ಲರಲ್ಲಿ ಕುತೂಹಲ ಮೂಡಿತು. ರಂಗರೂಪ ಮಾಡಿದ ನಾರಾಯಣಸ್ವಾಮಿ ನಿನ್ಗೆ ಹುಚ್ಚಿದೆ ಬಸು ಅಂದಿದ್ದ. ಹೌದಪ್ಪ ಕಾದಂಬರಿ ಹುಚ್ಚು ಹಿಡಿಸುವಂಗೆ ಇದೆ. ಹಿಡಿಯುತ್ತೆ ನೋಡು ಅಂತಾ ಹೇಳಿದ್ದೆ. ಮೈಸೂರಲ್ಲಿ 15, ಬೆಂಗಳೂರಲ್ಲಿ 95 ಶೋ ಆಯ್ತಲ್ಲ. ಒಂದೆರಡು ಶೋ ಹೆಚ್ಚಿಗೆ ಮಾಡಿದ್ದು 115 ಆಗುತ್ತೆ.

ಪುಸ್ತಕ ಓದುವರ ಸಂಖ್ಯೆಯೇ ಕಡಿಮೆಯಿರುವ ಸಂದರ್ಭದಲ್ಲಿ ಬೃಹತ್ ಕಾದಂಬರಿ ರಂಗರೂಪ ಮಾಡಲು ಪ್ರೇರಣೆ ಬಂದಿದ್ದು ಹೇಗೆ?

ಯುವಕರ ಓದಲ್ಲ ಅನ್ನೋ ಕಾರಣಕ್ಕೆ ಇದನ್ನು ಆಲೋಚನೆ ಮಾಡಿದೆ. ಕನ್ನಡದಲ್ಲಿ ಒಳ್ಳೊಳ್ಳೆ ಕಾದಂಬರಿ, ಕಾವ್ಯ, ಕಥೆಗಳಿವೆ. ಇವತ್ತು ಜಗತ್ತು ನಿಮ್ಮ ಅಂಗೈನಲ್ಲಿದೆ. ಆಂಡ್ರೈಡ್ ಫೋನ್ ಒತ್ತಿದ್ರೆ ಇಡೀ ಬ್ರಹ್ಮಾಂಡ ಇದೆ. ಕೃಷ್ಣ ಬಾಯಿ ತೆಗೆದಾಗ ಯಶೋಧೆಗೆ ಬ್ರಹ್ಮಾಂಡ ಕಂಡಂಗೆ. ಆದ್ರೆ, ಇದು ಮಾಹಿತಿ ಅಷ್ಟೇ ಸಿಗುತ್ತೆ. ಜ್ಞಾನ ಹೇಗೆ? ಈ ನಾಟಕ ಮಾಡಿದ್ಮೇಲೆಯಾದರೂ ಓದಕ್ಕೆ ಆರಂಭಿಸ್ತಾರೆ ಅನ್ನೋದು ಇತ್ತು. ನಾಟಕ ಮಾಡಿದ ನಂತರ 20 ಸಾವಿರ ಕೃತಿಗಳು ಸೇಲ್ ಆಗಿವೆ. ಒಬ್ಬೊಬ್ಬರು ಐದಾರು ಸರಿ ನೋಡಿದ್ದಾರೆ. ಕಾದಂಬರಿ ಓದಿ ನಾಟಕ ನೋಡಿದವರು ಇದ್ದಾರೆ. ನಾಟಕ ನೋಡಿದ್ಮೇಲೆ ಕಾದಂಬರಿ ಓದಿದವರೂ ಇದ್ದಾರೆ. ನಾವು ಹೇಳೋದು ಕಾದಂಬರಿಗೆ ನಮ್ಮ ರಂಗರೂಪ ಪರ್ಯಾಯವಲ್ಲ. ಮಲ್ನಾಡನ್ನ ಮನೋಲೋಕದಲ್ಲಿ ತುಂಬಿಕೊಳ್ಳಿ ಅಂತಾ ಹೇಳೋದು. ನಾಟಕ ನೋಡುವಾಗ ಇಡೀ ರಾತ್ರಿ ಮಲ್ನಾಡಲ್ಲಿ ನಾವು ಇದ್ವಿ ಅನ್ನೋ ಭಾವನೆ ಬರುತ್ತೆ.

ಅನುಭವಿ ಕಲಾವಿದರನ್ನು ಸೇರಿಸಿ ಒಂದೆರಡು ಗಂಟೆಯ ನಾಟಕವನ್ನು ಹತ್ತಾರು ಶೋ ಮಾಡುವುದೇ ಕಷ್ಟವಿರುವಾಗ ನೂರಾರು ಯುವ ಕಲಾವಿದರನ್ನ ಸೇರಿಸಿಕೊಂಡು ನೂರು ಪ್ರದರ್ಶನ ಸಾಧ್ಯವಾಗಿದ್ದು ಹೇಗೆ?

ಎಲ್ಲಿದೆಯೋ ಅಲ್ಲೇ ರಂಗಭೂಮಿ ಮಾಡಬಹುದು. ನಮ್ಮ ಭಾರತೀಯ ರಂಗ ಪರಂಪರೆ ಯೂರೋಪಿನ ಎರವಲು ಅದು. ಫ್ರೇಮ್ ನಿಂದಾಚೆ ಎಷ್ಟೋ ಪಾತ್ರಗಳಿವೆ. ಒಂದು ಜಗಲಿ, ಹಿತ್ತಲು, ಅಂಗಳ, ದೇವರಮನಿಗೆ ಅರ್ಥವಿದೆ. ಅಷ್ಟಕ್ಕೂ ಮಡಿ ಮೈಲಿಗೆ ಮಾಡುವ ದೇಶವಿದು. ಕಲಾಗ್ರಾಮದಂತ ಜಾಗದಲ್ಲಿ ಕೆಲ ಪಾತ್ರಗಳು ಬರೋದಕ್ಕೆ ಆಗಲ್ಲ. ಕಾಡು ಮಧ್ಯ ನಡೆಯುವುದ್ರಿಂದ, ನಾಯಿ ಜರ್ನಿಯಿದೆ. ಮಾಲೀಕ ಗುತ್ತಿ ಜರ್ನಿಯಿದೆ. ಪಕ್ಷಿಗಳಿವೆ, ಸಗಣಿ ಹುಳ, ಕುದುರೆ ಬರುತ್ತೆ. ಸಾಮಾನ್ಯವಾಗಿ 60X40ರಲ್ಲಿ ನಾಟಕ ನಡೆಯುತ್ತೆ. ಇದು 360 ಡಿಗ್ರಿಯಲ್ಲಿ ನಡೆಯುತ್ತೆ. ಮೇಲೂ ನೋಡ್ಬೇಕು. ಹಿಂದೆ, ಮುಂದೆ ನೋಡ್ಬೇಕು. ಇಡೀ ಪರಿಸರದಲ್ಲಿ ಕುಳಿತುಕೊಂಡು ಯಾವುದೇ ಬಂಧನವಿಲ್ಲದೆ ನೋಡ್ತೀರಿ. ಆಕಾಶ ನೋಡಕ್ಕೆ ನೂಕುನುಗ್ಗಲು ಏನು ಅನ್ನೋ ತರದಲ್ಲಿರುತ್ತೆ. ಹೀಗೆ ಇದೊಂದು ರೀತಿಯ ಸಕ್ಸಸ್.

51 ವರ್ಷಗಳ ಹಿಂದಿನ ಕಾದಂಬರಿಯನ್ನ ಈಗಿನ ಕಾಲಘಟದಲ್ಲಿ ನಿಂತು ನೋಡಿದಾಗ, ನಾಟಕ ರೂಪದಲ್ಲಿ ತೊಡಗಿಸಿಕೊಳ್ಳುವಾಗ ಯಶಸ್ವಿ ನಿರ್ದೇಶಕರಾಗಿರುವ ನಿಮಗೆ ಕಷ್ಟವಾಯ್ತಾ?

ಇಲ್ಲ.. ಇಲ್ಲ.. ಎರಡು ನೂರು ವರ್ಷದ ಹಿಂದಿನ ದಾರುಣತೆ ಶಿಕ್ಷಣವಂತರಾದ್ಮೇಲೆ ಹೆಚ್ಚಾಗಿದೆ. ಅಲ್ಲೊಂದು ಶೋಷಣೆಯಿತ್ತು. ಹೆಣ್ಣಿನ ಮೇಲೆ ದೌರ್ಜನ್ಯಗಳಿದ್ವು. ಈಗ ಅದು ಓದಿದವರಿಂದಲೇ ಹೆಚ್ಚಿಗೆ ಆಗ್ತಿದೆ. ನಗರದ ಜನಕ್ಕೆ ಹಳ್ಳಿ ಗೊತ್ತಿಲ್ವೆ? ಹಳ್ಳಿಯಲ್ಲಿ ಏನಾಗುತ್ತೆ ಅನ್ನೋದು ಗೊತ್ತಿರಲ್ವಲ್ಲ. ಹಳ್ಳಿ ಕನಸಾಗಿದೆ. ಹೀಗಾಗಿ ವೀಕೆಂಡ್ ಬಂದರೆ ರೆಸಾರ್ಟ್ ಗೆ ಹೋಗ್ತಾರೆ. ಕಾಡಿನ ಮಧ್ಯ ಇರಕ್ಕೆ ಹೋಗ್ತಾರೆ. ಕುವೆಂಪು ಅವರು ಬಹುಮಖ್ಯವಾಗಿ ಕಾಡನ್ನ ನಾಡಿಗೆ ಕಟ್ಟಿಕೊಡುವುದಲ್ಲ. ಇದು ಮನೋಲೋಕದಲ್ಲಿ ತುಂಬಿಕೊಳ್ಳುವಂತದ್ದು. ಜ್ಞಾನಸುಖಿಯಲ್ಲಿ ನಾಟಕ ನೋಡ್ತಿದ್ದಾರೆ. ಕಾವೇರಿ ಅನ್ನೋ ಮುಗ್ಧ ಹಣ್ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಸ್ಕೂಲ್ ನಲ್ಲಿ ಆಗುತ್ತೆ. ನಿರ್ಭಯಾ ಕೇಸಿನಲ್ಲಿ ಬಸ್ ನಲ್ಲಾಯ್ತು. ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಮಕ್ಕಳು ಬದುಕಲು ಆಗಲ್ಲ. ಕುವೆಂಪು ಆಗಲೇ ಹೇಳಿದ್ದಾರೆ. ಡ್ರೆಸ್ ಗಳು ಚೇಂಜ್ ಆಗಿವೆ. ಮನಃಸ್ಥಿತಿ ಏನ್ ಚೇಂಜ್ ಆಗಿಲ್ಲ. ಈ ಭಾವನೆಯನ್ನ ನಾಟಕ ಬದಲು ಮಾಡಿದೆ.

ಈ ನಾಟಕವನ್ನ ನಾನು ನೋಡಿದ್ದೇನೆ. ಸತತ 9 ಗಂಟೆಗಳ ಕಾಲ ನಾಲ್ಕು ಕಡೆ ನಡೆಯುತ್ತೆ. ಬೆಂಗಳೂರು, ಮೈಸೂರು ಹೊರತು ಪಡಿಸಿ ಬೇರೆ ಭಾಗದ ಕಡೆ ಪ್ರಯೋಗವಿದ್ಯಾ..

ಬೇರೆ ಕಡೆನೂ ಹೋಗಬೇಕು ಅನ್ನೋ ಆಲೋಚನೆ ಇದೆ. 9ಗಂಟೆಗಳ ಕಾಲ ನಾಟಕ ಯಾಕಂದ್ರೆ, 8 ಗಂಟೆಗೆ ಶುರುಮಾಡಿ ಮಧ್ಯರಾತ್ರಿ ಬಿಟ್ರೆ ಜನ ಹೇಗೆ ಹೋಗಬೇಕು. ಇಡೀ ರಾತ್ರಿ ಕುವೆಂಪು ಜ್ಞಾನ ಮಾಡಿದಂತಾಗುತ್ತೆ. ಈ ನಾಟಕದ ಮೂಲಕ ಕಲಾಗ್ರಾಮ ಇಡೀ ದೇಶಕ್ಕೆ ಗೊತ್ತಾಗಿದೆ. ದೆಹಲಿ, ಪುಣೆ, ಬಾಂಬೆ, ತಮಿಳು ನಾಡಿನಿಂದ ಜನ ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಬರ್ತಿದ್ದಾರೆ.

ಮಲೆಗಳಲ್ಲಿ ಮಧುಮಗಳು ನಾಟಕ ನಿರಂತರವಾಗಿರುತ್ತಾ ಅಥವ ಕೊನೆಯಾಗುತ್ತಾ?

ನಿರಂತರ ಮಾಡ್ಬೇಕು ಅನ್ನೋದು ಜನರ ಒತ್ತಾಯವಿದೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಕಲಾವಿದರಿಗೆ ಗೌರವಧನ 10 ಸಾವಿರ ಕೊಡ್ತೀವಿ. ಕನಿಷ್ಠ 15-20 ಸಾವಿರ ಸಿಕ್ರೆ, ಮಕ್ಕಳಿಗೆ ಉದ್ಯೋಗ ಸಿಕ್ಕಂತಾಗುತ್ತೆ. ಕನ್ನಡ, ಭಾಷೆ, ಸಂಸ್ಕೃತಿಯನ್ನ ಅವರು ಜೀವಂತವಾಗಿಟ್ಟಂತೆ ಆಗುತ್ತೆ. ಜನಗಳು ಬಂದು ನೋಡ್ತಾ ಹೋಗ್ತಾರೆ. ಯುವ ಮನಸ್ಸುಗಳು ವೈಚಾರಿಕವಾಗಿ ಬೆಳೆಯುತ್ತವೆ. ಸಂಬಂಧ, ಸಂವಾದ, ಚರ್ಚೆಗಳು ಆರಂಭವಾಗುತ್ತೆ. ಬದುಕನ್ನ ಅರ್ಥ ಮಾಡಿಕೊಳ್ಳಲು ಸಾಧ್ಯತೆಯಿದೆ.

ನಿಮ್ಮ ಮುಂದಿನ ‘ವಚನ ಕಲ್ಯಾಣ’ ನಾಟಕದ ಪರಿಕಲ್ಪನೆ ಯಾವ ರೀತಿಯಾಗಿದೆ?

ಸಿದ್ಧತೆಯಲ್ಲಿದೆ. ಸರ್ಕಾರ ಸಮಿತಿ ನಿಯೋಜಿಸಿದೆ. ಈಗಾಗ್ಲೇ ನಮ್ಗೆ 75 ಲಕ್ಷ ಕೊಟ್ಟಿದ್ದಾರೆ. ನಾವು ಮತ್ತೆ 50 ಲಕ್ಷ ಕೇಳ್ತಿದ್ದೇವೆ. ಕಲಾವಿದರಿಗೆ ತಿಂಗಳಿಗೆ 15 ಸಾವಿರವಾದ್ರು ಕೋಡಬೇಕೆಂದು. 10-15 ದಿನಗಳಲ್ಲಿ ಅನೌನ್ಸ್ ಮಾಡ್ತೀವಿ. ಇದು ಸಹ 9 ಗಂಟೆಯಿರುತ್ತೆ. ಇಲಿ ರಾಜಕಾರಣ, ಧಾರ್ಮಿಕ, ಜಾತಿ ಸಂಕರ ಇದೆ. ಮುನ್ನೂರು ಶರಣರು ಬಸವಣ್ಣನ ಕಾಲದಲ್ಲಿ ಬಂದಿದ್ದಾರೆ. ಅದು ಜನಕ್ಕೆ ಗೊತ್ತಾಗಬೇಕಲ್ವಾ. ಅದಕ್ಕೆ ಇದನ್ನ ಮಾಡ್ತಿದ್ದೀವಿ.




Leave a Reply

Your email address will not be published. Required fields are marked *

error: Content is protected !!