ಸಕ್ಕರೆನಾಡಿನಲ್ಲಿ ಮಲೆನಾಡು ಬೆಳೆ ಬೆಳೆದು ಗೆದ್ದವನ ಯಶೋಗಾಥೆ…

757

ಪ್ರಜಾಸ್ತ್ರ ವಿಶೇಷ ಲೇಖನ: ಬೋರ ನಾಯಕ

ರೈತ ದೇಶದ ಬೆನ್ನೆಲಬು ಅಂತಾ ಬರೀ ಬಾಯಿ ಮಾತ್ನಲ್ಲಿ ಹೇಳ್ತೀವಿ. ಆದ್ರೆ, ನಿಜ ಜೀವನದಲ್ಲಿ ಆತನ ಗೋಳು ಯಾರಿಗೂ ಬೇಡ. ನೇಗಿಲಯೋಗಿಯ ಪಾಡೇನು ಅನ್ನೋದು ಭೂತಾಯಿಯೊಂದಿಗೆ ನಂಟು ಹೊಂದಿರುವ ಅವನಿಗೆ ಮಾತ್ರ ಗೊತ್ತು. ಹೀಗಾಗಿ ಇಂದಿನ ಆಧುನಿಕ ಭರಾಟೆಯಲ್ಲಿ ಸಿಕ್ಕು ಅದೆಷ್ಟೋ ರೈತರು ಸಾವಿನ ಕಡೆ ಮುಖ ಮಾಡ್ತಿದ್ದಾರೆ. ಇಂಥವರ ನಡುವೆ ಇಲ್ಲೊಬ್ಬ ರೈತ ಇತರರಿಗೂ ಮಾದರಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕಾಳೇಗೌಡನಕೊಪ್ಪಲು ಸಮೀಪದ ಹಂಗರಹಳ್ಳಿಯಲ್ಲಿ ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ ಎಂಬುವರು ಮಿಶ್ರಬೆಳೆ ಪದ್ಧತಿ ಅನುಸರಿಸಿ ಯಶಸ್ಸು ಕಂಡಿದ್ದಾರೆ. ಅವರ 24 ಎಕರೆ ಜಮೀನಿನಲ್ಲಿ ಮಲೆನಾಡಿನ ಬೆಳೆಗಳು ಹಾಗೂ ವಾಣಿಜ್ಯ ಬೆಳೆಗಳನ್ನ ಬೆಳೆದು ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ. ಸುಬ್ಬೇಗೌಡ ಅವರು, ತಮ್ಮ ಜಮೀನಿನಲ್ಲಿ 34 ವಿವಿಧ ಬಗೆಯ ತೋಟಗಾರಿಕೆ ಬೆಳೆಗಳಾದ ಕಾಫಿ, ಏಲಕ್ಕಿ, ಕರಿ ಮೆಣಸು, ಚಕ್ಕೆ, ಜಾಯಿಕಾಯಿ, ಸಪೋಟ, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ತೆಂಗು, ಅಡಿಕೆ, ಕೋಕ್, ಮೋಸಂಬಿ, ಕಿತ್ತಳೆ, ಶುಂಠಿ, ಏಲಕ್ಕಿ ಬಾಳೆ, ಪಚ್ಚಬಾಳೆ, ಶ್ರೀಗಂಧ, ಕಬ್ಬು, ಅಂಜೂರ, ಜ್ಯೂಸ್ ಫ್ರೂಟ್, ಮಾವು, ನೇರಳೆ ಸೇರಿದಂತೆ 35 ವಿವಿಧ ಬಗೆಯ ಬೆಳೆಗಳನ್ನ ಬೆಳೆದು ಕೃಷಿಯನ್ನ ಲಾಭದಾಯಕ ಉಧ್ಯಮವನ್ನಾಗಿಸಿಕೊಂಡಿದ್ದಾರೆ.

ಮಗ ಸುರೇಶ ತಂದೆಗೆ ಹೆಗಲು ಕೊಟ್ಟಿದ್ದಾರೆ. ಈ ಮೂಲಕ ಇವರ ಕುಟುಂಬ ತಾಲೂಕಿನಲ್ಲಿ ಮಾದರಿ ರೈತ ಕುಟುಂಬವಾಗಿದೆ. ಇವರ ಯಶಸ್ಸಿನ ಹಿಂದೆ ಇವರ ಕಠಿಣ ಪರಿಶ್ರಮ ಹಾಗೂ ರಾಸಾಯನಿಕ ಗೊಬ್ಬರ ಬದಲು ಸಾವಯವ ಗೊಬ್ಬರ. ನಾಟಿ ಹಸುವಿನ ಗಂಜಲ ಬಳಸಿಕೊಂಡು ಜೀವಾಮೃತ ತಯಾರಿಸಿ, ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ಮೂಲಕ ಕಡಿಮೆ ನೀರನ್ನ ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಮಾಡುತ್ತಿದ್ದಾರೆ. ಹೀಗಾಗಿ ವಾರ್ಷಿಕ 20ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಆದಾಯ ಗಳಿಸುತ್ತಾ ಕೃಷಿ ಲಾಭದಾಯ ವೃತ್ತಿ ಎನ್ನುತ್ತಾರೆ.

ಇನ್ನು ತಮ್ಮ ಜಮೀನಿನಲ್ಲಿ ಹೊಂಗೆ, ಸಿಲ್ವರ್, ತೇಗ, ರಕ್ತಚಂದನ ಹಾಗೂ ಬೇವಿನ ಮರಗಳನ್ನ ಬೆಳೆಸಿ ಕಾಡನ್ನ ಅಭಿವೃದ್ಧಿ ಪಡಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾಧೆ ಮಾತಿಗೆ ಅನ್ವರ್ಥವಾಗಿದ್ದಾರೆ ಪ್ರಗತಿಪರ ರೈತರಾದ ಸುಬ್ಬೇಗೌಡರು. ಇವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಭೂಮಿತಾಯಿಯನ್ನ ನಂಬಿದವರನ್ನ ಆಕೆ ಯಾವತ್ತೂ ಕೈಬಿಟ್ಟಿಲ್ಲ. ಆದ್ರೆ, ಇಲ್ಲಿ ನಿರಾಸೆಗೊಳ್ಳದೆ ಕಷ್ಟಪಡಬೇಕಿದೆ. ಅದೆಷ್ಟೋ ಜನ ಅಂಗೈ ಅಗಲದ ಜಾಗದಲ್ಲಿ ಮಿಶ್ರಬೆಳೆ ಬಳೆದು ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ.

ದೇಶ, ವಿದೇಶಗಳಲ್ಲಿ ಕೆಲಸ ಮಾಡ್ತಿರುವ ಅದೆಷ್ಟೋ ವಿದ್ಯಾವಂತರು ಇಂದು ಕೃಷಿಯತ್ತ ಮುಖ ಮಾಡ್ತಿದ್ದಾರೆ. ಇದುವೇ ನಮ್ಮ ಜೀವನಕ್ಕೆ ಆಧಾರ. ಒಕ್ಕಲುತನ ನಮ್ಮ ನೆಲದ ಮೂಲ ಕಸಬು. ಯಾವ ಜಾತಿ, ಮತ, ಪಂಥ ಅನ್ನೋ ಸಂಕೋಲೆಯಿಲ್ಲದೆ ಎಲ್ಲರನ್ನ ಸಲಹುತ್ತಾಳೆ. ಹೀಗಾಗಿ ಇಂಥಾ ಮಾದರಿ ರೈತರ ಸಲಹೆಗಳನ್ನ ಆಗಾಗ ಪಡೆಯಬೇಕು. ಸುಬ್ಬೇಗೌಡರ ಕೃಷಿ ನೋಡ್ಬೇಕು ಅಂದ್ರೆ ಇವರ ಹೇಮಾವತಿ ಫಾರಂಗೆ ಒಮ್ಮೆ ಭೇಟಿ ಕೊಡಿ.




Leave a Reply

Your email address will not be published. Required fields are marked *

error: Content is protected !!