ಸಿಂದಗಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಹತ್ಯೆ: ಬಡ ದಲಿತ ಕುಟುಂಬಕ್ಕೆ ಸಿಗುತ್ತಾ ಪರಿಹಾರ?

464

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಐಸಿಐಸಿಐ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ರಾಹುಲ ಖೀರು ರಾಠೋಡ ಅನ್ನೋ ಯುವಕನನ್ನ, ಆಗಸ್ಟ್ 24ರ ಮಧ್ಯರಾತ್ರಿ ಕಳ್ಳತನಕ್ಕೆ ಬಂದಿದ್ದ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ್ರು. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕೊಲೆಯಾದ ರಾಹುಲ ಖೀರು ರಾಠೋಡ, ವಿಜಯಪುರದ ಮದಭಾವಿ ತಾಂಡ ನಿವಾಸಿಯಾಗಿದ್ದ. ಸಿಂದಗಿಯಲ್ಲಿ ರೂಮ್ ಮಾಡಿಕೊಂಡು ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗ್ತಿದ್ದ. ಬಿಎ ಪದವಿ ಮುಗಿಸಿದ್ದ ರಾಹುಲ, ಮನೆಯ ಬಡತನ ಪರಿಸ್ಥಿತಿಯಿಂದಾಗಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಗಿಸಿದ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ.

ರಾಹುಲ ತಂದೆ ತಾಯಿ ಹೊಲ ಮನಿ ಕೆಲಸ ಮಾಡ್ತಿದ್ದು, ದುಡಿಯಲು ಮಹಾರಾಷ್ಟ್ರಕ್ಕೂ ಸಹ ಹೋಗ್ತಿದ್ರಂತೆ. ಮನೆಗೆ ಹಿರಿಯ ಮಗನಾಗಿದ್ದ ರಾಹುಲ, ಓದಿನ ಜೊತೆಗೆ ದುಡಿಯುವ ಮೂಲಕ ಕುಟುಂಬಕ್ಕೆ ಒಂದಿಷ್ಟು ಆಸರೆಯಾಗಿದ್ದ. ದುಷ್ಕರ್ಮಿಗಳ ನೀಚ ಕೃತ್ಯಕ್ಕೆ ಅನ್ಯಾಯವಾಗಿ ಬಲಿಯಾಗಿದ್ದಾನೆ. ಆತನ ಕುಟುಂಬಕ್ಕೆ ಪರಿಹಾರದ ವಿಚಾರ ಸಂಬಂಧ ಕೆಲಸ ಕೊಡಿಸಿದ ಸೆಕ್ಯೂರಿಟಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಅವರನ್ನ ಕೇಳಿದ್ರೆ, ಪಿಎಫ್, ಇಎಸ್ಐ ಇದ್ರೆ ನೋಡಬಹುದು. ಕೈಯಿಂದ ಹಾಕಿ ಕೊಡಿ ಅಂದ್ರೆ ಹೇಗೆ ಅಂತಿದ್ದಾರೆ.

ಇನ್ನು ಐಸಿಐಸಿಐ ಬ್ಯಾಂಕ್ ಅಧಿಕಾರಿ ಅವರನ್ನ ಕೇಳಿದ್ರೆ, ಅವನು ನಮ್ಮ ಸಿಬ್ಬಂದಿ ಅಲ್ಲ. ಥರ್ಡ್ ಪಾರ್ಟಿಯಾಗಿದ್ದು, ಮೇಲಾಧಿಕಾರಿಗಳ ಜೊತೆ ಮಾತ್ನಾಡುತ್ತೇವೆ ಅಂತಾರೆ. ಮಗನನ್ನ ಕಳೆದುಕೊಂಡಿರುವ ಬಡ ದಲಿತ ಕುಟುಂಬಕ್ಕೆ ಪರಿಹಾರ ನೀಡುವವರು ಯಾರು? ಸರ್ಕಾರ ಈ ವಿಚಾರದಲ್ಲಿ ಪರಿಹಾರ ನೀಡುವ ಮೂಲಕ ಸಾಂತ್ವಾನ ಹೇಳುವ ಕೆಲಸ ಮಾಡುತ್ತಾ? ಈ ಕುಟುಂಬದ ಬೆನ್ನಿಗೆ ನಿಲ್ಲೋದು ಯಾರು? ಪರಿಹಾರ ವಿಚಾರದಲ್ಲಿ ಮುಂದೇನಾಗುತ್ತೆ ಅನ್ನೋದು ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!