ಅರ್ಹಳು

325

ಬೆಂಗಳೂರಿನಲ್ಲಿ ಆರ್ ಜೆ ಆಗಿ ಕೆಲಸ ಮಾಡ್ತಿರುವ ರಕ್ಷಿತ ಎಂ ಆಚಾರ್ಯ ಅವರು, ಸಾಹಿತ್ಯದ ಒಡನಾಟ ಹೊಂದಿದವರು. ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ಅವರ ‘ಅರ್ಹಳು’ ಅನ್ನೋ ಕವಿತೆ, ಹೆಣ್ಣೊಬ್ಬಳ ಸ್ವಗತವಾಗಿದೆ. ಪುರುಷ ಜಗತ್ತಿನಲ್ಲಿ ಹೆಣ್ಣು ಹೇಗೆ ನಿತ್ಯ ಸಾಯುತ್ತಿದ್ದಾಳೆ ಅನ್ನೋದರ ಚಿತ್ರಣವಿದೆ.

ನಾನು ಅರ್ಹಳೆಂದು ನೀವೇ ಹೇಳಿದ್ದೀರಿ,

ಅದಕ್ಕಾಗಿಯೇ ನಾ ಅರ್ಹಳಾಗಿದ್ದೆ

ಹೌದು ಇದೆಲ್ಲವು ನನ್ನ ತಪ್ಪೇ, ನನ್ನದೇ

ಜನಿಸಿದ ತಪ್ಪು, ಹುಡುಗಿಯಾಗಿಯೇ ಜನಿಸಿದ ತಪ್ಪು

ಬೆಳ್ಳಿಯ ಜಗತ್ತಿನಲ್ಲಿ, ಒಂದು ಸಣ್ಣ ಮುತ್ತು

ನನ್ನ ಮಾಂಸವನ್ನ ಕಚ್ಚಿದಾಗ ನೀವೇ ಶಪಿಸಿದ್ದೀರಿ

ನಾನದಕ್ಕೆ ಅರ್ಹಳೆಂದು, ಶಪಿಸಬೇಡಿ ದೇವರಲ್ಲಿ ಪ್ರಾರ್ಥಿಸಿ,

ನಾ ಮಾಡಿದ ಪಾಪಗಳನ್ನ ಮಾಫಿ ಮಾಡಲು

ಛೇ.. ಎಂಥ ಘೋರ ಅವಮಾನ, ನಾ ತೊಟ್ಟ ಪೋಷಾಕು

ಇಂದು ನನ್ನ ಮೊಣಕಾಲನ್ನ ಬೆತ್ತಲು ಮಾಡಿತು

ನಾ ಮಾಡಿದ ಪಾಪಕ್ಕೆ ಸಾವಿರ ಬಾರಿ ಸಾಯುತ್ತಿದ್ದೇನೆ

ನಾನು ಅವರನ್ನ ತಡೆಯಬಾರದಿತ್ತು ಮಾಂಸವನ್ನ ಕಿತ್ತು ಕೊಡಬೇಕಿತ್ತು, ಖಂಡಿತವಾಗಿಯೂ ಅನುಮತಿ ನೀಡಬೇಕಿತ್ತು

ನನ್ನಿಂದ ಈ ಮಾಸಿದ ಮಡಿಯಾದ ದೇಹವನ್ನ ಒಯ್ಯಲಾಗುತ್ತಿಲ್ಲ

ನಾ ಸಾಯುವೆ ಪ್ರತಿ ಬಾರಿ ಮತ್ತೆ ಹುಟ್ಟಿ ಬರುವೆ

ನಿಮ್ಮ ಫ್ಲೆಕ್ಸ್ ಪೋಸ್ಟರ್ ಗಳ  ಹಾರೈಕೆಯಂತೆ

ಮತ್ತೆ ಮತ್ತೆ  ನಾನು ಹುಟ್ಟುತಿರುತ್ತೇನೆ ಸ್ವಾಭಾವಿಕವಾಗಿ

ನಾನು ಮತ್ತೆ ಜನಿಸಿದ್ದೇನೆ ಅವಳು-ಅವಳು ಎಂದು ಸಂಭೋದಿಸುವುದಕ್ಕೆ ಮಾತ್ರ

ಆದರೆ ಈ ಬಾರಿ ನನ್ನ ತಪ್ಪುಗಳತ್ತ ನಿಗವಹಿಸಿ

ಎಚ್ಚರಿಕೆಯಿಂದಿದ್ದೇನೆ ನಾ ಮಾಡಿದ ತಪ್ಪುಗಳಿಂದ ಕಲಿತಿದ್ದೇನೆ

ಈ ಬಾರಿ ನನ್ನ ಪಾದಡದಿಯಿಂದ ಕೈ ಮತ್ತು ತಲೆಯವರೆಗೂ

ಸೆರಗು ಮುಚ್ಚಿದ್ದೇನೆ

ಆದರೂ ಈ ಬಾರಿಯೂ ನನ್ನ ಎದೆಯ ನೆರಳು ಕಾಮಾಂದರ

ಕಣ್ಣಿಗೆ ಬೀಳುವಂತೆ ಮಾಡಿ ಮತ್ತೆ ತಪ್ಪಿಗೀಡಾಗಿದ್ದೇನೆ

ನನ್ನ ಮುಖಕಾಣಿಸಲು ಅವಕಾಶ ಮಾಡಿಕೊಟ್ಟದಕ್ಕೆ

ಈ ಬಾರಿಯೂ ನಾನಿದಕ್ಕೆ ಅರ್ಹಳು ಎಂದು ನೀವೇ ಹೇಳಿದಿರಿ

ಅಬ್ಬಾ!  ಮತ್ತೆ ಮತ್ತೆ ನನ್ನಿಂದಲೇ ತಪ್ಪಾಗುತ್ತಿದೆ

ಅದೇ ಅವಮಾನ ನನ್ನ ದೇಹದಾಕಾರ

ಇವೆಲ್ಲವೂ ಸಹಿಸಲಾಗಲಿಲ್ಲ

ಮತ್ತೆ  ಕರಗಿಸಿದೆ ಮನಸತ್ತ ದೇಹವನ್ನ

ಮತ್ತೆ ಹುಟ್ಟಬಹುದೆಂದು!!

ಆಗಲು ನೀವು ಹೇಳದೆ ಹೇಗೆ ಇರಲು ಸಾಧ್ಯ

ನಾ ಅರ್ಹಳೆಂದು!

ಮತ್ತೆ ಹುಟ್ಟಿಬಂದೇ ನಿಮ್ಮ RIP

ಪೋಸ್ಟರ್ ಗಳ ಕೂಗಿನಿಂದ

ನಾನು ಹಿಂದೆ ಮಾಡಿದ ತಪ್ಪುಗಳಿಂದ

ಮಾಸ್ಟರ್ ಆಗಿದ್ದೇನೆ ಈ ಬಾರಿ ಮುಸುಕು ಮುಚ್ಚಿ

ಮುಖವನ್ನ ತೋರದರೀತಿ ಮಾಡಿರುವೆ

ಯಾರೊಬ್ಬರೂ ಈ ಪಾಪಿ ದೇಹವನ್ನ  ಸ್ಪರ್ಶಿಸಬಾರದೆಂದು

ಎಂಥ ದುರ್ವಿದಿ  ಈ ಬಾರಿಯೂ ನಾನು ವಿಫಲಳಾಗಿದ್ದೇನೆ

ನನ್ನ ಪಾಪಗಳಿಂದ ಕಲಿತುಕೊಳ್ಳದೆ ಅರ್ಹಳಾಗಿದ್ದೇನೆ

ನಾನು ನನ್ನ ಪಾಪಗಳಿಂದ ಏನನ್ನು ಕಲಿಯಲಾಗಲಿಲ್ಲ

ವಿಪರಿತ ಯವ್ವನ ಚೈತನ್ಯದಿಂದ ತುಂಬಿ ಈ ಜನ್ಮದಲ್ಲೂ

ತಪ್ಪಿಗೀಡಾಗಿದ್ದೇನೆ

ದೇಹದ ತುಂಬ ಕಾಮದ ಬಂದೂಕುಗಳನ್ನ ಹಿಡಿದಿರುವ ಜಗತ್ತಿನಲ್ಲಿ

ನಾನು ಹೆಣ್ಣಾಗಿ ಹುಟ್ಟಿ ಪ್ರಚೋದಿಸಿದೆ…

ಅದಕ್ಕಾಗಿ ಈ ಬಾರಿ ನಿರ್ಧರಿಸಿದ್ದೇನೆ

ಯವ್ವನರಹಿತ ಹುರುಪಿಲ್ಲದ ಹದಿಹರೆಯಾಗಿರಲು

ಆಕಾರವಿಲ್ಲದ ಮಾಡಿಕೆಯಂತೆ ತಾರುಣ್ಯದ ಮಗುವಾಗಿರಲು

ಅಯ್ಯೋ…. ಆದರೂ ಹೇಗೆ ಮೇಲೆ ಬಿದ್ದರು, ಪರಚಿದರು

ಮಾಂಸವನ್ನ ಕಚ್ಚಿ ನೆಕ್ಕಿ ಚಪ್ಪರಿಸಿದರು

ಕೊನೆಗೂ ಅಪವಿತ್ರವಾಗಿಯೇ ಅಶುದ್ಧವಾಗಿಯೇ

 ಮಸಣ ಯಾತ್ರೆ ಮುಗಿಸಿದೆ.

ನಿಮ್ಮ ಪೋಸ್ಟರ್ ಗಳಲ್ಲಿ ಅರ್ಹಳಾಗಿಯೇ  ಉಳಿದುಬಿಟ್ಟೆ

ಇನ್ನು ನೀವು ಹೇಳುತಿರುವಿರಿ ನಾನೇ ಅರ್ಹಳೆಂದು

ನನ್ನ ದುಃಖಮಯವಾದ ಪಾಪಗಳಿಂದ ನಾನೇನು ಕಲಿಯಲಿಲ್ಲವೆಂದು

ನಾನು ಇಂದಿಗೂ ಆಶ್ಚರ್ಯಚಕಿತಾಳಗಿಯೇ ಸಾಯುತ್ತಿದ್ದೇನೆ

ಪ್ರಪಂಚದೊಳಗಿನ ಪಾಠಗಳನ್ನ ಕಲಿಯಲಿಲ್ಲವೆಂದು

ಹೆಣ್ಣಾಗಿ ಹುಟ್ಟಿದ ಪಾಪಕ್ಕಿಂದು, ವಾಸ್ತವಿಕ ಪಾಪಕ್ಕಿಂದು

ರಕ್ಷಿತ ಎಂ ಆಚಾರ್ಯ



Leave a Reply

Your email address will not be published. Required fields are marked *

error: Content is protected !!