Search

ಅಂಬೇಡ್ಕರ್ ಅವರ ತೇರನ್ನು ಮುಂದಕ್ಕೆ ಎಳೆಯೋಣ: ಡಾ.ಬಿ.ವಿ ವಸಂತಕುಮಾರ್

399

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಕಾಸರಗೋಡು: ಕರ್ನಾಟಕ ಸಾಹಿತ್ಯ ಅಕಾಡೆಮಿ ಎಡನೀರಿನಲ್ಲಿ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕಾವ್ಯ ಕಮ್ಮಟದ ಮೂರನೇ ದಿನವಾದ 24ನೇ ಸೆಪ್ಟೆಂಬರ್ ಶನಿವಾರದಂದು , ಮೂರು ಗೋಷ್ಠಿಗಳನ್ನೊಳಗೊಂಡು ಸಂಜೆ‌ ಸಮಾರೋಪ ಸಮಾರಂಭವೂ ನಡೆಯಿತು.

ಕಮ್ಮಟದ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಸಮಾರೋಪದ ಫಲಶ್ರುತಿಯನ್ನು ಮುಂದಿಡುತ್ತ, ಕವಿಯನ್ನು ಉತ್ಪಾದಿಸುವುದು ಅಸಾಧ್ಯ, ಆದರೆ ಸೃಜನ ಶೀಲತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಿದೆ ಎನ್ನುವುದು ಇಲ್ಲಿ ಸಾಬೀತಾಗಿದೆ ಎಂದರು.

ಶಿಬಿರಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ಆಲಿಸಿ ಮುಕ್ತ ಸಂವಾದಗಳ ಮೂಲಕ ಸಂದೇಹಗಳನ್ನು ಪರಿಹರಿಸಿ, ಗಮಕ, ಸಂಕೀರ್ತನಗಳನ್ನು  ಆಸ್ವಾದಿಸಿ ಈ ಪರಿಸರದ ತಂಪು ವಾತಾವರಣಕ್ಕೂ ಸ್ಪಂದಿಸಿದ್ದು ಶಿಬಿರದ ಯಶಸ್ಸನ್ನು ಸಾರುತ್ತದೆ. ಎರಡು ವಿಭಾಗಗಳಾಗಿ ಆರು ಹಂತಗಳಲ್ಲಿ ಅವರು ನಡೆಸಿದ ಕವಿಗೋಷ್ಠಿಗಳೂ ಚೆನ್ನಾಗಿ ಬಂದುವು. ಈ ಹೊಸತಲೆಮಾರಿನ ಕವಿತೆಗಳನ್ನು ಅಚ್ಚಾಗಿಸುವ ಅಕಾಡೆಮಿಯ ಭರವಸೆಯೂ ಪ್ರಶಂಸನೀಯ ಎಂದರು.

ಶಿಬಿರಾರ್ಥಿಗಳೊಂದಿಗೆ ಸಂವಾದದಲ್ಲಿ ಹಿರಿಯ ಕವಿ ಬಿ.ಆರ್ ಲಕ್ಷ್ಮಣರಾವ್ .

ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶಿಬಿರದ ಶಿಸ್ತು, ಶಿಬಿರಾರ್ಥಿಗಳ ನಡತೆ, ಸಹಕಾರ, ಆಸಕ್ತಿಗಳನ್ನು ಮೆಚ್ಚಿ ಆಶೀರ್ವಚನ ನೀಡುತ್ತ, ಈ ಘಟನೆ ದಾಖಲೆಯಾಗುತ್ತದೆ. ಸೃಜನಶೀಲ ವ್ಯಕ್ತಿತ್ವ ಎಲ್ಲರಿಗೂ ಒಲಿಯುವಂಥಾದ್ದಲ್ಲ. ಸ್ವಸ್ಥ ಸಮಾಜ ನಿರ್ಮಿಸಬೇಕಿದ್ದರೆ  ಅಪರಾಧಿ ಮನೋಭಾವವನ್ನು ಗೆಲ್ಲಬೇಕು. ಈ ಸಮಾರಂಭ ಕಾಟಾಚಾರದ್ದಲ್ಲ. ಆಸಕ್ತರು ಅಪೇಕ್ಷೆಪಟ್ಟು ಎಲ್ಲೆಲ್ಲಿಂದಲೂ ಬಂದಿದ್ದೀರಿ. ಈ ಮೂಲಕ ಇಡೀ ದೇಶ, ಇಡೀ ಕರ್ನಾಟಕವೇ ಸೇರಿದಂತಾಗಿದೆ.  ಹಸಿರಾಗಿರಲಿ ಈ ನೆನಪು. ಅನುಭವವು ಸವಿಯಲ್ಲ.  ಅದರ ನೆನಪೇ ಸವಿ ಎಂಬಂತಾಗಲೆಂದು ಹರಸಿದರು.

ಕವಿ ಬಿ.ಆರ್ ಲಕ್ಷ್ಮಣ ರಾವ್ ಮಾತನಾಡಿ, ಶಿಬಿರ ಬೇಗ ಮುಗಿಯಬಾರದಿತ್ತು ಎನ್ನುತ್ತ, ಕೊನೆಗೂ ಕಾವ್ಯದ ಮುಖ್ಯ ಆಶಯ ಪ್ರೀತಿಯೇ. ಕಾವ್ಯಪ್ರೇಮಿ, ಕಾವ್ಯಾಸಕ್ತರ ಹಲವು ಶಿಬಿರಗಳಲ್ಲಿ ಭಾಗವಹಿಸಿದ್ದೆ. ಆದರೆ ಇದು ವಿಶಿಷ್ಟವಾದ್ದು. ಈ ಕಮ್ಮಟದಲ್ಲಿ ಅಕಾಡೆಮಿಯ ಸದಸ್ಯರು ಒಗ್ಗೂಡಿ ದುಡಿದದ್ದು,  ಸಮರ್ಥ ಕವಿಗಳು ನಿಮ್ಮೊಳಗಿಂದ ಹೊರಹೊಮ್ಮುವ ಭರವಸೆ ಸಿಕ್ಕಿರುವುದು ಸಂತೋಷ ಕೊಟ್ಟಿದೆ ಎಂದರು.

ಕಾಸರಗೋಡು ಕನ್ನಡ ಲೇಖಕರ ಸಂಘದಿಂದ ಸಾಹಿತ್ಯ ಅಕಾಡೆಮಿ ನಿರ್ದೇಶಕ ಡಾ.ಬಿ.ವಿ ವಸಂತಕುಮಾರ್ ಅವರಿಗೆ ಸನ್ಮಾನ.

ಅಧ್ಯಕ್ಷೀಯ ಭಾಷಣದಲ್ಲಿ ಡಾ.ಬಿ.ವಿ ವಸಂತಕುಮಾರ್ ಅವರು ಮಾತನಾಡಿ, ಭರತ ಬಾಹುಬಲಿ ಪ್ರಸಂಗವನ್ನು ಉದಾಹರಿಸುತ್ತ, ಇಲ್ಲಿ ಗರ್ವದ ಪ್ರಶ್ನೆ ಇಲ್ಲ. ಕರ್ತವ್ಯವಾಗಿ ಈ ಬಗೆಯ ನಿರ್ವಹಣೆ ಅಗತ್ಯ ಎಂದು ಸೂಚಿಸುತ್ತ ಸಿಬ್ಬಂದಿ ವರ್ಗದ ವಿವಿಧ ಇಲಾಖೆಗಳ ನಿರ್ವಾಹಕರು ಹಾಗೂ ಅಕಾಡೆಮಿಯ ಇತರ ಸದಸ್ಯರು, ಮುಖ್ಯವಾಗಿ ಕೇಶವ ಬಂಗೇರರ ದುಡಿಮೆಗೆ ಮೆಚ್ಚುಗೆ ಸೂಚಿಸಿದರು. ಅಂಬೇಡ್ಕರ್ ಹೇಳಿದ್ದಾರೆ, ಈ ತನಕ ತೇರನ್ನು ಎಳೆದಿದ್ದೇನೆ. ಸಾಧ್ಯವಿದ್ದರೆ ಮುಂದಕ್ಕೆ ಎಳೆಯಿರಿ. ಆದರೆ ಹಿಂದಕ್ಕೆ ಮಾತ್ರ  ತಳ್ಳದಿರಿ. ಜಗತ್ತಿನಲ್ಲಿ ಪ್ರೀತಿ ಕಡಿಮೆ ಆಗಿಲ್ಲ. ಪ್ರೀತಿ ಬೇಡುವವರ ಸಂಖ್ಯೆ ಹೆಚ್ಚು. ಮನೆ  ಎಂಬುದು ವ್ಯಕ್ತಿಗೆ ಸೇರಿದ್ದಾದರೆ ಮಠ ಸಮಾಜಕ್ಕೆ ಸೇರಿದ್ದು. ಈ ಮಠ ಆ ದೃಷ್ಟಿಯಲ್ಲಿ ಬಹಳ ಅಭಿನಂದನೀಯ ಎಂದರು.

ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಪ್ರೊ.ಪಿ.ಎನ್ ಮೂಡಿತಾಯ ಅವರು ಮಾತನಾಡಿದರು. ವೇದಿಕೆಯಲ್ಲಿ ಲೇಖಕ ನಾಗರಾಜ ತಲಕಾಡು, ಡಾ.ಎಚ್.ಎಂ ಚನ್ನಪ್ಪಗೋಳ, ಬಿ.ಆರ್ ಸೂರಜ್ ಸೇರಿದಂತೆ ಇತರರು ಇದ್ದರು.

 ಜೊತೆಗೆ ಶಿಬಿರಾರ್ಥಿಗಳಾದ ಮಧು ಬಿರಾದಾರ, ರವಿ ಜಾಧವ, ರೇಣುಕಾಚಾರ್ಯ ಹಿರೇಮಠ, ಜ್ಯೋತಿ ಮೇಟಿ ಸೇರಿ ಕೆಲವರು ಕಮ್ಮಟದ ಅನುಭವವನ್ನು ಎಲ್ಲರ ಪರವಾಗಿ ಹಂಚಿಕೊಂಡರು. ಬೇರೆ ಬೇರೆ ಜಿಲ್ಲೆಗಳಿಂದ ಆರಿಸಲ್ಪಟ್ಟ 42 ಕವಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇವರಿಗೆಲ್ಲ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಕೇಶವ ಬಂಗೇರ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!