ಡಂಬಳ ಗ್ರಾಮದ ಈ ವೃದ್ಧೆಗೆ ಬೇಕಿದೆ ಸಣ್ಣ ಸೂರು

268

ಪ್ರಜಾಸ್ತ್ರ ವಿಶೇಷ, ನಾಗೇಶ ತಳವಾರ

ಸಿಂದಗಿ: ಜೀವನದಲ್ಲಿ ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ನೋವು, ನಲಿವು.. ಸಿರಿತನ, ಬಡತನ.. ಸೋಲು, ಗೆಲುವು ಅನ್ನೋ ಏರಿಳಿತದಿಂದ ಕೂಡಿರುತ್ತೆ. ಆದರೆ, ಈ ಅಜ್ಜಿಯ ರೀತಿಯ ಪರಿಸ್ಥಿತಿಯನ್ನು ನಮ್ಮ ಸುತ್ತಮುತ್ತ ಸಾಕಷ್ಟು ಜನರು ಎದುರಿಸುತ್ತಿದ್ದಾರೆ. ಇಂತವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕಿದೆ. ಅಂದ ಹಾಗೇ ಈ ಅಜ್ಜಿ ಇರುವುದು ಸಿಂದಗಿ ತಾಲೂಕಿನ ಗೋಲಗೇರಿ ಹತ್ತಿರದ ಡಂಬಳ ಗ್ರಾಮದಲ್ಲಿ.

ಸುಮಾರು 80 ವರ್ಷದ ಶರಣವ್ವ ಮಾದರ ಅನ್ನೋ ವೃದ್ಧೆಯ ದೇಹ ವಯೋಸಹಜದಿಂದ ಸುಕ್ಕಾಗಿದೆ. ಅವಳನ್ನು ನೋಡಿದರೆ ಗೊತ್ತಾಗುತ್ತೆ ಆಕೆ ಎಷ್ಟೊಂದು ನೋವು ಅನುಭವಿಸಿದ್ದಾಳೆ. ಅನ್ನೋದು. ಈ ವೃದ್ಧೆಗೆ ನಾಲ್ವರು ಗಂಡು ಮಕ್ಕಳು, ಒಬ್ಬಳು ಹೆಣ್ಮಗಳು. ಈ ಐವರಲ್ಲಿ ಮಗಳು ಹಾಗೂ ಓರ್ವ ಮಗ ಮೃತಪಟ್ಟಿದ್ದಾರೆ. ಉಳಿದ ಮೂವರು ಮಕ್ಕಳು ಮಹಾರಾಷ್ಟ್ರದಲ್ಲಿದ್ದಾರೆ ಅನ್ನೋದು ಗ್ರಾಮಸ್ಥರ ಮಾತು.

ಕೆಲ ದಿನಗಳ ಕಾಲ ಮಹಾರಾಷ್ಟ್ರದಲ್ಲಿದ್ದ ಶರಣವ್ವ, ನಂತರ ಗ್ರಾಮಕ್ಕೆ ಬಂದಿದ್ದಾಳೆ. ಇರೋ ಅಂಗೈ ಅಗಲದ ಜಾಗದಲ್ಲಿದ್ದ ಮನೆ ಬಿದ್ದು ಯಾವುದೋ ಕಾಲವಾಗಿದೆ. ಈಗ ಅಲ್ಲೊಂದು ಮನೆಯಿತ್ತು ಅನ್ನೋ ಗುರುತು ಸಹ ಸಿಗದಂತಾಗಿದೆ. ಹೀಗಾಗಿ ವೃದ್ಧೆ ಹಾಳಾಗಿ ಹೋದ ಶುದ್ಧ ಕುಡಿಯುವ ನೀರಿನ ಘಟಕದ ಅತೀ ಸಣ್ಣ ಜಾಗದಲ್ಲಿ ವಾಸವಾಗಿದ್ದಾಳೆ. ಮಳೆ ಬಂದರೆ ನೀರು ಪೂರ್ತಿ ಘಟಕದೊಳಗೆ ಬರುತ್ತೆ. ಆ ಸ್ಥಿತಿ ಇದೆ.

ಇನ್ನು ಊಟಕ್ಕಾಗಿ ಗ್ರಾಮದಲ್ಲಿ ತಿರುಗಾಡಿ ಅವರಿವರ ಬಳಿ ತಿನ್ನುತ್ತಿದ್ದಾಳೆ. ಕೆಲವರು ಅವಳಿದ್ದ ಜಾಗಕ್ಕೆ ಬಂದು ಒಂದಿಷ್ಟು ಊಟ ನೀಡುತ್ತಾರೆ. ಹೀಗಾಗಿ ವೃದ್ಧೆಗೆ ಊಟದ ವಿಚಾರದಲ್ಲಿ ತೊಂದರೆಯಿಲ್ಲ. ಆದರೆ, ಆಕೆಗೊಂದು ಇರಲು ಸಣ್ಣ ಸೂರು ಇಲ್ಲ. ಕೊನೆಗಾಲದಲ್ಲಿ ಜೊತೆಯಾಗಬೇಕಾದ ಮಕ್ಕಳು ಹತ್ತಿರದಲ್ಲಿ ಇಲ್ಲ. ಹೀಗಾಗಿ ಮಳೆ, ಗಾಳಿ, ಚಳಿಯ ನಡುವೆ ದಿನಗಳನ್ನು ಕಳೆಯುತ್ತಿದ್ದಾಳೆ. ಇವಳ ಪರಿಸ್ಥಿತಿ ನೋಡಿದರೆ ಎಂತವರ ಹೃದಯವಾದರು ಮಿಡಿಯುತ್ತೆ. ಇರುವಷ್ಟು ದಿನ ಆಕೆಗೊಂದು ಸಣ್ಣ ಸೂರು ಬೇಕಾಗಿದ್ದು, ದಾನಿಗಳು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿದರೆ ಮಾನವೀಯತೆಗೆ ಗೆಲುವು ಆದಂತೆ.




Leave a Reply

Your email address will not be published. Required fields are marked *

error: Content is protected !!