ಕೂಲಿ ಕಾರ್ಮಿಕನನ್ನು ಕೊಂದು ಸುಟ್ಟರಾ?

623

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ಜಮೀನು ಮಾಲೀಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದು, ಸುಟ್ಟಿರುವ ಹೃದಯ ವಿದ್ರಾವಕ ಘಟನೆ ಇತ್ತೀಚೆಗೆ ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಹಂಗರಕಿ ಗ್ರಾಮದ ನಿವಾಸಿ ಕೃಷಿ ಕಾರ್ಮಿಕ ರಾಮಪ್ಪ ಹವಳೆಪ್ಪ ಕೆಳಗಡೆ(46) ಎಂಬಾತನನ್ನು ಕೊಲೆ ಮಾಡಿ, ನಂತರ ಸಹಜ ಸಾವು ಎಂದು ಬಿಂಬಿಸಲಾಗಿದೆಯಂತೆ.

ಮರಳು ಮಾಡಿ ಕೊಂದರಾ?

ಕಳೆದ ಮೇ 16 ರಂದು ರಾತ್ರಿ 10ಕ್ಕೆ ರಾಮಪ್ಪನ ಮನೆಗೆ ಆಗಮಿಸಿದ ಹಂಗರಕಿ ಗ್ರಾಮದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಆತನ ಜೊತೆ ಜಗಳ ತೆಗೆದಿದ್ದಾನೆ. ಆ ಜಗಳ ವಿಕೋಪಕ್ಕೆ ಹೋಗಿ ರಾಮಪ್ಪನ ಮೇಲೆ ಮನಸೋ ಇಚ್ಛೇ ಹಲ್ಲೆ ಸಹ ನಡೆದಿದೆಯಂತೆ. ನಂತರ ರಾಮಪ್ಪನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಸಹ ರಾಮಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅದರಿಂದ ಗಂಭೀರವಾಗಿ ಗಾಯಗೊಂಡ ರಾಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನಂತೆ.

ನಂತರ ಮೃತ ದೇಹವನ್ನು ಬೈಕ್ ಮೇಲೆ ರಾಮಪ್ಪನ ಮನೆಗೆ ತರಲಾಗಿದೆ. ಆತ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂದು ಮನೆಯ ಸದಸ್ಯರನ್ನು ನಂಬಿಸಿದ್ದಾರೆ. ನಂತರ ತಾವು ಕೊಲೆ ಮಾಡಿದ ಘಟನೆ ಗೊತ್ತಾಗದಂತೆ ಮರೆಮಾಚಲು ಮನೆಯ ಸದಸ್ಯರಿಗೆ ಹಣ ನೀಡಿ, ಸಹಾಯ ಮಾಡಿದವರಂತೆ ನಟಿಸಿದ್ದಾರೆ ಎಂಬ ಗಂಭೀರ ಆರೋಪವು ಕೇಳಿ ಬರುತ್ತಿದೆ.

ಅದೇ ದಿನ ಮಧ್ಯರಾತ್ರಿ ಮೃತ ದೇಹವನ್ನು ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಸಹ ಮಾಡಲಾಗಿದೆಯಂತೆ. ಈ ಕುರಿತು ಮೃತ ರಾಮಪ್ಪನ ಅಳಿಯ ಈರಪ್ಪ ದೊಡಮನಿ ಇದು ಸಹಜ ಸಾವಲ್ಲ. ಇದೊಂದು ವ್ಯವಸ್ಥಿತ ಕೊಲೆ ಎಂದು ಗರಗ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಶಾಸಕ ಅಮೃತ ದೇಸಾಯಿಯವರ ತವರು ಕ್ಷೇತ್ರವಾದ ಹಂಗರಕಿಯಲ್ಲಿ ಇಂಥ ಘಟನೆ ನಡೆದಿರುವುದು ವಿಷಾದನೀಯ ಸಂಗತಿ.

ಸಾಂದರ್ಭಿಕ ಚಿತ್ರ ಬಳಸಲಾಗಿದೆ




Leave a Reply

Your email address will not be published. Required fields are marked *

error: Content is protected !!