ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ನೀಡುವ ಶಿಕ್ಷಣ ಬೇಕು: ಪ್ರೊ. ಗೋಪಾಲಕೃಷ್ಣ ಜೋಶಿ

679

ಪ್ರಜಾಸ್ತ್ರ ಸುದ್ದಿ

ಧಾರವಾಡ: ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ಪ್ರಸ್ತುತ ಉನ್ನತ ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಜೋಶಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯವು ಶಿಕ್ಷಕರ ದಿನಾಚರಣೆಯ ಅಂಗವಾಗಿ ಕವಿವಿ ಸುವರ್ಣಮಹೋತ್ಸವ ಭವನದಲ್ಲಿ ಆಯೋಜಿಸಿದ ಡಾ.ಎಸ್.ರಾಧಾಕೃಷ್ಣನ್ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಭಾರತದ ಉನ್ನತ ಶಿಕ್ಷಣದಲ್ಲಿ ಬದಲಾಗುತ್ತಿರುವ ವಿನ್ಯಾಸ: ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

ಪ್ರಸ್ತುತ ಉದ್ಯೋಗ ಆಧಾರಿತ ಮಾರುಕಟ್ಟೆಯ ಬೇಡಿಕೆಗೆ ಅನುಸಾರವಾಗಿ ಕೌಶಲ್ಯ ಆಧಾರಿತ ಶಿಕ್ಷಣವನ್ನು ಉನ್ನತ ಶಿಕ್ಷಣವನ್ನು ಇಂದಿನ ಯುವ ಸಮುದಾಯಕ್ಕೆ ನೀಡುವ ಅವಶ್ಯಕತೆ ಇದೆ ಎಂದ ಅವರು ಇಂದು ಭಾರತ ಜ್ಞಾನ ಆಧಾರಿತ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಕೈಗಾರಿಕಾ ಆರ್ಥಿಕತೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಸಲು ಸಹಾಯಕವಾಗಲಿದೆ ಎಂದರು. ಇಂದಿನ ಉನ್ನತ ಶಿಕ್ಷಣ ಜಾಗತಿಕವಾಗಿ ಹೊಸ ಅನ್ವೇಷಣೆ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಕೇಂದ್ರಿಕರಿಸಬೇಕಾಗಿದ್ದು, ಇಂದು ಜೈವಿಕ ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ ಎಂದರು.

ಇಂದು ಕೌಶಲ್ಯ ಆಧಾರಿತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಪದವಿ ಹಂತದಲ್ಲಿ ವೃತ್ತಿಪರ ಕೌಶಲ್ಯ ಆಧಾರಿತ ಹೊಸ ಪರಿಕಲ್ಪನೆಯ ಶಿಕ್ಷಣವನ್ನು ನೀಡುವುದರಿಂದ ಯುವ ಸಮುದಾಯಕ್ಕೆ ಅನುಕೂಲವಾಗಲಿದ್ದು, ಅಭಿವೃದ್ಧಿ ಆಧಾರಿತ ಪ್ರಾಯೋಗಿಕ ತರಬೇತಿ ನೀಡುವ ಶಿಕ್ಷಣದ ಅವಶ್ಯಕತೆ ಇದೆ ಎಂದರು.

ಬೆಂಗಳೂರು ಇಂದು ಜಗತ್ತಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಬ್ ಆಗಿದ್ದು, ಭವಿಷತ್ತಿನಲ್ಲಿ ಸಂಶೋಧನೆಗೆ ಹೆಚ್ಚು ಅನುದಾನ ನೀಡುಬೇಕಾಗಿದ್ದು, ಕರ್ನಾಟಕ ರಾಜ್ಯ ಕಳೆದ ಎರಡು ವರ್ಷಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಹೊಸದಾಗಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಅನ್ವೇಷಣೆಗೆ ಅವಕಾಶಗಳು ಇವೆ ಎಂದ ಅವರು ಭವಿಷ್ಯತ್ತಿನಲ್ಲಿ ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸೆಕ್ಯುರಿಟಿ ಕ್ಷೇತ್ರಗಳು ಮುನ್ನಲೆಗೆ ಬರಲಿವೆ ಎಂದರು.

ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ.ಕೆ.ಟಿ.ಹನುಮಂತಪ್ಪ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಗುಲಬರ್ಗಾ ವಿವಿಯ ಮಾಜಿ ಕುಲಪತಿ ಪ್ರೊ.ಬಿ.ಜಿ. ಮೂಲಿಮನಿ ಸಿಂಡಿಕೇಟ್ ಸದಸ್ಯರಾದ ಸುಧೀಂದ್ರ ದೇಶಪಾಂಡೆ, ಕವಿವಿಯ ಮೂಲತತ್ವ ಉಪನ್ಯಾಸ ಮಾಲಿಕೆಯ ಸಂಘಟನಾ ಕಾರ್ಯದರ್ಶಿ ಡಾ.ಸಂಜೀವ ಇನಾಂದಾರ ಕವಿವಿ ಪ್ರಸಾರಾಂಗದ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ.ಎನ್ ಸಿದ್ದಪ್ಪ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಸಂಶೋಧಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!