ಬಿಜೆಪಿ, ಟಿಎಂಸಿ ಮತ್ತು ಶ್ರೀರಾಮ…

1195

ಭರತಖಂಡದಲ್ಲಿ ಶ್ರೀರಾಮಚಂದ್ರನಿಗೆ ವಿಶೇಷವಾದ ಸ್ಥಾನವಿದೆ. ರಾಮನಿಗೆ ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ವಿಷ್ಣುವಿನ ಹತ್ತನೇ ಅವತಾರ ಶ್ರೀರಾಮ್ ಎಂದು ಭಕ್ತಿಭಾವದಿಂದ ಪೂಜೆ ಮಾಡ್ತಾರೆ. ತನ್ನ ಇಡೀ ಬದುಕಿನೂದಕ್ಕೂ ಒಳ್ಳೆಯದನ್ನೆ ಮಾಡಿಕೊಂಡು ಬಂದ ಅನ್ನೋ ಕಾರಣಕ್ಕೆ, ಇಂದಿಗೂ ರಾಮನಂತ ಗುಣ ಅನ್ನೋ ಮಾತಿದೆ. ಆತನ ಆದರ್ಶಗಳು ಎಲ್ಲರಿಗೂ ಮಾದರಿ. ಧರ್ಮ ಪಾಲನೆಯಲ್ಲಿ ರಾಮನಿಗಿಂತ ಮತ್ತೊಬ್ಬರಿಲ್ಲ ಅನ್ನೋದು ರಾಮ ಭಕ್ತರ ಮಾತು.

ಇದರ ನಡುವೆ ರಾಮ ದೇವರಲ್ಲ ಅನ್ನೋ ಜನ ಸಹ ಇದ್ದಾರೆ. ಐತಿಹಾಸಿಕ ವ್ಯಕ್ತಿಯನ್ನ ದೇವರು ಮಾಡಲಾಗಿದೆ ಅಂತಾ ಆರೋಪ ಮಾಡುವರು ಇದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳ ಪಾಲಿಗೆ ರಾಮ ಪ್ಲಸ್ ಪಾಯಿಂಟ್ ಆಗಿದ್ದಾನೆ. ಈ ಕಾರಣಕ್ಕೆ ತಮಗೆ ಬೇಕಾದಾಗ ರಾಜಕೀಯ ಅಂಗಳದಲ್ಲಿ ಶ್ರೀರಾಮನನ್ನ ಹಿಡಿದು ಎಳೆದಾಡಲಾಗ್ತಿದೆ. ಅದಕ್ಕೆ ಇದೀಗ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೈ ಶ್ರೀರಾಮ್ ವಾರ್ ಜೋರಾಗಿಯೇ ನಡೆದಿದೆ. ಇದರ ಅಬ್ಬರಕ್ಕೆ ನೆತ್ತರು ಸಹ ಹರಿಯುತ್ತಿದೆ. ಲೋಕಸಭಾ ಚುನಾವಣೆಯ ಪ್ರಚಾರದ ಹೊತ್ತಿನಲ್ಲಿ ಶುರುವಾದ ಈ ಕಾಳಗ, ಇವತ್ತಿಗೂ ಮುಂದುವರೆದಿದೆ. ಹೀಗಾಗಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೇಸರಿ ಪಡೆಯ ನಾಯಕರ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಇದೆಲ್ಲವನ್ನ ಸೂಕ್ಷ್ಮವಾಗಿ ಗಮನಿಸಿದ್ರೆ, ಇದರ ಹಿಂದೆ ಇರೋದು ಕಂಪ್ಲೀಟ್ ರಾಜಕೀಯ ರಣತಂತ್ರ. ಬಿಜೆಪಿ ಹಾಗೂ ಟಿಎಂಸಿ ಪಾರ್ಟಿಯ ಚದುರಂಗದಾಟದಲ್ಲಿ ಶ್ರೀರಾಮ್ ಒಂದು ದಾಳವಾಗಿ ಉಪಯೋಗವಾಗ್ತಿದ್ದಾನೆ.

ರಾಮನನ್ನ ನಿಜವಾದ ಭಕ್ತಿಯಿಂದ ಪೂಜೆ ಮಾಡುವವರು ತಂತಮ್ಮ ಪಾಡಿಗೆ ಇದ್ದಾರೆ. ಅವನಿಗೆ ಯಾವ ಆಲಯದ ಅವಶ್ಯಕತೆಯಿಲ್ಲ. ನಮ್ಮ ಮನದಲ್ಲಿದ್ದಾನೆ ಎಂದು ಭಕ್ತಿ ಸಮರ್ಪಿಸ್ತಿದ್ದಾರೆ. ಆದ್ರೆ, ಬಿಜೆಪಿಗೆ ರಾಮ ರಾಜಕೀಯದ ವಸ್ತು. ರಾಮಭಕ್ತ ಹನುಮ ಸಹ ಇದೀಗ ಸೇರ್ಪಡೆಯಾಗಿದ್ದಾನೆ. ಇವರಿಬ್ಬರು ಹೆಸರು ಬಿಜೆಪಿಗೆ ಶಕ್ತಿ. ಇದನ್ನ ವಿರೋಧ ಮಾಡುವುದು ಪ್ರತಿಪಕ್ಷಗಳ ಶಕ್ತಿ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಶ್ರೀರಾಮ ಪರ ವಿರೋಧದ ಗಲಾಟೆ ಜೋರಾಗಿದೆ. ಬಿಜೆಪಿ ಪೋಸ್ಟ್ ಕಾರ್ಡ್ ಅಭಿಯಾನ ಶುರು ಮಾಡಿದ್ದು, 10 ಲಕ್ಷ ಪೋಸ್ಟ್ ಕಾರ್ಡ್ ನಲ್ಲಿ ಜೈ ಶ್ರೀರಾಮ್ ಎಂದು ಬರೆದು ದೀದಿಗೆ ಕಳುಹಿಸಿ ಕೊಡಲಾಗ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಟೈಂನಲ್ಲಿ ಇದು ಶುರುವಾಗಿದೆ. ಜೈ ಶ್ರೀರಾಮ್ ಅಂತಾ ಘೋಷಣೆ ಕೂಗಿದ ಮೂವರನ್ನ ಸಿಎಂ ಮಮತಾ ಬ್ಯಾನರ್ಜಿ ಬಂಧಿಸಿದ್ರು. ಇದಕ್ಕೆ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭಾರತದಲ್ಲಿ ಜೈ ಶ್ರೀರಾಮ್ ಎನ್ನದೆ ಪಾಕಿಸ್ತಾನದಲ್ಲಿ ಹೇಳಬೇಕೆ ಎಂದು ದೀದಿಯನ್ನ ಪ್ರಶ್ನಿಸಿದ್ರು. ನಾನು ಶ್ರೀರಾಮನ ಮಂತ್ರ ಪಠಿಸುತ್ತೇನೆ. ನಿಮಗೆ ತಾಕತ್ತಿದ್ರೆ ನನ್ನನ್ನು ಬಂಧಿಸಿ ಅಂತಾ ಸವಾಲು ಹಾಕಿದ್ರು. ಅದು ಅಲ್ಲಿಗೆ ತಣ್ಣಗಾಗ್ಲಿಲ್ಲ, ಮುಂದೆ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದು, ಪಶ್ಚಿಮ ಬಂಗಾಳದ ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ಸಹ ಧ್ವಂಸ ಮಾಡಲಾಗಿತ್ತು. ಹೀಗೆ ಹಿಂಸಾರೂಪಕ್ಕೆ ಇಳಿದಿದ್ದಕ್ಕೆ ಚುನಾವಣೆ ಆಯೋಗ ಒಂದು ದಿನ ಮೊದ್ಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದಿತ್ತು.

ಇನ್ನು ಮೇ 31ರಂದು ಸಿಎಂ ಮಮತಾ ಬ್ಯಾನರ್ಜಿ ಕೊಲ್ಕತ್ತಾದ ನಾರ್ಥ್ 24 ಪರ್ಗಣಾಸ್ ಮಾರ್ಗದಲ್ಲಿ ಹೊರಟಿದ್ದಾಗ, ಜೈ ಶ್ರೀರಾಮ್ ಘೋಷಣೆ ಕೂಗಲಾಯ್ತು. ಇದ್ರಿಂದ ಕೆಂಡಾಮಂಡಲರಾದ ದೀದಿ, ಕಾರಿನಿಂದ ಇಳಿದು ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ರು. ಇವರೆಲ್ಲ ಬಿಜೆಪಿ ಕಾರ್ಯಕರ್ತರು, ಇವರು ಇಲ್ಲಿಯವರಲ್ಲ. ಹೊರಗಿನಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ನೋಡ್ತಿದ್ದಾರೆ. ಘೋಷಣೆ ಕೂಗಿದ ಎಲ್ಲರ ಹೆಸರನ್ನ ಬರೆದುಕೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಹೇಳಿ, ಇವರಿಗೆಲ್ಲ ಏನು ಮಾಡಬೇಕು ಅನ್ನೋದು ನನಗೆ ಗೊತ್ತು ಅಂತಾ ವಾರ್ನ್ ಮಾಡಿದ್ರು.

ಶ್ರೀರಾಮ್ ಘೋಷಣೆ ಯಾಕೆ ಇಷ್ಟೊಂದು ಸದ್ದು ಮಾಡ್ತಿದೆ ಅಂತಾ ನೋಡಿದ್ರೆ, ಮತ್ತೆ ಅದು ರಾಜಕೀಯದತ್ತೆ ಕರೆದುಕೊಂಡು ಬರುತ್ತೆ. ಕಳೆದ ಬಾರಿ ಕೇವಲ 4ರಲ್ಲಿ ಗೆಲುವು ದಾಖಲಿಸಿದ್ದ ಬಿಜೆಪಿ ಈ ಬಾರಿ 18 ಲೋಕಸಭಾ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಳೆದ ಬಾರಿ 34 ಸ್ಥಾನ ಗೆದ್ದಿದ್ದ ತೃಣಮೂಲ ಕಾಂಗ್ರೆಸ್ ಈ ಬಾರಿ 22ಕ್ಕೆ ಕುಸಿದಿದೆ. ಹೀಗಾಗಿ 2021ರ ವಿಧಾನಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಟಿಎಂಸಿ ಕಚ್ಚಾಟ ಶುರು ಮಾಡಿವೆ. ಬಂಗಾಳದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ನೋಡ್ತಿರುವ ಬಿಜೆಪಿ ಶ್ರೀರಾಮನ ಅಸ್ತ್ರ ಪ್ರಯೋಗ ಮಾಡಿದೆ. ಇದಕ್ಕೆ ದೀದಿ ಸಹ ಪ್ರತಿ ಅಸ್ತ್ರ ಬಿಡ್ತಿದ್ದಾರೆ.

We wish to inform the people that some BJP supporters are trying to spread hatred ideology through one section of media – My FB post >> https://t.co/R9EYTCyU5e pic.twitter.com/YQMV7HMfHY— Mamata Banerjee (@MamataOfficial) June 2, 2019

ಇನ್ನು ತಮ್ಮ ಪ್ರೊಫೈಲ್ ಫಿಕ್ಚರ್ ಬದಲಿಸಿರುವ ದೀದಿ, ಜೈ ಹಿಂದ್ ಜೈ ಬಾಂಗ್ಲಾ ಅನ್ನೋ ಘೋಷಣೆಯೊಂದಿಗೆ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಭೋಸ್, ವಿದ್ಯಾಸಾಗರ, ಭಗತ್ ಸಿಂಗ್, ರಾಜಾ ರಾಮ್ ಮೋಹನ್ ರಾಯ್, ಅಂಬೇಡ್ಕರ್, ಟ್ಯಾಗೂರ್ ಸೇರಿ ಅನೇಕ ನಾಯಕರ ಫೋಟೋ ಇಟ್ಟಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಶ್ರೀರಾಮ್ ಪಾಲಿಟಿಕ್ಸ್ ಟ್ರಂಪ್ ಕಾರ್ಡ್ ಆಗ್ತಿರೋದು ಮಾತ್ರ ಸುಳ್ಳಲ್ಲ.


TAG


Leave a Reply

Your email address will not be published. Required fields are marked *

error: Content is protected !!