ಬೆನ್ನಿಗೆ ಬಿದ್ದವರ ಬಣ್ಣಿಸಲಾಗದ ಅನುಬಂಧ…

394

ಸಹೋದರನ ಕೈಗೆ ಕಟ್ಟುವ ನೂಲು ಬರಿ ದಾರವಲ್ಲ. ಬೆನ್ನಿಗೆ ಬಿದ್ದವಳ ಶುಭ ಹಾರೈಕೆಯ ಸಂಕೇತ. ಕಡಲಾಚೆಯಿದ್ದರೂ ಕರೆಯುತ್ತೆ ಈ ಕರೆಯೋಲೆ. ಮಣ್ಣು ಕುಳ್ಳಿನ ಆಟಿಕೆಯಿಂದ ಶುರುವಾದ ತುಸು ಜಗಳ, ಬಲು ಪ್ರೀತಿ ಇಬ್ಬರ ಬದುಕಿನ ಭಾವನೆಯ ಬಂಧನವಾಗಿದೆ. ಅಂತಹ ಬೆಸೆದ ಸಂಬಂಧದ ಚೆಂದದ ನಾಲ್ಕು ಸಾಲುಗಳು ಇಲ್ಲಿವೆ…

ಉದರ ಸಂಬಂಧದ ನಂಟು

ಸಹೋದರನೊಂದಿಗೆ ಪ್ರೀತಿ ಬಂಡಿವಾಡ, ಗದ

ಸಹ ಉದರ ಎಂದರೆ ಜೊತೆಯಲ್ಲಿ ಹುಟ್ಟಿದವನು. ಒಡಹುಟ್ಟಿದವನಿಂದ ರಕ್ಷಣೆ ಬಯಸಿ, ಬಂಧನದಲ್ಲಿ ಬಂಧಿಯಾಗಿಸುವ ಪ್ರೀತಿಯ ಹಬ್ಬ. ಸಹೋದರನಿಂದ ಶ್ರೀರಕ್ಷೆ ಬಯಸಿ ಹೆಣೆದುಕೊಳ್ಳುವ ಬಂಧನವೇ ರಕ್ಷಾ ಬಂಧನವಾಗಿದೆ. ಈ ಹಬ್ಬ ನೆಪವಾದರೂ ಹೃದಯಾಳದಲ್ಲಿ ಸಂಬಂಧಗಳನ್ನ ಬೇರೂರಿ ಬೆಸೆಯುತ್ತವೆ. ಈ ಸೌಭಾಗ್ಯ ನನಗೂ ಲಭಿಸಿದೆ ಎಂದು ಗರ್ವದಿಂದ ಹೇಳಬಲ್ಲೆ. ನನ್ನ ಉಸಿರಿನ ಭಾಗವಾಗಿರುವ ಅಣ್ಣ ತಮ್ಮನಿಗೆ ನನ್ನ ಪ್ರೀತಿ ಹಂಚುವ ದಿನವಿದು.

ಕೊನೆಗೊಳ್ಳದ ಪ್ರೀತಿ

ಮಹಾಂತೇಶ ಬಿ ಕಲಶೆಟ್ಟಿ, ಸಿಂದಗಿ

ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ವಿಶೇಷತೆ ಮತ್ತು ಹಿನ್ನೆಲೆಯಿದೆ. ಭ್ರಾತೃತ್ವದ ಸಂಕೇತ ಹಾಗೂ ಅಣ್ಣ-ತಂಗಿಯರ ಸಂಬಂಧಕ್ಕೆ ಅರ್ಥ ಕಲ್ಪಿಸುವ ಪವಿತ್ರವಾದ ಹಬ್ಬ ರಕ್ಷಾ ಬಂಧನ. ರಕ್ಷಾಬಂಧನದಲ್ಲಿ ಎರಡು ಪದಗಳಿವೆ. ಅದೇ ರಕ್ಷಾ ಮತ್ತು ಬಂಧನ. ಸೋದರನ ರಕ್ಷಣೆಗೆ ಸೋದರಿ ತನ್ನೊಳಗೆ ಹಂಚಿಕೊಳ್ಳುವ ಯಾವತ್ತೂ ಕೊನೆಗೊಳ್ಳದ ಪ್ರೀತಿಯನ್ನು ರಕ್ಷಾಬಂಧನ ಎನ್ನಬಹುದು.

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು

ಬೆನ್ನ ಕಟ್ಟುವರು ಸಭೆಯೊಳಗೆ ಸಾವಿರ

ಹೊನ್ನ ಕಟ್ಟುವರು ಉಡಿಯೊಳಗೆ

ಆ ದಿನಗಳ ಸಂಭ್ರಮವೇ ಬೇರೆ

ಸ್ವಪ್ನಾ ಕಲಾದಗಿ, ವಿಜಯಪು

ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾ ಬಂಧನವಾಗಿದೆ. ಪರಸ್ಪರ ಭ್ರಾತೃತ್ವದ ಭಾವನೆಯನ್ನ ಗಟ್ಟಿಗೊಳಿಸುವ ಹಬ್ಬ ಶ್ರಾವಣ ಪೂರ್ಣಿಮೆ ಅಥವ ನೂಲ ಹುಣ್ಣಿಮೆ ದಿನದಂದೆ ಆಚರಿಸಲಾಗುತ್ತೆ. ಮೊದಲೆಲ್ಲ ತಿಂಗಳು ಉಳಿದಾಗಲೇ ಅಣ್ಣ, ತಮ್ಮನಿಗೆ ಅಕ್ಕ, ತಂಗಿಯರು ಅಂಚೆ ಮೂಲಕ ರಾಖಿ ಕಳಿಸುತ್ತಿದ್ದರು. ಅವರಿಂದ ಕಾಣಿಕೆ ಪಡೆಯುತ್ತಿದ್ದರು. ಆ ಸಂಭ್ರಮವೇ ಬೇರೆ. ಇಂದಿನ ಮೊಬೈಲ್ ಯುಗದಲ್ಲಿಯೂ ಇದನ್ನು ಉಳಿಸಿಕೊಂಡು ಹೋಗಬೇಕಿದೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು.

ಸಂಬಂಧ ಗಟ್ಟಿಗೊಳಿಸುವ ರಕ್ಷಾ ಬಂಧನ

ಯಮನೂರಪ್ಪ ಶಂ ಅರಬಿ, ವಿಜಯಪುರ

ಯಾವತ್ತೂ ಏನೇ ಬಂದರು, ಏನೇ ನಡೆದರೂ ಒಡಹುಟ್ಟಿದವರು, ರಕ್ತ ಸಂಬಂಧದವರು ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಅಲ್ಲಿ ಯಾರು ಸುಳಿಯುದಿಲ್ಲ, ನುಸುಳುವುದಿಲ್ಲ. ಸಹೋದರ ಹಾಗೂ ಸಹೋದದರಿಯರಲಿ ಬಿರುಕು ಉಂಟಾಗದಂತೆ ಗಟ್ಟಿತನ ಬೆಳೆಸಿ, ಉಳಿಸಿಕೊಂಡು ಹೋಗುವುದು ನಮ್ಮ ರಕ್ಷಾಬಂಧನದ ಗುರಿಯಾಗಿರಬೇಕು. ಕಷ್ಟ ಕಾಲದಲ್ಲಿ ಸಂಬಂಧದವರು ಒಬ್ಬರಿಗೊಬ್ಬರು ಆತ್ಮೀಯ, ಪ್ರೀತಿ, ಭಾಂದವ್ಯ, ಪ್ರೇಮ ತೋರುತ್ತಿರಬೇಕು. ಒಬ್ಬರ ಮಾತಿನಲಿ ಒಬ್ಬರ ಇದ್ದರೆ ಇನ್ನಷ್ಟು ಗಟ್ಟಿ ಬಂಧನ ನಮ್ಮದಾಗುತ್ತದೆ. ಸಿಹಿ ಜೇನು ತುಂಬಿದ ಜೇನುಹುಳ ನಾವಾಗಬೇಕು.

ಮೊಗೆದಷ್ಟು ಪ್ರೀತಿ ನೀಡುವ ಸಂಬಂಧ

ಪವಿತ್ರಾ ಕುಂಬಾರ, ಮಾಗಣಗೇರಿ

ಅಣ್ಣ ತಮ್ಮನೆಂದರೆ ಅಕ್ಕ ತಂಗಿಯರಿಗೆ ಬಲು ಜೀವ. ಹಾಗೆಯೇ ಅವರಿಗೂ ಸಹ ಅಕ್ಕ ತಂಗಿಯರು ಎಂದರೆ ತನ್ನದೆ ಒಂದು ಭಾಗವಿದ್ದಂತೆ. ಆ ಸಂಭಂದವೇ ಹಾಗೇ, ಅಲ್ಲಿ ಮೊಗೆದಷ್ಟು ಪ್ರೀತಿ. ಒಮ್ಮೊಮ್ಮೆ  ಹೊಡೆದಾಟ. ಆದರೆ  ಇದೆಲ್ಲವನ್ನು ಮೀರಿದ ಭಾಂದವ್ಯವೊಂದಿದೆಯಲ್ಲ ಅದನ್ನು ಬಣ್ಣಿಸಲಾಗದು. ಪ್ರತಿ ಸಹೋದರ ಸಹೋದರಿಯರ ಮಧುರ  ಭಾವನೆ ನವಿರಾದದ್ದು. ಆ ಭಾವನೆಗಳನ್ನು ಗಟ್ಟಿಗೊಳಿಸುವ ದಿನವೇ ಈ ರಕ್ಷಾಬಂಧನ. ದೇವರು ನಮ್ಮ ಅಣ್ಣ  ತಮ್ಮಂದಿರಿಗೆ ಆಯುರಾರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ. ನಮ್ಮ  ಸಂಬಂಧ  ಗಟ್ಟಿಗೊಳಿಸಲಿ  ಎಂದು ಕೇಳಿಕೊಳ್ಳುವ  ಶುಭ  ದಿನವಿದು.




Leave a Reply

Your email address will not be published. Required fields are marked *

error: Content is protected !!