ಸಿಂದಗಿ ತೊಗರಿ ಕೇಂದ್ರದಲ್ಲಿ ಹಗಲು ದರೋಡೆ: ‘ಪ್ರಜಾಸ್ತ್ರ’ದಲ್ಲಿ ಸಾಕ್ಷಿಸಮೇತ ವರದಿ…

972

ಸಿಂದಗಿ: ಪಟ್ಟಣದ ಎಪಿಎಂಸಿಯಲ್ಲಿರುವ ತೊಗರಿ ಕೇಂದ್ರದಲ್ಲಿ ಹೇಳುವವರಲ್ಲಿ ಕೇಳುವವರಲ್ಲಿ. ಇಲ್ಲಿನವರು ಆಡಿದ್ದೇ ಆಟವಾಗಿದೆ. ಹೀಗಾಗಿ ಒಂದೊಂದು ತೊಗರಿ ಚೀಲದಿಂದ ಬರೋಬ್ಬರಿ 5 ರಿಂದ 10 ಕೆಜಿ ಹೆಚ್ಚು ತೊಗರಿಯನ್ನ ಅನಾಮತ್ತಾಗಿ ಕೊಳ್ಳೆ ಹೊಡಿಯುತ್ತಿದ್ದಾರೆ. ಈ ಬಗ್ಗೆ ರೈತರಿಗೆ ಅನುಮಾನ ಬಂದು ಪರಿಶೀಲನೆ ಮಾಡಿದಾಗ, ಇಲ್ಲಿನವರ ಬಣ್ಣ ಬಯಲಾಗಿದೆ.

ಒಂದು ಕ್ವಿಂಟಾಲ್ ತೊಗರಿ ಚೀಲದಿಂದ 5 ರಿಂದ 10 ಕೆಜಿ ಅಂದ್ರೆ, 10 ಕಿಟ್ವಾಂಲ್ ದಲ್ಲಿ ಬರೋಬ್ಬರಿ 60 ಕೆಜಿ ತೊಗರಿ ಗುಳುಂ. ಕೆಳಗ ಚೆಲ್ಲಿದೆ, ಅಲ್ಲಿ ಚೆಲ್ಲಿದೆ ಎಂದು ರೈತರ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ಕೊಳ್ಳೆ ಹೊಡಿಯುತ್ತಿದ್ದಾರೆ. ಬಂಕಲಗಿಯ ದ್ಯಾವಪ್ಪ ಫಕೀರಪ್ಪ ಹಳ್ಳಿ ಎಂಬವರಿಂದ ಬರೋಬ್ಬರಿ 1 ಚೀಲ ತೊಗರಿಯನ್ನ ಎಗರಿಸಲಾಗಿದೆ. 10 ಚೀಲ ತಂದವನಿಗೆ 9 ಚೀಲವಾಗಿದೆ ಎಂದು ಹೇಳಿದ್ದಾರೆ. ಆಗ ಅನುಮಾನ ಬಂದು ತೂಕ ಮಾಡಿದ ಚೀಲಗಳನ್ನ ಮರಳಿ ತೂಕು ಮಾಡಿದಾಗಿ ಒಂದೊಂದು ಚೀಲದಲ್ಲಿ 5 ರಿಂದ 10 ಕೆಜಿ ವ್ಯತ್ಯಾಸ ಬಂದಿದೆ. ಆಗ ರೈತರು ಗಲಾಟೆ ಮಾಡಿದ್ದಾರೆ.

ಈ ಬಗ್ಗೆ ಇಲ್ಲಿನ ಆಪರೇಟರ್ ಗೌಡು ಪಾಟೀಲ ಎಂಬುವರನ್ನ ಕೇಳಿದ್ರೆ, ಉಡಾಫೆ ಉತ್ತರ ಕೊಡ್ತಾನೆ. ಯಾವ ಡಿಸಿನೂ ಏನೂ ಮಾಡಲ್ಲ. ಯಾರೂ ಏನೂ ಮಾಡಲ್ಲ. ಪೇಪರ್ ನಲ್ಲಿ ಎಷ್ಟು ಸಾರಿ ಬಂದ್ರೂ ಏನೂ ಆಗಿಲ್ಲ ಅಂತಾ ಧೈರ್ಯದಿಂದ ಮಾತ್ನಾಡ್ತಾನೆ. ಅಲ್ದೇ, ನನ್ನ ಹೆಸರು ಏನಾದ್ರೂ ಬರೆದ್ರೆ ಸುಮ್ನಿರಲ್ಲ. ಜಗಳ ಮಾಡಬೇಕಾಗುತ್ತೆ ಎಂದು ಪತ್ರಕರ್ತರಿಗೆ ಧಮ್ಕಿ ಹಾಕಿದ್ದಾನೆ.

ಇನ್ನು ಯರಗಲ್ಲ ಬಿಕೆ ಗ್ರಾಮದ ಧರ್ಮರಾಜ ಹರವಾಳ, ರೇವಣಸಿದ್ಧ ಶಿವೂರ ಹೀಗೆ ಸಿಂದಗಿ ಸುತ್ತಲಿನ ಗ್ರಾಮದ ರೈತರು ತೆಗೆದುಕೊಂಡು ಬಂದ ತೊಗರಿ ಚೀಲದಿಂದ ಎಗ್ಗಿಲ್ಲದೆ ತೂಕ ಹೊಡೆಯಲಾಗ್ತಿದೆ. ಇದರಲ್ಲಿ ಎಲ್ಲರಿಗೂ ಪಾಲು ಹೋಗುತ್ತೆ ಅನ್ನೋ ರೀತಿಯಲ್ಲಿ ಇಲ್ಲಿನವರು ಮಾತ್ನಾಡ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನ ಎರಡು ಬಾರಿ ಸಂರ್ಪಕ ಮಾಡಲಾಯ್ತು. ಸರ್, ಕೆಲ ಕಾರ್ಯಕ್ರಮ ಹಾಗೂ ಮೀಟಿಂಗ್ ನಲ್ಲಿದ್ದಾರೆ. ಈ ಬಗ್ಗೆ ಈಗಾಗ್ಲೇ ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ಕೊಟ್ಟಿದ್ದಾರೆ. ಹೀಗಿದ್ರೂ ಮಾಡ್ತಿದ್ದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತೆ. ಈ ಬಗ್ಗೆ ಸಾಹೇಬರಿಗೆ ತಿಳಿಸುತ್ತೇವೆ ಎಂದು ಸಹಾಯಕರು ಹೇಳಿದ್ದಾರೆ.

ಒಂದು ಚೀಲಕ್ಕೆ ನೂರು ರೂಪಾಯಿ

ಇನ್ನು ಒಂದು ಕ್ವಿಂಟಾಲ್ ಚೀಲಕ್ಕೆ ನೂರು ರೂಪಾಯಿ ಹಣ ಪಡೆಯಲಾಗ್ತಿದೆ. ಇದ್ಯಾಕೆ ಅನ್ನೋದು ಯಾರಿಗೂ ಗೊತ್ತಿಲ್ಲ. 10 ಕ್ವಿಂಟಾಲ್ ತೊಗರಿ ತೆಗೆದುಕೊಂಡ್ರೆ 1 ಸಾವಿರ ರೂಪಾಯಿ ಕೊಡಬೇಕು. ಕೊಡದೆ ಹೋದ್ರೆ ಬಿಲ್ ಮಾಡುವುದಿಲ್ಲವೆಂದು ಹೆದರಿಕೆ ಹಾಕ್ತಾರಂತೆ. ಯಂಕಂಚಿ, ಸೋಮಜಾಳ, ಸಾತ್ಯಾಳದಲ್ಲಿ 130, 200 ರೂಪಾಯಿವರೆಗೆ ಹಣ ಪಡೆಯುತ್ತಿದ್ದಾರಂತೆ. ಈ ಬಗ್ಗೆ ಪ್ರಜಾಸ್ತ್ರದೊಂದಿಗೆ ರೈತರು ಮಾತ್ನಾಡಿರುವ ಎಕ್ಸ್ ಕ್ಲೂಸೀವ್ ಆಡಿಯೋ ಇಲ್ಲಿದೆ ಕೇಳಿ..

ಹೀಗೆ ರೈತರಿಂದ ಚೀಲಕ್ಕೆ ನೂರು ರೂಪಾಯಿ ಜೊತೆಗೆ 5 ರಿಂದ 10 ಕೆಜಿ ತೊಗರಿಯನ್ನ ಎಗರಿಸಲಾಗ್ತಿದೆ. ಹೀಗೆ ಹೆಚ್ಚುವರಿಯಾಗಿ ಪಡೆದ ತೊಗರಿಯನ್ನ ಸಂಜೆ ಮರಳಿ ತೂಕ ಮಾಡಿ ಒಂದೊಂದು ಚೀಲದಲ್ಲಿ 51.900 ಕೆಜಿ ತೂಕ ಮಾಡಿ ಕಟ್ಟಲಾಗುತ್ತೆ. ಉಳಿದ ತೊಗರಿಯನ್ನ ಎಲ್ಲಿಗೆ ಸಾಗಾಟ ಮಾಡಲಾಗ್ತಿದೆ ಅನ್ನೋದು ಅಧಿಕಾರಿಗಳು ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ದೇ ಹೋದರೆ, ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಅನ್ನೋ ಪ್ರಶ್ನೆ ಮೂಡುತ್ತೆ.




Leave a Reply

Your email address will not be published. Required fields are marked *

error: Content is protected !!