ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಪಾಲಿಟಿಕ್ಸ್ ಸ್ವಲ್ಪ ಬೇರೆ ರೀತಿಯಲ್ಲಿ ಇರುತ್ತೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೇಗಾದರೂ ಮಾಡಿ ಅವರನ್ನು ಸೋಲಿಸಬೇಕು ಎನ್ನುತ್ತಿದ್ದಾರೆ.
ಚುನಾವಣೆ ಸಂಬಂಧ ಮತದಾರರನ್ನು ಸೆಳೆಯಲು ಪಕ್ಷಗಳು ಕಸರತ್ತು ನಡೆಸಿದ್ದು, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಒಂದು ಮತಕ್ಕೆ 6 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ನಾವು ಗಿಫ್ಟ್ ಕೊಡುವುದಿಲ್ಲ. ಕಾಂಗ್ರೆಸ್ ಗಿಂತ ಡಬಲ್ ಹಣ ಕೊಡುತ್ತೇವೆ. ನನಗೆ ಮತ ಹಾಕಿದರೆ 1 ಮತಕ್ಕೆ 6 ಸಾವಿರ ರೂಪಾಯಿ ಕೊಡುತ್ತೇನೆ ಎಂದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ಮೋದಿ ಅವರು ನಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲವೆಂದು ಹೇಳುವ ಮೂಲಕ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಸಮರ ಸಾರಿದೆ ಎಂದಿದ್ದಾರೆ. ಇದೆ ಮಾತನ್ನು ಬಿಜೆಪಿ ನಾಯಕರು ಜಪಿಸುತ್ತಾರೆ. ಆದರೆ, ವಾಸ್ತವ ಏನು ಅನ್ನೋದು ಜನರಿಗೆ ಗೊತ್ತಿದೆ. ಈಗ ನೋಡಿದರೆ ಅವರದೆ ಪಕ್ಷದ ಶಾಸಕ ಬಹಿರಂಗವಾಗಿ 6 ಸಾವಿರ ರೂಪಾಯಿ ಕೊಡುತ್ತೇನೆ ಎಂದಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಮೂಡಿದೆ. ಹಣವೊಂದು ಇದ್ದರೆ ಎಲ್ಲರನ್ನು ಕೊಂಡುಕೊಳ್ಳುತ್ತೇನೆ ಅನ್ನೋ ವರ್ತನೆ ಎಷ್ಟು ಸರಿ ಎಂದು ಕೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ ಅನ್ನೋದು ಕಾದು ನೋಡಬೇಕಿದೆ.
ಈಗ್ಲಾದರೂ ಮತದಾರರು ರಾಜಕೀಯ ಪಕ್ಷಗಳ ಬಗ್ಗೆ, ರಾಜಕೀಯ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು. ಮತದಾನದ ಹಕ್ಕು ಎಷ್ಟೊಂದು ಶ್ರೇಷ್ಠ ಅನ್ನೋದು ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ಅದನ್ನು ಮಾರಿಕೊಳ್ಳುತ್ತಾ ಹೋದರೆ ಮತದಾರರನ್ನು ಹೇಗೆ ನೋಡುತ್ತಾರೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.