ಪ್ರಜಾಪ್ರಭುತ್ವ ದೇಶಕ್ಕೆ ಸಮರ್ಥ ಪ್ರತಿಪಕ್ಷ ಬೇಕು…

794

ವಿಶ್ವದ ಅತೀ ದೊಡ್ಡ ಪ್ರಜಾಭುತ್ವದ ಫಲಿತಾಂಶ ಹೊರ ಬಿದ್ದಿದೆ. 17ನೇ ಲೋಕಸಭೆ ಚುನಾವಣೆಯಲ್ಲಿ ಮೋದಿ, ಶಾ ನೇತೃತ್ವದ ಎನ್ ಡಿಎ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದೆ. ವಿರೋಧಿ ಪಡೆ ಕೋಟೆಯನ್ನ ಛಿದ್ರ ಮಾಡಿದೆ. ಆದರೆ, ಪ್ರಜಾಪ್ರಭುತ್ವ ಉಳಿಯಲು ಬಲಿಷ್ಠ ವಿರೋಧ ಪಕ್ಷ ಬೇಕಿದೆ.

ಎಲ್ಲ ಸಮೀಕ್ಷೆಗಳನ್ನ ಉಡೀಸ್ ಮಾಡಿ ಬಿಜೆಪಿ ಮುಂದಾಳತ್ವದ ಎನ್ ಡಿಎ ಪಡೆ 320ಕ್ಕೂ ಹೆಚ್ಚು ಸ್ಥಾನಗಳನ್ನ ಪಡೆದಿದೆ. ಹೀಗಾಗಿ ವಿರೋಧಿ ಪಡೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಬರೋಬ್ಬರಿ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ‘ಕೈ’ ಪಕ್ಷ ಶೂನ್ಯ ಸಾಧನೆ ಮಾಡಿದೆ. ಪಂಜಾಬ್-ಕೇರಳದಲ್ಲಿ ಮಾತ್ರ ಅಸ್ಥಿತ್ವ ಉಳಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿನ 42 ಸ್ಥಾನಗಳಲ್ಲಿ ಟಿಎಂಸಿ ಕಳೆದ ಬಾರಿ 36ರಲ್ಲಿ ಗೆದಿತ್ತು. ಈ ಬಾರಿ ಅರ್ಧಕ್ಕೆ ಬಂದಿದೆ. ಕಳೆದ ಬಾರಿ ಕೇವಲ 2 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 18 ಸ್ಥಾನಗಳತ್ತ ಬಂದಿದೆ.

ದೆಹಲಿ, ರಾಜಸ್ತಾನ್, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿ ದೇಶದ ಎಲ್ಲೆಡೆ ಕೇಸರಿ ರಂಗು ತುಂಬಿದೆ. ಸೋತ ನಾಯಕರು ಮುಂದೇನು ಅನ್ನೋ ಚಿಂತೆಯಲ್ಲಿದ್ದಾರೆ. ಇದರ ನಡುವೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿರೋದು, ಒನ್ ಸೈಡ್ ಫಲಿತಾಂಶದಿಂದ ದೇಶಕ್ಕೇನು ಆಪತ್ತು ಅನ್ನೋದು.

ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಂವಿಧಾನ ಒಪ್ಪಿಕೊಂಡಿರುವ ಭಾರತಕ್ಕೆ ಉತ್ತಮ ಸರ್ಕಾರದಷ್ಟೇ ಬಲಿಷ್ಠ ಪ್ರತಿಪಕ್ಷದ ಅವಶ್ಯಕತೆ ಖಂಡಿತ ಇದೆ. ಇಲ್ದೇ ಹೋದ್ರೆ, ಸರ್ವಾಧಿಕಾರಿ ಆಡಳಿತ ಶುರುವಾಗೋದು ನಿಶ್ಚಿತ. 1975ರಲ್ಲಿ ಇಂದಿರಾ ಗಾಂಧಿಯಿಂದ ತುರ್ತು ಪರಿಸ್ಥಿತಿ ಎದುರಿಸಲಾಗಿದೆ.

ಹತ್ತು ಹಲವು ಧರ್ಮ, ಸಾವಿರಾರು ಜಾತಿ, ಪಂಗಡಗಳನ್ನ, ನೂರಾರು ಆಚರಣೆಗಳನ್ನ, ಸಂಪ್ರದಾಯಗಳನ್ನ ಹೊಂದಿದ್ರೂ, ಏಕತೆ ಸಾರುವ ದೇಶವಿದು. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಈ ನೆಲದಲ್ಲಿ ಒಂದು ಧರ್ಮ, ಒಂದು ಆಚರಣೆ, ಒಂದು ಪದ್ಧತಿ, ಇದನ್ನೇ ತಿನ್ನಬೇಕು, ಇದನ್ನೇ ಉಡಬೇಕು ಅನ್ನೋ ಸಂಪ್ರದಾಯ ಸಲ್ಲದು. ಬಿಜೆಪಿ, ಆರ್ ಎಸ್ಎಸ್ಎಸ್ ತತ್ವ ಸಿದ್ಧಾಂತಗಳನ್ನ ಜಾರಿಗೆ ತರಲು ಹೊರಟಿರುವ ಪಕ್ಷ. ಹೀಗಿರುವಾಗ ಲೋಕಸಭೆಯಲ್ಲಿ ಚಕ್ರಾಧಿಪತ್ಯ ಸಾಧಿಸಿದ್ದು, ತನ್ನ ಐಡಾಲಜಿಗಳನ್ನ ದೇಶದ ಜನರ ಮೇಲೆ ಹೇರುವ ಅಪಾಯವಿದೆ. ಹಾಗಾದ್ರೆ, ಸರ್ವಾಧಿಕಾರಿ ಆಡಳಿತದ ಮುನ್ಸೂಚನೆ ಎನ್ನಬಹುದು.

ಜರ್ಮನಿಯ ನಾಜಿ ಪಾರ್ಟಿ ಲೀಡರ್ ಹಿಟ್ಲರ್. 2ನೇ ಮಹಾಯುದ್ಧಕ್ಕೆ ಕಾರಣನಾದ ಈತ, ಜರ್ಮನರೇ ಶ್ರೇಷ್ಠರೆಂದು ಯಹೂದಿಗಳ ಸಮೂಹಿಕ ಹತ್ಯೆ ಮಾಡಿಸಿದ. ರಷ್ಯದ ಸ್ಟಾಲಿನ್ ಕಟು ಸರ್ವಾಧಿಕಾರಿ. ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕುವಲ್ಲಿ ಈತ ಎತ್ತಿದ ಕೈ. ಚೀನಾದ ಮಾವೋ ಜೆಡಾಂಗ್, ಕಮ್ಯೂನಿಷ್ಟ್ ನಾಯಕ. ತನ್ನ ನೀತಿಗಳನ್ನ ಜಾರಿಗೆ ತರಲು ದಮನಕಾರಿ ಕಾರ್ಯಕ್ಕೆ ಮುಂದಾಗ್ತಿದ್ದ.

ಉತ್ತರ ಕೊರಿಯಾದ ಹಾಲಿ ಅಧ್ಯಕ್ಷ ಕಿಮ್ ಜಾಂಗ್ ಉನ್, ಹಿಟ್ಲರ್ ಗಿಂತ ಕ್ರೂರಿಯಾಗಿದ್ದಾನೆ. ಇರಾಕ್ ನ ಸದ್ದಾಮ್ ಹುಸೇನ್, ಅರಬ್ ಸೋಷಿಯಲಿಸ್ಟ್ ಪಾರ್ಟಿಯ ಅಧ್ಯಕ್ಷನಾಗಿದ್ದ. ತನ್ನ ನೀತಿ, ನಿರ್ಣಯಗಳಿಂದ ಇರಾಕ್ ಅನ್ನು 1979 ರಿಂದ 2003ರ ತನಕ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ. ಉಗಾಂಡ ಅನ್ನೋ ಪುಟ್ಟ ರಾಷ್ಟ್ರದ ಸರ್ವಾಧಿಕಾರಿ ಇದಿ ಅಮಿನ್ ಆಡಳಿತದಲ್ಲಿ 3ಲಕ್ಷಕ್ಕೂ ಹೆಚ್ಚು ಹತ್ಯೆಗಳಾಗಿವೆ. ಕಳೆದ ವರ್ಷ ಈತನಿಂದ ಉಗಾಂಡ ಮುಕ್ತವಾಗಿದೆ.

ಲಿಬಿಯಾದಲ್ಲಿ ತನ್ನದೆ ರೂಲ್ಸ್ ಮಾಡಿದ್ದ ಮೊಹಮ್ಮದ್ ಗಡಾಫಿ ರಕ್ತ ಸಬ್ಬಂದಿಗಳನ್ನೇ ಹತ್ಯೆ ಮಾಡಿಸಿದ್ದ. ಇವನ ಆಡಳಿತದಲ್ಲಿ ಪ್ರತಿಭಟನೆಗೆ ಅವಕಾಶವೇ ಇರ್ಲಿಲ್ಲ. ಕಾಂಬೋಡಿಯಾದ ಫೋಲ್ ಪಾಟ್ ಕ್ರೂರ ಆಡಳಿತದಿಂದ 10 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಚಿಲಿಯನ್ನ ಎರಡು ದಶಕ ಆಳಿದ ಆಗಸ್ಟೋ, ತನ್ನ ಅಧಿಕಾರದ 3 ವರ್ಷದಲ್ಲಿ 1 ಲಕ್ಷ ವಿರೋಧಿಗಳನ್ನ ಜೈಲಿಗೆ ಹಾಕಿದ್ದ.

ಶಕ್ತಿಶಾಲಿ ವಿರೋಧ ಪಕ್ಷ ಇಲ್ಲದೇ ಹೋದ್ರೆ, ನಾಯಕರೆಲ್ಲ ರಾಕ್ಷಸರಾಗುವ ಸಾಧ್ಯತೆಯಿದೆ. ಇಂದಿರಾ ಗಾಂಧಿ ಆಡಳಿತದಲ್ಲಿನ ತುರ್ತು ಪರಿಸ್ಥಿತಿ, ರಾಜೀವ್ ಗಾಂಧಿ ಆಡಳಿತದಲ್ಲಿ ನಡೆದ ಸಿಖ್ ನರಮೇಧ, ಮೋದಿ ಗುಜರಾತ್ ಸಿಎಂ ಆದಾಗ ನಡೆದ ಗೋದ್ರಾ ಹತ್ಯಾಕಾಂಡ, ತಮಿಳುನಾಡಿನಲ್ಲಿ ಎಐಡಿಎಂಕೆ ನಾಯಕಿ ಜಯಲಲಿತಾ, ಡಿಎಂಕೆ ನಾಯಕ ಕರುಣಾನಿಧಿಯನ್ನ ಜೈಲಿಗೆ ಕಳುಹಿಸಿದ್ದು ಈ ದೇಶದ ರಾಜಕೀಯ ಪುಟದಲ್ಲಿ ಕಪ್ಪು ಚುಕ್ಕೆಯಾಗಿವೆ.

ಇದೀಗ 2ನೇ ಬಾರಿಗೆ ಪಿಎಂ ಆಗ್ತಿರುವ ಮೋದಿಯಲ್ಲಿರುವ ಕೆಲ ಗುಣಗಳು ಈ ದೇಶಕ್ಕೆ ಅಪಾಯಕಾರಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನೋ ಮೋದಿ, ಸಂವಿಧಾನ ವಿರೋಧಿ ಹೇಳಿಕೆ ಕೊಡುವ ತಮ್ಮ ನಾಯಕರ ಬಗ್ಗೆ ಸೈಲೆಂಟ್ ಆಗಿರೋದು. ಬಹುಸಂಸ್ಕೃತಿ ಭಾರತದಲ್ಲಿ ಏಕ ಸಂಸ್ಕೃತಿಗೆ ಮುಂದಾಗುವುದು. ವಿಪಕ್ಷದವರನ್ನ ದೇಶದ್ರೋಹಿಗಳಂತೆ ಬಿಂಬಿಸುವುದು. ಇದನ್ನ ವಿರೋಧಿಸಿ ದೇಶವನ್ನ ರಕ್ಷಿಸಲು ಸಂಸತ್ ನಲ್ಲಿ ಬಲಿಷ್ಠ ಪ್ರತಿಪಕ್ಷದ ಅನಿವಾರ್ಯತೆ ಇದೆ. ಹೀಗಾಗಿ ಯುಪಿಎ, ಎಡರಂಗ ಪಕ್ಷಗಳು ತಮ್ಮ ಕರ್ತವ್ಯವನ್ನ ಸರಿಯಾಗಿ ನಿಭಾಯಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!