ಮದ್ವೆಯಾದ್ರೆ ಬೇಡಿ ಹಾಕಿಕೊಳ್ಳಬೇಕು.. ಭಿಕ್ಷೆ ಬೇಡಬೇಕು..

621

ನಮ್ಮಲ್ಲಿ ಸಂಪ್ರದಾಯ, ಆಚರಣೆ, ನಂಬಿಕೆ ಅನ್ನೋದು ಇನ್ನೂ ಜೀವಂತವಾಗಿದೆ. ದೇವರನ್ನ ನಾವು ಯಾರೂ ನೋಡಿಲ್ಲವಾದ್ರೂ, ಅದೊಂದು ಅಮೂರ್ತ ಶಕ್ತಿ ನಮ್ಮನ್ನ ಕಾಪಾಡುತ್ತೆ ಅನ್ನೋ ನಂಬಿಕೆಯಿದೆ. ಆದ್ರೆ, ಕೆಲವು ಸಾರಿ ಅದು ವಿಚಿತ್ರ ಅನ್ನೋ ರೀತಿಯಲ್ಲಿ ನಡೆಯುತ್ತವೆ. ಅದಕ್ಕೆ ಸಿಂದಗಿ ತಾಲೂಕಿನ ಯಂಕಂಚಿಯಲ್ಲಿನ ಈ ಸ್ಟೋರಿನೇ ಸಾಕ್ಷಿ.

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ದಾವಲ್ ಮಲ್ಲಿಕ್ ಅನ್ನೋ ದೇವಸ್ಥಾನವಿದೆ. ಇದು ಹಿಂದೂ ಮುಸ್ಲಿಂ ಭಾವೈಕತೆಯ ಸಂಕೇತವಾಗಿದೆ. ಈ ದರ್ಗಾದಲ್ಲಿ, ಹೀಗೆ ಕಾಲಿಗೆ ಬೇಡಿ ಕಟ್ಟಿಕೊಂಡು ಸಾಲಾಗಿ ನಿಂತಿರುವವರನ್ನ ಮೊದಲ ಬಾರಿಗೆ ಯಾರೇ ನೋಡಿದ್ರೂ, ಏನೋ ತಪ್ಪು ಮಾಡಿರಬೇಕು ಅಂದ್ಕೊಳ್ತಾರೆ. ಆದ್ರೆ, ಇದೊಂದು ವಿಚಿತ್ರ ಸಂಪ್ರದಾಯ ನೂರಾರು ವರ್ಷಗಳಿಂದ ಸದ್ದಿಲ್ಲದೇ ನಡೆದುಕೊಂಡು ಬರ್ತಿದೆ.

ಸ್ಥಳೀಯ ದಾವಲ್‌ ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಅರ್ಜುನ್ ಮುಜಾವರ ಕುಟುಂಬದಲ್ಲಿ ಯಾವುದೇ ಗಂಡು ಮಕ್ಕಳ ಮದುವೆಯಾಗ್ಲಿ. ಐದು ದಿನದ ಬಳಿಕ ಮನೆಯಲ್ಲಿರುವ ಎಲ್ಲ ಗಂಡು ಮಕ್ಕಳು ಹೀಗೆ ಕಾಲಿಗೆ ಬೇಡಿ ಹಾಕಿಕೊಳ್ಳವ ಸಂಪ್ರದಾಯವಿದೆ. ಅದು ತಾನಾಗೇ ಕಳಚುವ ತನಕ ಇವರ್ಯಾರು ಮನೆಗೆ ಹೋಗುವುದಿಲ್ಲ.

ಕಳೆದ ಮೇ 24 ರಂದು ಸೋಮನಾಥ ಮುಜಾವರ್ ಅನ್ನೋವರ ಮದುವೆಯಾಗಿದೆ. ಮದುವೆಯಾದ ಐದು ದಿನಗಳ ನಂತ್ರ, ಇಲ್ಲಿಗೆ ಬಂದ 18 ಜನ ಗಂಡ್ಮಕ್ಕಳು ಬೇಡಿ ಹಾಕಿಕೊಂಡಿದ್ದಾರೆ. ದೇವರು ಅಪ್ಪಣೆ ಕೊಟ್ಟು, ತನ್ನಿಂದ ತಾನೇ ಕೋಳ ಮುರಿಯುವವರೆಗೂ ಯಾವೊಬ್ಬ ಸದಸ್ಯ ಕೂಡ ಮನೆಗೆ ಹೋಗುವುದಿಲ್ಲ. ನವವರ  ಸಂಸಾರ ಮಾಡುವಂತಿಲ್ಲ. ನವವರ ಸೋಮನಾಥ ಹೇಳಿದ ಮಾತುಗಳು ಇಲ್ಲಿವೆ..

ಇನ್ನು ಹೆಣ್ಮಕ್ಕಳಿಗೆ ಹೂವಿನ ಬೇಡಿ ಹಾಕ್ತಾರೆ. ಅದು ಸಂಜೆಯೊಳಗೆ ಬಾಡಿ ಹೋಗುತ್ತೆ. ಬಳಿಕ ಅವರು ಮನೆಗೆ ಹೋಗ್ತಾರೆ. ಆದ್ರೆ, ಗಂಡ್ಮಕ್ಕಳು ಹಾಕಿಕೊಂಡಿರುವ ಕಬ್ಬಿಣದ ಬೇಡಿ ತನ್ನತಾನೆ ಕಳಚುವ ತನಕ ಅವರು ಮನೆಗೆ ಹೋಗುವಂತಿಲ್ಲ. ಅದು ದಿನ, ವಾರ, ತಿಂಗಳು ಕಳೆದ್ರೂ ಅವರು ಇಲ್ಲಿಯೇ ಇರ್ತಾರೆ. ಆದ್ರೆ, ಒಂದು ತಿಂಗಳ ಮೇಲೆ ಯಾರೂ ಇರೋದಿಲ್ಲ ಅಂತಾರೆ. ಕಳೆದ 15 ದಿನಗಳ ಹಿಂದೆ 18ಮಂದಿ ಕಾಲಿಗೆ ಕಬ್ಬಿಣದ ಬೇಡಿ ಹಾಕಿಕೊಂಡಿದ್ರು. ಅದರಲ್ಲಿ ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 12 ಜನ ದೇವರ ಕೃಪೆಗಾಗಿ ಕಾದಿದ್ದು, ಇಲ್ಲಿಯೇ ಅಡ್ಡಾಡ್ತಿದ್ದಾರೆ.

ಹೀಗೆ ಕಾಲಿಗೆ ಬೇಡಿ ಹಾಕಿಕೊಂಡು ಇರುವ ಇವರು ಭೀಕ್ಷೆ ಬೇಡಿ ಊಟ ಮಾಡಬೇಕು. ದೇವಸ್ಥಾನದಲ್ಲಿ ಯಾವುದಾದ್ರೂ ಕಾರ್ಯಕ್ರಮ ನಡೆದಾಗ ಊಟ ಹಾಕಿದ್ರೆ ಅಲ್ಲಿ ಮಾಡಬೇಕು. ಇನ್ನು ದೇವಸ್ಥಾನದಲ್ಲಿ ಮುಜಾವರ್ ಕುಟುಂಬದ ಹಿರಿಯರಾದ ಅರ್ಜುನ್ ಮುಜಾವರ ಪೂಜಾರಿಯಾಗಿದ್ದಾರೆ. ಹಾಗಾದ್ರೆ, ಹೀಗೆ ಬೇಡಿಹಾಕಿಕೊಳ್ಳುವ ಹಿಂದಿನ ಕಥೆ ಏನು?

ಬೇಡಿ ಆಚರಣೆಯ ಹಿನ್ನೆಲೆ:

ಆಂಗ್ಲರ ಆಳ್ವಿಕೆಯಲ್ಲಿ ವಿಜಯಪುರ ಬದಲು ಕಲಾದಗಿ ಜಿಲ್ಲೆಯಾಗಿತ್ತು. ಅಂದು ಕಂದಾಯ ಸರಿಯಾಗಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ಬ್ರಿಟಿಷರು ಗ್ರಾಮದ ಗೌಡರು, ಕುಲಕರ್ಣಿಗಳನ್ನ ಕಲಾದಗಿಯ ಜೈಲಿಗೆ ಕರೆದೊಯ್ದಿರುತ್ತಾರೆ. ಆಗ ವಾಲೀಕಾರರಾಗಿದ್ದ ಈಗಿನ ಮುಜಾವರ ಕುಟುಂಬದ ಹಿರಿಯ ಹೊನ್ನಜಾಂಜಪ್ಪ, ಅವರನ್ನ ನೋಡಲು ಜೈಲಿಗೆ ಹೋಗಿರುತ್ತಾರೆ. ಆಗ ಅಲ್ಲೇ ಹತ್ತಿರದಲ್ಲೊಂದು ದಾವಲ್ ಮಲಿಕ್‌ರ ಪಾಳು ಬಿದ್ದ ಗುಡಿಯಿರುತ್ತದೆ. ಅಲ್ಲಿ ರಾತ್ರಿ ಇರ್ತಾರೆ. ದೇವರೇ ನಮಗೆ ಈ ಸರ್ಕಾರದ ಬೇಡಿ ಬೇಡ, ಬೇಕಿದ್ದರೆ ನಿನ್ನ ಬೇಡಿ ತೊಡಿಸು ಅಂತಾ ಅಜ್ಜ ಪ್ರಾರ್ಥನೆ ಮಾಡಿಕೊಳ್ತಾನೆ.

ಬಳಿಕ ಕನಸಿನಲ್ಲಿ ಬಂದ ದಾವಲ್‌ ಮಲ್ಲಿಕ್‌ ದೇವರು, ಜೈಲಿನ ಕಚೇರಿಯಲ್ಲೊಂದು ಕುದುರೆಯಿದೆ. ಅದನ್ನು ಯಾರೂ ಪಳಗಿಸಲಾಗಿಲ್ಲ. ಅದನ್ನ ನೀನು ಪಳಗಿಸಿದರೆ ಬ್ರಿಟಿಷರು ಕುದುರೆಯೊಂದಿಗೆ ನೀನು ಬೇಡಿದ್ದನ್ನ ನೀಡಲಿದ್ದಾರೆ ಎನ್ನುತ್ತಾನೆ. ಆದರೆ, ಕುದುರೆ ಪಳಗಿಸುವ ಶಕ್ತಿ ತನ್ನಲ್ಲಿ ಇಲ್ಲ ಎಂದಾಗ, ದಾವಲ್‌ ಮಲ್ಲಿಕ್‌ ಆ ಶಕ್ತಿ ನಿನಗೆ ಸಿಕ್ಕಿದೆ ಹೋಗೆನ್ನುತ್ತಾನೆ. ಅದರಂತೆ ಹೊನ್ನಜಾಂಜಪ್ಪ ಕುದುರೆ ಪಳಗಿಸಿದಾಗ ಕುಲಕರ್ಣಿ ಹಾಗೂ ಗೌಡರು ಬಿಡುಗಡೆಗೊಳ್ಳುತ್ತಾರೆ. ಅಲ್ಲಿಂದ ಇವರು ಮರಳಿ ಬರುವಾಗ ಎಲ್ಲರೂ ದೇವರ ದರ್ಶನ ಪಡೆದು ಇನ್ಮುಂದೆ ನಿನಗಾಗಿ ಬೇಡಿ ಹಾಕಿಕೊಳ್ಳುತ್ತೇವೆಂದು ಬೇಡಿಕೊಳ್ಳುತ್ತಾರೆ. ಅಂದಿನಿಂದ ಈ ಸಂಪ್ರದಾಯ ಕುಲ್ಕರ್ಣಿ, ಗೌಡರು ಹಾಗೂ ಮುಜಾವರ್ ಕುಟುಂಬದಲ್ಲಿ ಈ ಸಂಪ್ರದಾಯ ಮುಂದುವರಿದಿದೆ ಅಂತಾ ಹೇಳಲಾಗ್ತಿದೆ.

ನಮ್ಮ ಸುತ್ತ ಮುತ್ತ ಇಂಥಾ ಅದೆಷ್ಟೋ ಚಿತ್ರ ವಿಚಿತ್ರ ಆಚರಣೆಗಳಿವೆ. ಇದನ್ನ ನಂಬಿಕೆ ಅನ್ನಬೇಕಾ.. ಮೂಢನಂಬಿಕೆ ಅನ್ನಬೇಕಾ ಗೊತ್ತಿಲ್ಲ. ಯಾಕಂದ್ರೆ, ನಂಬಿಕೆ ಮತ್ತು ಮೂಢನಂಬಿಕೆ ನಡುವೆ ಇರೋ ಸಣ್ಣಎಳೆಯನ್ನ ಸರಿಯಾಗಿ ಗುರುತಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿಯೇ ಈ ರೀತಿಯ ಸಂಪ್ರದಾಯಗಳು ಆಗಾಗ ಕಾಣಿಸಿಕೊಳ್ಳುತ್ತವೆ.




Leave a Reply

Your email address will not be published. Required fields are marked *

error: Content is protected !!