ರಾಷ್ಟ್ರ ಬಾವುಟ ಹಾರಿಸಿ ಜಾತ್ರಾ ಮಹೋತ್ಸವ ಆಚರಿಸೋ ದೇಶದ ಏಕೈಕ ಮಠ

1972

ಪ್ರಜಾಸ್ತ್ರ ವಿಶೇಷ ವರದಿ:

ತಾಂಬಾ/ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಮತಕ್ಷೇತ್ರದ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀ ವೃಷಭಲಿಂಗೇಶ್ವರ ವಿರಕ್ತಮಠ ಈ ಭಾಗದ ಖ್ಯಾತ ಮಠವಾಗಿದೆ. ಸುಮಾರು ಮುನ್ನೂರು ವರ್ಷಗಳ ಪರಂಪರೆ ಹೊಂದಿರುವ ಮಠದ ಜಾತ್ರೆಯಿಂದು ಶುರುವಾಗಿದೆ. ಭಾನುವಾರ, ಶಾಸಕ ಎಂ.ಸಿ ಮನಗೂಳಿ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯ ಗುರುರಾಜ ಹಾಗೂ ಮಠದ ಶ್ರೀಗಳು ಉಪಸ್ಥಿತರಿದ್ರು.

ಧ್ವಜಾರೋಹಣ ಮಾಡಿದ ಶಾಸಕ ಎಂ.ಸಿ ಮನಗೂಳಿ

ಶಿವರಾತ್ರಿ ಹಬ್ಬದ ಸಮಯದಲ್ಲಿ ಅಮವಾಸ್ಯೆಯೆಂದು ಮಠದಲ್ಲಿ ತಿರಂಗವನ್ನ ಹಾರಿಸುವ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತೆ. ಹೀಗೆ ರಾಷ್ಟ್ರಧ್ವಜ ಹಾರಿಸಿ ಜಾತ್ರೆ ನಡೆಸುವ ದೇಶದ ಏಕೈಕ ಮಠ ಈ ಬಂಥನಾಳ ಮಠವಾಗಿದೆ. ಇದಕ್ಕೆ ಐತಿಹಾಸಿಕ ಕಾರಣ ಸಹ ಇದೆ.

ಈ ಮಠದ ನಾಲ್ಕನೇ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ಸಂಗನಬಸವ ಮಹಾಶಿವಯೋಗಿಗಳು, ಧಾರ್ಮಿಕ ಕಾರ್ಯದ ಜೊತೆಗೆ ಶಿಕ್ಷಣ, ಸಾಹಿತ್ಯ, ದೀನ ದಲಿತರಿಗೆ ಲಿಂಗದಿಕ್ಷೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟಗಾರರಿಗೆ ಆಶ್ರಯ ನೀಡುವುದರ ಜೊತೆಗೆ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ರು. ಕರ್ನಾಟಕ, ಮಹಾರಾಷ್ಟ್ರದ ತುಂಬಾ ಸುತ್ತಾಡಿ ಧರ್ಮ ಸೇವೆ ಜೊತೆಗೆ ರಾಷ್ಟ್ರೀಯ ಸೇವೆಯನ್ನ ಶ್ರೀಗಳು ಸಲ್ಲಿಸಿದ್ರು.

ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳು, 1925ರಲ್ಲಿ ಶ್ರಾವಣ ಮಾಸದಲ್ಲಿ ಇವರಿಗೆ ಲಿಂಗದೀಕ್ಷೆ ನೀಡಿದ್ರು. ಅಲ್ದೇ, ಇದೇ ವೇಳೆ ದಲಿತರು ಸೇರಿದಂತೆ ಸುಮಾರು 200 ಜನಕ್ಕೆ ಲಿಂಗದೀಕ್ಷೆ ನೀಡಿದ್ರು. ಈ ವೇಳೆ ಹರ್ಡೇಕರ ಮಂಜಪ್ಪನವರಿಂದ ರಾಷ್ಟ್ರದೀಕ್ಷೆಯನ್ನ ಪಡೆದ್ರು. ಇದು ಶ್ರೀಗಳು ಹಾಗೂ ಹರ್ಡೇಕರ ಮಂಜಪ್ಪನವರ ನಡುವೆಯಾಗಿದ್ದ ಒಪ್ಪಂದವಾಗಿತ್ತು. ಈ ಮೂಲಕ ಮಠದಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ಕೆ ಮುಂದಾದ್ರು. ಈ ಬಗ್ಗೆ ಮಠದ ಪೀಠಾಧಿಪತಿಗಳಾದ ಶ್ರೀ ವೃಷಭಲಿಂಗೇಶ್ವರ ಸ್ವಾಮೀಗಳು ಮಾತ್ನಾಡಿದ್ದಾರೆ..

ಹೀಗೆ ಸುಮಾರು 95 ವರ್ಷಗಳಿಂದ ಬಂಥನಾಳ ಮಠದಲ್ಲಿ ರಾಷ್ಟ್ರಧ್ವಜಾರೋಹಣದ ಮೂಲಕ ಜಾತ್ರೆ ನಡೆಯುತ್ತಿದೆ. ಈ ಮೂಲಕ ಪ್ರತಿಯೊಬ್ಬರಲ್ಲಿ ರಾಷ್ಟ್ರಪ್ರೇಮ ತುಂಬುವ ಕೆಲಸ ಮಾಡಲಾಗ್ತಿದೆ. ಇಂದು ರಾಜ್ಯದ ಬೃಹತ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಬಿ.ಎಲ್ ಡಿ ಶಿಕ್ಷಣ ಸಂಸ್ಥೆಯ ಹಿಂದೆ ಇರೋದು ಪೂಜ್ಯ ಶ್ರೀ ಶಿವಯೋಗಿಗಳು. ಹೀಗೆ ಧಾರ್ಮಿಕ ಕಾರ್ಯದ ಜೊತೆಗೆ ರಾಷ್ಟ್ರೀಯ ಪರಿಕಲ್ಪನೆ ಹೊಂದಿರುವ ಮಠ ವಿಜಯಪುರ ಭಾಗದಲ್ಲಿರುವುದು ಈ ಭಾಗದ ಜನರ ಪುಣ್ಯ ಅಂತಾ ಹೇಳಬಹುದು.




Leave a Reply

Your email address will not be published. Required fields are marked *

error: Content is protected !!