ಎಚ್ಚರದಿಂದಿರಿ ಸುದ್ದಿ ಮನೆಯ ಸಂಗಾತಿಗಳೇ…

586

ಕಲಬುರಗಿ: ಎಲ್ಲಿ ನೋಡಿದ್ರೂ ಬರೀ ಕರೋನಾ ಮಾತು. ಯಾರನ್ನ ಮಾತ್ನಾಡಿಸಿದ್ರೂ ಏನ್ರಿ ಕರೋನಾ ಹಾವಳಿ. ಇಡೀ ಜಗತ್ತನ್ನೇ ತಲ್ಲಣಿಸಿದೆ ಎಂದು ಹೇಳ್ತಿದ್ದಾರೆ. ಪ್ರತಿಯೊಂದ ಮೀಡಿಯಾದಲ್ಲಿ ಕರೋನಾ ನ್ಯೂಸ್ ಬಿಟ್ರೆ ಬೇರೆ ಏನೂ ಕಾಣಿಸ್ತಿಲ್ಲ. ಹೀಗಾಗಿ ಪತ್ರಕರ್ತರಿಗೆ ಬಿಡುವಿಲ್ಲದಷ್ಟು ಕೆಲಸ. ಇದರ ನಡುವೆ ಕಲಬುರಗಿಯಲ್ಲಿ ಕರೋನಾದಿಂದ ಸಾವನ್ನಪ್ಪಿದ 76 ವರ್ಷದ ಮಹ್ಮದ ಹುಸೇನ ಸಿದ್ದಿಕಿ ಬಗ್ಗೆ ಸುದ್ದಿ ಮಾಡಿದ ಮೂವರು ಪತ್ರಕರ್ತರಿಗೂ ಇದೀಗ ಕರೋನಾ ಭೀತ ಮೂಡಿದೆಯಂತೆ.

ಮೃತ ಸಿದ್ದಿಕಿ ಮಗನನ್ನ ಸಂದರ್ಶನ ಮಾಡಿದ ಉರ್ದು ಚಾನಲ್ ವೊಂದರ ವರದಿಗಾರ ಹಾಗೂ ರಾಜ್ಯಮಟ್ಟದ ಕನ್ನಡ ಸುದ್ದಿ ವಾಹಿನಿಯ ವರದಿಗಾರ ಹಾಗೂ ಕ್ಯಾಮೆರಾಮನ್ ಗೆ ಕರೋನಾ ಸೋಂಕು ತಗುಲಿರುವ ಭೀತಿ ಮೂಡಿದ್ದು, ಈ ಮೂವರನ್ನ ತಪಾಸಣೆ ಮಾಡಲಾಗಿದೆಯಂತೆ. ಅವರಿಗೆ 14 ದಿನಗಳ ಕಾಲ ಮನೆಯಲ್ಲಿಯೇ ಉಳಿದುಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇನ್ನು ಇವರ ಜೊತೆ ಸುತ್ತಾಡಿದ ಉಳಿದ ಪತ್ರಕರ್ತರಲ್ಲಿಯೂ ಭಯ ಆವರಿಸಿಕೊಂಡಿದೆ. ಅವರ ಜೊತೆ ನಾವು ಸುತ್ತಾಡಿದ್ದೇವೆ. ಊಟ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರಂತೆ.

ಸುದ್ದಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮನ್ ಸಾವನ್ನಪ್ಪಿದ್ದ ವೃದ್ಧ ಮಲಗಿದ ಜಾಗ, ಉಳಿದುಕೊಳ್ಳುವ ರೂಮ್, ಎಲ್ಲೆಲ್ಲಿ ನಿಂತುಕೊಂಡಿದ್ದ ಅನ್ನೋದನ್ನ ಶೂಟ್ ಮಾಡಿಕೊಂಡಿದ್ದಾರಂತೆ. ಅವನ ಮಗನನ್ನ ಸಂದರ್ಶನ ಮಾಡಿದ್ದಾರಂತೆ. ಇದ್ರಿಂದಾಗಿ ಇವರಿಗೂ ಕರೋನಾ ಸೋಂಕು ತಗುಲಿರಬೇಕು ಎನ್ನಲಾಗ್ತಿದ್ದು, ತಪಾಸಣೆ ಮಾಡಲಾಗಿದೆಯಂತೆ.

ಇಂದು ಕಲಬುರಗಿ ಜಿಲ್ಲಾಧಿಕಾರಿ ಹೇಳಿದ್ದೇನು?

ಕೋವಿಡ್ 19 ವೈರಸ್ ತಗುಲಿ ಮೃತಪಟ್ಟ ಮೋಮಿನಪುರ ನಿವಾಸಿ ಮೊಹ್ಮದ್ ಹುಸೇನ್ ಸಿದ್ದಿಕಿ ಅವರೊಂದಿಗೆ ಒಡನಾಟ ಹೊಂದಿದ್ದ 46 ಜನ ಸೇರಿದಂತೆ ಅಂತ್ಯಕ್ರಿಯೆಯಲ್ಲಿ‌ ಭಾಗವಹಿಸಿದ್ದ 71 ಜನರ ಮೇಲೆ ಜಿಲ್ಲಾಡಳಿತ ‌ನಿಗಾ ವಹಿಸಿದೆ. ಅವರನ್ನು ‌ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ ‌ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದ್ದಾರೆ.

ಜಿಲ್ಲಾಧಿಕಾರಿ ಸುದ್ದಿಗೋಷ್ಠಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಜನ ಕುಟುಂಬ ಸದಸ್ಯರಲ್ಲಿ ‌ಕೊರೊನಾ ಇರುವ ಶಂಕೆ ಇದ್ದು, ಅವರ ಕಫ ಹಾಗೂ ರಕ್ತದ ಮಾದರಿಗಳನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇಂದು ವರದಿ ಬರುವ‌ ನಿರೀಕ್ಷೆ ಇದೆ ಎಂದಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ ಸಿದ್ದಿಕಿ ಅವರ ಕುಟುಂಬದ ನಾಲ್ವರು ‌ಸದಸ್ಯರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ ಎಂದರು.

ವಿಜಯಪುರ ಜಿಲ್ಲಾಧಿಕಾರಿಗೆಗೆ ಮಾಹಿತಿ:

ಸೌದಿ ಅರೇಬಿಯಾದಿಂದ ಬಂದ ಬಳಿಕ ಸಿದ್ದಿಕಿ ಅವರು ವಿಜಯಪುರ ಜಿಲ್ಲೆಯ ‌ತಾಳಿಕೋಟೆಯಲ್ಲಿ ತಂಗಿದ್ದರು ಎಂಬ ಮಾಹಿತಿ ಇದೆ. ಈ ಮಾಹಿತಿಯನ್ನು ‌ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದರು.

ಸಾರಿಗೆ ಸಂಸ್ಥೆ ‌ಬಸ್ ಗಳ ಸಂಖ್ಯೆ ‌ಕಡಿತ:

ಕಲಬುರ್ಗಿಗೆ ಬೇರೆ ಜಿಲ್ಲೆಯ ಜನರು ಬರುವುದನ್ನ ‌ತಪ್ಪಿಸಲು ಸಾರಿಗೆ ಸಂಸ್ಥೆಯ‌ ಬಸ್ ಗಳ ಸಂಚಾರವನ್ನ ‌ಕಡಿಮೆಗೊಳಿಸಲಾಗುತ್ತಿದೆ. ಈ ಸಂಬಂಧ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ‌ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ಅವರಿಗೆ ಸೂಚಿಸಲಾಗಿದೆ ‌ಎಂದು ಶರತ್ ಹೇಳಿದರು.

ಪತ್ರಕರ್ತರಲ್ಲಿ ನಮ್ಮದೊಂದು ಮನವಿ :

ಕರೋನಾ ವೈರಸ್ ಕುರಿತು ಸುದ್ದಿ ಮಾಡಲು ಹೋಗುವ ವರದಿಗಾರರಲ್ಲಿ ನಮ್ಮದೊಂದು ಮನವಿ. ದಯವಿಟ್ಟು ನಮ್ಮ ಪತ್ರಿಕೆ, ನಮ್ಮ ವಾಹಿನಿಯಲ್ಲಿಯೇ ಮೊದ್ಲು ಸುದ್ದಿ ಬರ್ಲಿ ಅನ್ನೋ ಕಾರಣಕ್ಕೆ ಅವಸರ ಮಾಡ್ಬೇಡಿ. ನಿಮ್ಮ ಜೀವದ ಬಗ್ಗೆಯೂ ಕಾಳಜಿ ಇರ್ಲಿ. ನಿಮ್ಗೂ ಸುಂದರವಾದ ಕುಟುಂಬವಿದೆ ಅನ್ನೋದು ಮರೆಯಬೇಡಿ. ಬೆಂಗಳೂರಿನ ಹೆಡ್ ಆಫೀಸ್ ನಲ್ಲಿ ಕುಳಿತುಕೊಂಡ ಮುಖ್ಯಸ್ಥರು, ವರದಿಗಾರರ ಮೇಲೆ ಈ ವಿಷ್ಯದಲ್ಲಿ ಸಂದರ್ಶನ ಮಾಡಲು, ಸ್ಥಳದ ವಿಡಿಯೋ, ಫೋಟೋ ತರುವಂತೆ ಒತ್ತಡ ಹಾಕ್ಬೇಡಿ. ನಿಮ್ಮಂತೆ ಅವರದು ಜೀವ, ಅವರಿಗೂ ಕುಟುಂಬವಿದೆ ಎಂದು ಮರೆಯಬೇಡಿ. ಇದು ನಮ್ಮ ಮನವಿ…

ಮನೆಯಿಂದ ‌ಹೊರಗೆ ಬರಬೇಡಿ:

ಅನಗತ್ಯವಾಗಿ ಯಾರೂ ‌ಮನೆಯಿಂದ ಹೊರಗೆ ಬರಬೇಡಿ. ಅಗತ್ಯ ‌ವಸ್ತುಗಳನ್ನು ಖರೀದಿ ಮಾಡಿದ ತಕ್ಷಣ ವಾಪಸ್ ಮನೆಗೆ ತೆರಳಬೇಕು ಎಂದರು.

ಸೇವಾ ಕಾರ್ಯಗಳು ಸ್ಥಗಿತ:

ಹೆಚ್ಚು ಜನ ಸೇರುವುದನ್ನ ತಪ್ಪಿಸಲು ಸರ್ಕಾರಿ ಸೇವೆಗಳನ್ನ ತಾತ್ಕಾಲಿಕವಾಗಿ ನಿರ್ಬಂಧಗೊಳಿಸಲಾಗುತ್ತಿದೆ. ಉಪನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ‌ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ನೀಡುವ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಹಾಯವಾಣಿ:

ಕೊರೊನಾ ಶಂಕಿತರು ಅಥವಾ ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ತಾವಾಗಿಯೇ ಹೇಳಲಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಬೇರೆಯವರಾದರೂ ಮಾಹಿತಿ ನೀಡಲಿ ಎಂಬ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಭೀತಿ ಬೇಡ:

ಕೊರೊನಾ ವೈರಸ್ ಗಾಳಿಯಿಂದ ಹರಡುವುದಿಲ್ಲ. ಹೀಗಾಗಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯ ಸುತ್ತಮುತ್ತಲಿನ ನಿವಾಸಿಗಳು ‌ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಂದು ‌ಮನವಿ ಮಾಡಿದರು.

71 ಜನಕ್ಕೆ ಜಿಲ್ಲಾಡಳಿತದಿಂದ ಊಟದ ವ್ಯವಸ್ಥೆ:

ಮೃತ ವ್ಯಕ್ತಿಯೊಂದಿಗೆ ಒಡನಾಟ ಹೊಂದಿದ್ದ ಹಾಗೂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 71 ಜನರಿಗೂ ಜಿಲ್ಲಾಡಳಿತದಿಂದಲೇ ಅವರ ಮನೆಗೆ ಊಟ ತಲುಪಿಸಲಾಗುವುದು ಎಂದರು. ಇದು ಸದ್ಯ ಕಲಬುರಗಿಯ ಸ್ಥಿತಿಯಾಗಿದೆ.




Leave a Reply

Your email address will not be published. Required fields are marked *

error: Content is protected !!