ಎಸಿಬಿ ದಾಳಿ: ಎಷ್ಟು ಅಧಿಕಾರಿಗಳಿಗೆ ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು?

431

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಆಗಾಗ ರಾಜ್ಯದಲ್ಲಿ ಎಸಿಬಿ ದಾಳಿಗಳು ನಡೆಯುತ್ತವೆ. ಆದಾಯಕ್ಕಿಂತ 20 ಪಟ್ಟು, 30 ಪಟ್ಟು ಆಸ್ತಿ ಗಳಿಕೆ ಮಾಡಿರುವ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದವರ ಜಾಗಗಳ ಮೇಲೂ ದಾಳಿ ನಡೆಸಿ ಆಸ್ತಿ ಪತ್ತೆ ಮಾಡಲಾಗುತ್ತೆ. ಬಿಡಿಎ ಬ್ರೋಕರ್ ಗಳು ಗಳಿಸಿರುವ ಆಸ್ತಿ ನೋಡಿದರೆ ತಲೆ ತಿರುಗುತ್ತೆ. ಇನ್ನು  ಪ್ರಥಮ ದರ್ಜೆ ಅಧಿಕಾರಿಗಳು, ದ್ವಿತೀಯ ದರ್ಜೆ ಅಧಿಕಾರಿಗಳು, ಇವರ ಕೆಳಗಿರುವಂತಹ ಅಧಿಕಾರಿಗಳ ಅಕ್ರಮ ಆಸ್ತಿಗೆ ಲೆಕ್ಕವೇ ಇಲ್ಲ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹೀಗೆ ಆಗಾಗ ದಾಳಿ ನಡೆಸಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡುತ್ತೆ. ಹೀಗಿದ್ದರೂ ಅಧಿಕಾರಿಗಳು ಲಂಚ ತಿನ್ನುವುದು ನಿಂತಲ್ಲವಲ್ಲ ಯಾಕೆ ಅನ್ನೋ ಪ್ರಶ್ನೆ ಮಾಡಿಕೊಂಡರೆ, ಇದುವರೆಗೆ ಎಷ್ಟು ಅಧಿಕಾರಿಗಳಿಗೆ ಶಿಕ್ಷೆಯಾಗಿದೆ, ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಅನ್ನೋದು ತಿಳಿಯುತ್ತೆ.

ಕಳೆದ ವರ್ಷ ಎಸಿಬಿ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ 2016ರಿಂದ 21ರ ಅಂತ್ಯದವರೆಗೂ 1,803 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 10 ಮಂದಿಗೆ ಶಿಕ್ಷೆ, 25 ಮಂದಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಇಷ್ಟೊಂದು ಪ್ರಕರಣಗಳಲ್ಲಿ 753 ಕೇಸಿಗೆ ಚಾರ್ಜ್ ಸೀಟ್ ಸಲ್ಲಿಕೆಯಾಗಿದೆ. 682 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 1,473 ಅಧಿಕಾರಿಗಳು ಬಂಧಿತರಾಗಿದ್ದರು.

391 ಪ್ರಥಮ ದರ್ಜೆ ಅಧಿಕಾರಿಗಳು, 1,335 ಕೆಳಹಂತದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ(ಅಮಾನತು ಅವಧಿ ಮುಗಿದ ಬಳಿಕ ಇವರು ಮತ್ತೆ ಕೆಲಸಕ್ಕೆ ಬಂದಿರುತ್ತಾರೆ) 493 ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ಹೀಗೆ ಸಿಗುವ ಅಂಕಿಸಂಖ್ಯೆ ಬರೀ ದಾಖಲೆಯಲ್ಲಿ ಉಳಿದು ಹೋಗಿ ಬಿಡುತ್ತೆ. ಕಡು ಭ್ರಷ್ಟರಿಗೆ ದೊಡ್ಡ ಮಟ್ಟದ ಶಿಕ್ಷೆ ಆಗಲ್ಲ. ಅಕ್ರಮದಿಂದ ಗಳಿಸಿದ ಆಸ್ತಿ ಮುಟ್ಟುಗೋಲು ಆಗಲ್ಲ. ಕಾರಣ ಭ್ರಷ್ಟರದೊಂದು ಸರಪಳಿ ರೀತಿಯ ವ್ಯವಸ್ಥೆಯಿದೆ. ಎಲ್ಲೋ ಒಂದು ಕಡೆ ತುಂಡಾಗಿ ಬಿಡುತ್ತೆ. ಇದಕ್ಕೆ ಎಷ್ಟು ರಾಜಕಾರಣಿಗಳು ಬೆಂಬಲ ಇಲ್ಲ, ಅವರೆಷ್ಟು ಭ್ರಷ್ಟಾಚಾರ ನಡೆಸುತ್ತಿಲ್ಲ ಅನ್ನೋದು ಅವರವರ ಎದೆಮುಟ್ಟಿಕೊಂಡು ಆತ್ಮಸಾಕ್ಷಿಯಾಗಿ ಹೇಳಿದರೆ ಎಲ್ಲರೂ ಬೆತ್ತಲೆಯಾಗುತ್ತಾರೆ.

ಎಸಿಬಿ ದಾಳಿ ಅನ್ನೋದು ಮಾಧ್ಯಮಗಳಿಗೆ ಒಂದಿಷ್ಟು ಸುದ್ದಿ. ನಾವು ಎಚ್ಚರವಾಗಿದ್ದೇವೆ ಎಂದು ಅಧಿಕಾರಿಗಳು ಆಗಾಗ ತೋರಿಸಿ ನಂತರ ಸೈಲೆಂಟ್ ಆಗೋದು. ಯಾಕಂದರೆ ಎಸಿಬಿ ಅನ್ನೋದು ಹಲ್ಲು ಇಲ್ಲದ ಹಾವು. ಬರೀ ಬುಷ್ ಅನ್ನುತ್ತೆ. ಕಚ್ಚಲ್ಲ. ಒಂದು ವೇಳೆ ಕಚ್ಚಿದರೂ ಯಾರೂ ಸಾಯಲ್ಲ. ಹೀಗಾಗಿ ಯಾವೊಬ್ಬ ಅಧಿಕಾರಿಗಳಿಗೆ ಎಸಿಬಿ ಅಂದರೆ ಭಯ ಇಲ್ಲ ಅನ್ನೋದು ಮಾತ್ರ ಸ್ಪಷ್ಟ.




Leave a Reply

Your email address will not be published. Required fields are marked *

error: Content is protected !!