ರಾಯಣ್ಣ ಪ್ರತಿಮೆ.. ಶಿವಾಜಿ ಚೌಕ್ ಫಲಕ.. ಹೇಗಿದೆ ಸರ್ಕಾರದ ಸಂಧಾನ?

377

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಪೀರನವಾಡಿಯಲ್ಲಿ ಇತ್ತೀಚೆಗೆ ಗಲಾಟೆ ನಡೆದು ದೊಡ್ಡ ಸುದ್ದಿಯಾಗಿತ್ತು. ಕನ್ನಡಪರ ಹೋರಾಟಗಾರರು ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ್ರು. ಸಂಧಾನದಲ್ಲಿನ ನಿರ್ಣಯದಂತೆ ಇದೀಗ ಮರಾಠಿಗರು ಅಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಚೌಕ್ ಎಂದು ಫಲಕ ಸ್ಥಾಪಿಸಿದ್ದಾರೆ.

ರಾಯಣ್ಣ ವೃತ್ತದಲ್ಲಿ ಈ ಫಲಕ ಹಾಕಿದ್ದು, ಮೊದಲ ಸಾಲಿನಲ್ಲಿ ಮರಾಠಿ ಭಾಷೆ, ಎರಡನೇ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಸಂಧಾನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಯಣ್ಣ ಪ್ರತಿಮೆ ಬಳಿ ಕನ್ನಡದ ಧ್ವಜ ಹಾಗೂ ಶಿವಾಜಿ ಪ್ರತಿಮೆ ಬಳಿ ಭಗವಾಧ್ವಜ ಹಾಕಲಾಗಿದೆ. ಈ ವೇಳೆ ನೂರಾರು ಮರಾಠಿಗರು ಪಠಾಕಿ ಸಿಡಿಸಿ ಸಂಭ್ರಮಿಸಿದ್ರು.

ಇನ್ನು ಫಲಕ ಸಂಬಂಧ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಫಲಕದಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಇದು ಎಂಇಎಸ್ ನವರ ಕೃತ್ಯವಾಗಿದೆ. ಸರ್ಕಾರದ ಆದೇಶದಂತೆ ಕನ್ನಡಕ್ಕೆ ಶೇಕಡ 80ರಷ್ಟು ಪ್ರಾಧಾನ್ಯತೆ ಕೊಡಬೇಕು. ಈ ಕಾರ್ಯಕ್ರಮವನ್ನ ಜಿಲ್ಲಾಡಳಿತ ಅಧಿಕೃತವಾಗಿ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಪ್ರತಿಮೆ ಇರುವುದು ರಾಯಣ್ಣನದು. ಫಲಕ ಇರುವುದು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಚೌಕ್ ಎಂದು. ಇದ್ಯಾವ ಸೀಮೆ ಸಂಧಾನ ಕೆಲಸವೋ. ಕನ್ನಡ ನೆಲದಲ್ಲಿ ಕ್ರಾಂತಿಕಾರಿ ಕನ್ನಡಿಗನ ಪ್ರತಿಮೆ, ಫಲಕ ಹಾಕುವುದಕ್ಕೆ ಇಷ್ಟೊಂದು ಮೀನಾಮೇಷ, ಸ್ಥಳೀಯರ ಮರಾಠಿಗರ ತಾಳಕ್ಕೆ ಕುಣಿಯುತ್ತಿರುವ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!