Search

33 ಸಚಿವರಿಗೆ ಹೊಸ ಕಾರು ಖರೀದಿ

129

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮಳೆಯಾಗದೆ ಎಲ್ಲೆಡೆ ಬರಗಾಲವಿದೆ. ಜನರಿಗೆ ಸರಿಯಾಗಿ ನೀರು ಸಿಗದೆ ಪರದಾಡುತ್ತಿದ್ದಾರೆ. ರೈತರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ಆದರೆ, ಸಚಿವರ ಕಾರುಬಾರಿಗೆ ಯಾವುದೇ ಕೊರತೆ ಇಲ್ಲದಂತಾಗಿದೆ. ಯಾಕಂದರೆ, 33 ಸಚಿವರಿಗೆ ಹೊಸ ಕಾರು ಖರೀದಿಸಲಾಗಿದೆ.

9 ಕೋಟಿ 90 ಲಕ್ಷ ರೂಪಾಯಿಯಲ್ಲಿ ಇನೋವಾ ಹೈಬ್ರೀಡ್ ಕಾರು ಖರೀದಿಸಲಾಗಿದೆ. ಆಗಸ್ಟ್ 17ರಲ್ಲೇ 33 ಕಾರುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ದಸರಾ ಹಬ್ಬವಾಗುತ್ತಿದ್ದಂತೆ ಸಚಿವರಿಗೆ ನೂತನ ಕಾರುಗಳು ಬಂದು ನಿಂತಿವೆ. ಇನ್ನೊಂದು ಕಡೆ ಗ್ಯಾರೆಂಟಿಗಳಿಂದ ಹಲವು ಇಲಾಖೆಗಳಿಗೆ ಅನುದಾನದ ಕೊರತೆ ಎದುರಾಗುತ್ತಿದೆ. ಮತ್ತೊಂದು ಕಡೆ ಸಚಿವರ ವಿರುದ್ಧ ಕಮಿಷನ್ ಆರೋಪ ಕೇಳಿ ಬರುತ್ತಿದೆ. ಇದೀಗ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಿದ್ದು, ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

ಹಿಂದಿನ ಸಚಿವರ ಕಾರುಗಳು ಏನಾಗುತ್ತವೆ?

ಪ್ರತಿ ಬಾರಿ ಹೊಸ ಸರ್ಕಾರ ಬಂದಾಗಲೆಲ್ಲ ಸಚಿವರಿಗೆಲ್ಲ ಹೊಸ ಕಾರುಗಳ ಖರೀದಿ ನಡೆಯುತ್ತವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಸಚಿವರಿಗೆ ಕೋಟಿ ಕೋಟಿ ಖರ್ಚು ಮಾಡಿ ಕಾರು ಖರೀದಿಸಲಾಗುತ್ತೆ. ಹೀಗೆ ಖರೀದಿಸುವ ಕಾರು ಸರ್ಕಾರಕ್ಕೆ ಸೇರಿದ್ದಾಗಿರುತ್ತೆ. ಆದರೆ, ಸರ್ಕಾರ ಬದಲಾಗುತ್ತಿದ್ದಂತೆ ಆ ಕಾರುಗಳು ಅರ್ಧ ಬೆಲೆಗೆ ಮಾರಾಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಇಲ್ಲದೆ ಹೋದರೆ ರಾಜಕಾರಣಿಗಳ ಆಪ್ತರ ಪಾಲಾಗುತ್ತವೆ ಅನ್ನೋ ಆರೋಪಗಳು ಸಹ ಇವೆ. ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ಹೊಸ ಕಾರುಗಳ ಖರೀದಿ ನಡೆಯತ್ತಲೇ ಇದೆ. ಒಂದು ಕಡೆ ಶಾಸಕರ, ಸಚಿವರ ಸಂಬಳವನ್ನು ಏರಿಕೆ ಮಾಡಿಕೊಳ್ಳಲಾಗುತ್ತೆ. ಮತ್ತೊಂದು ಕಡೆ ಹೀಗೆ ಹೊಸ ಕಾರುಗಳ ಖರೀದಿ ಮಾಡುವುದು.

ಇವತ್ತಿನ ಪರಿಸ್ಥಿತಿಯಲ್ಲಿ ಓರ್ವ ತಾಲೂಕು ಪಂಚಾಯ್ತಿ ಸದಸ್ಯ ಸಹ ಎರಡ್ಮೂರು ಕಾರುಗಳ ಒಡೆಯನಾಗಿದ್ದಾನೆ ಅನ್ನೋದು ಬಹಿರಂಗ ಸತ್ಯ. ನೂರಾರು ಕೋಟಿಯಿಂದ ಸಾವಿರಾರು ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿರುವ ರಾಜಕಾರಣಿಗಳೆಲ್ಲ ಸರ್ಕಾರದ ಖಾಜನೆಯಿಂದಲೇ ಕಾರು ಖರೀದಿಸಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು. ಪ್ರಾಮಾಣಿಕತೆ ಅನ್ನೋದು ಬರೀ ಭಾಷಣಕ್ಕೆ ಸೀಮಿತವಾಗಬಾರದು.




Leave a Reply

Your email address will not be published. Required fields are marked *

error: Content is protected !!