ಏನಿದು ಜಮಖಂಡಿ ಶಾಸಕರೇ 8 ಕೋಟಿ ರೋಡ್ ಕಥೆ!

1401

ಪ್ರಜಾಸ್ತ್ರ ವಿಶೇಷ ವರದಿ, ಕುಮಾರ ಜಾಧವ

ಜಮಖಂಡಿ: ಸರ್ಕಾರದ ಯೋಜನೆಗಳು ಅನ್ನೋದು ಮೊದ್ಲು ನೂರಾರು ವರ್ಷಗಳ ಕಲ್ಪನೆ ಇರುತಿತ್ತು. ಈಗ ಹತ್ತಾರು ವರ್ಷವಿರಲಿ ಮೂರ್ನಾಲ್ಕು ವರ್ಷ ಸಹ ಅದು ಬಾಳಿಕೆ ಬರುವುದಿಲ್ಲ. ಅದರಲ್ಲೂ ರಸ್ತೆ, ಚರಂಡಿ, ಸೇತುವೆ, ಕಾಲುವೆ ಸೇರಿದಂತೆ ಪ್ರಮುಖ ಕಾಮಗಾರಿಗಳು ಉದ್ಘಾಟನೆಗೊಂಡು ಕೆಲ ದಿನಗಳಲ್ಲಿಯೇ ಹಾಳಾಗಿ ಹೋಗುತ್ತೇವೆ. ಅಷ್ಟರ ಮಟ್ಟಿಗೆ ನಮ್ಮ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಹಣದಾಸೆಗೆ ಬಿದ್ದಿದ್ದಾರೆ.

ಇದೀಗ ಜಮಖಂಡಿ ತಾಲೂಕಿನ ಸಾವಳಗಿ-ಜಂಬಗಿ ನಡುವಿನ ರಸ್ತೆ ಕುರಿತು ಇಲ್ಲಿನ ಜನರು ಬಹುದಿನಗಳಿಂದ ಕನಸು ಕಾಣ್ತಿದ್ರು. ಅದು ಈಡೇರಿದೆ ಅನ್ನುವಷ್ಟರಲ್ಲಿಯೇ 3 ಬಾರಿ ದುರಸ್ತಿಗೆ ಬಂದಿದೆ. ಅಂದ್ರೆ, ಸುಮಾರು 1-2 ಕಿಲೋ ಮೀಟರ್ ಅಂತರದಲ್ಲಿರುವ ಊರಿನ ನಡುವಿನ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕಿತ್ತುಕೊಂಡು ಹೋಗಿದೆ. ಅದನ್ನ ಪುನಃ ಪುನಃ ರಿಪೇರಿ ಮಾಡುವ ಕೆಲಸ ನಡೆದಿದೆ. ಇದು ಸುಮಾರು 8 ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ ರಸ್ತೆ ಹೀಗೇಕೆ ಎಂದು ಸ್ಥಳೀಯರು ಕೇಳ್ತಿದ್ದಾರೆ. ಕಳೆದ ಉಪ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ ಡಾ. ಜಿ.ಪರಮೇಶ್ವರ ಮಾತನಾಡುತ್ತಾ, ತಮ್ಮ ಪಕ್ಷದ ಆನಂದ ನ್ಯಾಮಗೌಡ ಅವರಿಗೆ ಮತ ಹಾಕಿದರೆ ತಿಂಗಳಲ್ಲಿ ಸಾವಳಗಿ-ಜಂಬಗಿ ರಸ್ತೆ ಮಾಡಿಸುವದಾಗಿ ಹೇಳಿದ್ರು. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಯ್ತು.

ಅಲ್ದೇ, ದಿವಂಗತ ಸಿದ್ದು ನ್ಯಾಮಗೌಡರ ಬಹುದಿನಗಳ ಬೇಡಿಕೆ ಮತ್ತು ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೊಟ್ಟ ಭರವಸೆ ಇಡೇರಿಸುವ ಸಲುವಾಗಿ ಶಾಸಕ ಆನಂದ ನ್ಯಾಮಗೌಡರು ವಿಶೇಷ ಖಾಳಜಿಯಿಂದ ಅಂದಾಜು 8 ಕೋಟಿ ಅನುದಾನವನ್ನ ಸಾವಳಗಿ-ಜಂಬಗಿ ರಸ್ತೆಗೆ ಮಂಜೂರು ಮಾಡಿಸಿದ್ರು. ಈ ರಸ್ತೆಯ ಮಧ್ಯದ 2ಕಿ.ಮೀ(ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಸಿದ) ರಸ್ತೆಯನ್ನ ಹೊರತುಪಡಿಸಿ, ಎಮ್.ಎನ್. ಕಂಕಾಳೆ ಎಂಬ ಗುತ್ತಿಗೆದಾರರು ಈ ರಸ್ತೆಯನ್ನ ಗುತ್ತಿಗೆ ಹಿಡಿದು ಕಾಮಗಾರಿ ಪ್ರಾರಂಭಿಸಿದ್ರು. ಆದ್ರೆ, ಕಾಮಗಾರಿ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಭೀಕರ ಪ್ರವಾಹದಿಂದಾಗಿ ಕಾಮಗಾರಿ ನಿಂತಿತು.

ಇದಾದ್ಮೇಲೆ ನಡೆಸಿದ ರಸ್ತೆ ಕೆಲಸ 3-4 ತಿಂಗಳ ಹಿಂದೆ ಮುಗಿದಿದೆ. ಹೀಗೆ ಮುಗಿದ ರಸ್ತೆ ಕೆಲವೇ ತಿಂಗಳಲ್ಲಿ ಟಕ್ಕಳಕಿ ಕ್ರಾಸ್ ಇಟ್ಟಂಗಿ ಭಟ್ಟಿ ಹತ್ತಿರ ಹಾಗೂ ಸಾವಳಗಿ ಒಂದನೇ ಹಳ್ಳದ ಹತ್ತಿರ ರಸ್ತೆ ಕುಸಿದು ಡಾಂಬರೀಕರಣ ಕಿತ್ತಿದರಿಂದ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನ ಕೇಳಿದ್ರೆ, ಗುತ್ತಿಗೆದಾರರಿಗೆ ಎರಡು ವರ್ಷದವರೆಗೆ ರಸ್ತೆ ನಿರ್ವಹಣೆ ಇರುತ್ತದೆ. ಆದಕಾರಣ ನೀವು ಯೋಚನೆ ಮಾಡಬೇಡಿ ರಸ್ತೆ ದುರಸ್ತಿ ಮಾಡುತ್ತಾರೆ ಎಂದು ಹೇಳುತ್ತಾರೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪಿಡಬ್ಲೂಡಿ ಅಧಿಕಾರಿ ಆದಾಪೂರ ಅವರಿಗೆ ಕಾಮಾಗಾರಿ  ಕಳಪೆಯಾಗಿದೆ ಎಂದು ತಿಳಿಸಿದಾಗ ಇದು ಆರ್‍ಐಎಸ್ ಸಿಸ್ಟಮನಲ್ಲಿ ರಸ್ತೆ ಇರುವದರಿಂದ ರಸ್ತೆ ಅಗಲೀಕರಣಕ್ಕೆ ಮಾತ್ರ ಅವಕಾಶ ಸಿಕ್ಕಿದೆ. ಎಸ್ಇ ಅವರು ಕಾಮಗಾರಿ ಪರೀಶಿಲಿಸಿ ಹೋಗಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುದಾಗಿ ತಿಳಿಸಿದರು. ಆದರೆ ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ.

ಸಿದ್ದು ಬಂಡಿವಡ್ಡರ, ತಾಲೂಕಾಧ್ಯಕ್ಷ, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ

ಇದಕ್ಕೆ ಬಂದಂತಹ ಅನುದಾನ ಹಾಗೂ ಯೋಜನಾ ವರದಿ ಬಗ್ಗೆ 2-3 ಬಾರಿ ಎಇಇ ಗಾಯಕವಾಡ ಅವರನ್ನ ಸಂಪರ್ಕಿಸಿದಾಗ ಇದರ ಬಗ್ಗೆ ಮಾಹಿತಿ ಇಲ್ಲ. ಕಚೇರಿಗೆ ಹೋಗಿ ನೀಡುವುದಾಗಿ ತಿಳಿಸುತ್ತಾರೆ. ಗುತ್ತಿಗೆದಾರರಿಗೆ ಎರಡು ವರ್ಷ ರಸ್ತೆ ನಿರ್ವಹಣೆ ಇರುವುದು ಒಳ್ಳೆಯದು. ಆದ್ರೆ, ಉತ್ತಮ ಗುಣಮಟ್ಟದ ರಸ್ತೆ ಮಾಡಿದರೆ ಪದೇ ಪದೇ ರಸ್ತೆ ದುರಸ್ತಿ ಮಾಡುವುದು ತಪ್ಪುತ್ತೆ ಅಲ್ವೆ? 2 ವರ್ಷದ ನಿರ್ವಹಣೆ ನೆಪದಲ್ಲಿ ಸಾರ್ವಜನಿಕರ ದುಡ್ಡು ದುರ್ಬಳಕೆ ಮಾಡುವುದು ಎಷ್ಟು ಸರಿ ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.

ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸ್ಥಳಕ್ಕೂ ಹೋಗಿ ವೀಕ್ಷಣೆಯೂ ಮಾಡುತ್ತೇನೆ.

ಆನಂದ ನ್ಯಾಮಗೌಡ, ಶಾಸಕರು, ಜಮಖಂಡಿ

ಇನ್ನು ಇಲಾಖೆಯ ಅಧಿಕಾರಿ ಆದಾಪೂರ ಅವರಿಗೆ ಫೋನ್ ಮಾಡಿದಾಗ ಭಾರಿ ಪ್ರಮಾಣ ವಾಹನಗಳು ಸಂಚರಿಸುತ್ತವೆ. ಮೊದಲು ಅದನ್ನ ನೀವು ಬಂದ್ ಮಾಡಿಸಿ. ನಂತರ ನಮಗೆ ಹೇಳಿ ಎಂದು ಉಡಾಪೆಯ ಉತ್ತರ ನೀಡುವುದರ ಜೊತೆಗೆ ನಾನು ಈಗಾಗಲೇ ಆರ್ ಟಿಓ ಜಮಖಂಡಿ ಇವರಿಗೆ ಇದರ ಬಗ್ಗೆ ದೂರು ನೀಡದ್ದು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳುತ್ತಾರೆ. ಓವರ್ ಲೋಡ್ ಗಾಡಿಗಳ ಸಂಚಾರದಿಂದ ರಸ್ತೆ ಪದೆಪದೆ ರಿಪೇರಿಗೆ ಬರ್ತಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಕೇಳಿದ್ರೆ ಒಬ್ಬೊಬ್ಬ ಅಧಿಕಾರಿ ಒಬ್ಬೊಬ್ಬರತ್ತ ಬೊಟ್ಟು ಮಾಡುತ್ತ ಕಳಪೆ ಕಾಮಗಾರಿ ಬಗ್ಗೆ ಕ್ರಮ ತೆಗೆದುಕೊಳ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು, ಕೂಡಲೇ ಶಾಸಕ ಆನಂದ ನ್ಯಾಮಗೌಡರು ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

ವೀಕ್ಷಣೆ ಮಾಡದೆ ರಸ್ತೆಯ ಬಗ್ಗೆ ಏನು ಮಾಹಿತಿ ನೀಡುವುದಿಲ್ಲ. ಶನಿವಾರ ಸ್ಥಳಕ್ಕೆ ಬಂದು ಸ್ಥಳವನ್ನು ವೀಕ್ಷಿಸಿ ಕಳಪೆಯಾಗಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವದು.

ಪ್ರಶಾಂತ ಗಿಡದಾನಪ್ಪಗೋಳ, ಕಾರ್ಯನಿರ್ವಾಹಕ ಅಭಿಯಂತರರು, ಬಾಗಲಕೋಟೆ



One thought on “ಏನಿದು ಜಮಖಂಡಿ ಶಾಸಕರೇ 8 ಕೋಟಿ ರೋಡ್ ಕಥೆ!

Leave a Reply

Your email address will not be published. Required fields are marked *

error: Content is protected !!