ಮಹ‘ದಾಹ’ ಹೋರಾಟಕ್ಕೆ 4 ವರ್ಷ..‘ಗ್ರಹಣ’ ಹಿಡಿದ ಪಕ್ಷಗಳ ಹಿಂದೆ ಮಾಧ್ಯಮ!

968

ಕಳೆದ 4 ವರ್ಷಗಳಿಂದ ನವಲಗುಂದ ತಾಲೂಕಿನ ರೈತರು ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಜುಲೈ 16ಕ್ಕೆ ನಾಲ್ಕು ವರ್ಷದ ಮುಗಿದು 5ನೇ ವರ್ಷಕ್ಕೆ ಕಾಲಿಡ್ತಿದೆ. ಇದು ಖುಷಿ ಪಡುವ ವಿಚಾರವಲ್ಲ. ವೋಟ್ ಪಡೆದು ಪದವಿ ಗಳಿಸಿದ ಮಂದಿ ರೆಸಾರ್ಟ್ ನಲ್ಲಿ ಹಾಯಾಗಿ ಇರುವಾಗ, ಅವರು ಕುಂತ್ರೆ ನಿಂತ್ರೆ ಸುದ್ದಿ ಮಾಡುವಲ್ಲಿ, ಗಂಭೀರ ಚರ್ಚೆ ನಡೆಸುವಲ್ಲಿ ಬ್ಯುಸಿಯಾಗಿರುವ ಮಾಧ್ಯಮಗಳ ಕಣ್ಣಿಗೆ ಇವರ ಗೋಳು ಹೇಗೆ ಕಂಡಿತು. ಇಂದು ಬಂದ್ ಗೆ ಕರೆ ನೀಡಿದ್ರೂ ಯಾರು ಕ್ಯಾರೆ ಅನ್ನಲಿಲ್ಲ. ಈ ನಿರಂತರ ಹೋರಾಟಕ್ಕೆ 4 ವರ್ಷಗಳು ಕಳೆದ್ರೂ ಯಾರೂ ಚಕಾರ ಎತ್ತಲಿಲ್ಲ. ಅದೇ ರಾಜಕೀಯ ಬೃಹನ್ನಾಟಕ ಮತ್ತು ಗ್ರಹಣದ ಸುತ್ತ ಗಿರಿಕಿ ಹೊಡೆಯುತ್ತಾ ಕಾಲ ಕಳೆಯಲಾಯ್ತು.

ಮೂರು ದಶಕದ ಹೋರಾಟ

ಸುಮಾರು 1976ರಲ್ಲಿ ಗುಳೇದಗುಡ್ಡದ ಶಾಸಕರಾಗಿದ್ದ ದಿವಂಗತ ಬಿ.ಎಂ ಹೊರಕೇರಿ ಅವರು ಮೊದಲ ಬಾರಿಗೆ ಮಹಾದಾಯಿ ನದಿ ನೀರನ್ನ ಮಲಪ್ರಭೆಗೆ ಹರಿಸುವ ಕುರಿತಾಗಿ ಧ್ವನಿ ಎತ್ತಿದರು. ಅಂದಿನಿಂದ ಆರಂಭದ ಕೂಗು ಇಂದಿಗೂ ನಿಂತಿಲ್ಲ.

ನದಿಯ ಹರಿಯುವ ಹಾದಿ

ಮಲಪ್ರಭಾ ನದಿಯಂತೆ ಮಹದಾಯಿ ಸಹ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೇವಗಾವುಡು ಗ್ರಾಮದ ಬಳಿ ಹುಟ್ಟುತ್ತದೆ. ಮಹದಾಯಿ ರಾಜ್ಯದಲ್ಲಿ 35 ಕಿಲೋ ಮೀಟರ್ ಹರಿದು ‘ಸುರಗ’ ಪ್ರದೇಶದಲ್ಲಿ ಗೋವಾ ಪ್ರವೇಶಿಸುತ್ತದೆ. ಗೋವಾದಲ್ಲಿ ‘ಮಾಂಡೋವಿ’ ಹೆಸರಿನಲ್ಲಿ ಸುಮಾರು 45 ಕಿಲೋ ಮೀಟರ್ ಹರಿಯುತ್ತದೆ. ಮಹದಾಯಿ ನದಿ ಹಳತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ.

ಮಹದಾಯಿ ಯೋಜನೆ

ನವಿಲು ತೀರ್ಥ ಜಲಾಶಯ ನಿರ್ಮಾಣ ಮಾಡುವ ಮೊದಲೇ ಈ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು ಅನ್ನೋ ಮುಂದಾಲೋಚನೆ ಸರ್ಕಾರಕ್ಕಿತ್ತು. ಹೀಗಾಗಿ ಈ ಪ್ರದೇಶಗಳ ನದಿಗಳನ್ನ ಮೊದಲು ಜೋಡಿಸಿ, ನಂತರ ಅವುಗಳನ್ನ ಮಲಪ್ರಭೆಗೆ ಜೋಡಿಸಿ, ಕಟ್ಟಲು ಉದ್ದೇಶಿಸಿರುವ ಡ್ಯಾಂಗೆ ಮತ್ತಷ್ಟು ನೀರು ಸಂಗ್ರಹಿಸಲು ಯೋಜನೆ ರೂಪುಗೊಂಡಿತ್ತು. ಮಹದಾಯಿ ಕಣಿವೆಗೆ ಎಲ್ಲ ಉಪ ನದಿಗಳು ಸೇರುವ ಕಾರಣ ಈ ಯೋಜನೆಗೆ ‘ಮಹಾದಾಯಿ ಕಣಿವೆ ತಿರುವು ಯೋಜನೆ’ ಎಂದು ನಾಮಕರಣ ಮಾಡಲಾಯಿತು.

ಯಾವ ರಾಜ್ಯದಲ್ಲಿ ಎಷ್ಟು

ಮಹದಾಯಿ ನದಿ 2032 ಚದರ ಕಿಲೋ ಮೀಟರ್ ಜಲನಯನ ಪ್ರದೇಶ ಹೊಂದಿದೆ. ಕರ್ನಾಟಕದಲ್ಲಿ 375 ಚದರ ಕಿಲೋ ಮೀಟರ್, ಮಹಾರಾಷ್ಟ್ರದಲ್ಲಿ 77 ಚದ ಕಿಲೋ ಮೀಟರ್, ಗೋವಾದಲ್ಲಿ 1,580 ಚದರ ಕೀಲೋ ಮೀಟರ್ ಪ್ರದೇಶವನ್ನ ಹೊಂದಿದೆ.

ಗೋವಾ ಗಲಾಟೆ

ಈ ಯೋಜನೆಯಿಂದ ಪರಿಸರ ಹಾಳಾಗುತ್ತದೆ ಅನ್ನೋ ವಾದವನ್ನ ಗೋವಾ ಮಂಡಿಸುತ್ತಿದೆ. ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಹಾನಿಯಾಗುವುದಿಲ್ಲ. ಮುಂಗಾರು ನಂತ್ರ ನದಿಯ ನೀರಿನ ಹರಿವಿನಲ್ಲೂ ಯಾವುದೇ ವ್ಯತ್ಯಾಸವಿಲ್ಲ ಅಂತಾ ತಿಳಿಸಿತು. ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರ ಸೇರುತ್ತದೆ ಅಂತಾ ತಿಳಿಸಿತ್ತು. ಅಧ್ಯಯನಗಳು ವರದಿ ನೀಡಿದರೂ ಗೋವಾ ಈಗಲೂ ತನ್ನ ವಿತಂಡವಾದ ಮುಂದುವರೆಸಿದೆ.

‘ಮಹಾ’ ಕಿರಿಕ್

ಮಹಾರಾಷ್ಟ್ರದಲ್ಲಿ 77 ಚದರ ಕಿಲೋ ಮೀಟರ್ ದೂರದವರೆಗೆ ಮಹದಾಯಿ ನದಿ ಹರಿಯುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ತಡೆಗೋಡೆಗಳನ್ನ ನಿರ್ಮಿಸಬಾರದೆಂಬ ಕೇಂದ್ರ ಜಲ ಮಂಡಳಿ ಆದೇಶವಿದ್ರೂ ತನ್ನ ವ್ಯಾಪ್ತಿಯಲ್ಲಿ ಒಟ್ಟು 9 ಬ್ಯಾರೇಜ್ ನಿರ್ಮಿಸಿದೆ. ಅದಕ್ಕೆ ತಿಲಹರಿ ಜಲಾಶಯ ಎಂದು ಹೆಸರಿಟ್ಟಿದೆ. ಈ ಪೈಕಿ 7 ಬ್ಯಾರೇಜ್ ನೀರು ಕರ್ನಾಟಕದ ಅರಣ್ಯ ಪ್ರದೇಶವನ್ನ ಹಾಳು ಮಾಡಿತು. ಒಂದು ವೇಳೆ ಮಹದಾಯಿ ನದಿ ತಿರುವುಗೊಂಡರೆ ನಮ್ಮ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತದೆ ಅನ್ನೋ ಕಿರಿಕ್ ಮಾಡ್ತಿದೆ.

ಅರ್ಧಕ್ಕೆ ನಿಂತ ಯೋಜನೆ

ಸಮುದ್ರಕ್ಕೆ ಹರಿದು ಹೋಗುವ ನೀರನ್ನ ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾದ ಹಿನ್ನೆಲೆಯಲ್ಲಿ 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವೇಳೆ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಫಲಪ್ರದವಾಗಿ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. 2000ರಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆಯೂ ಅನುಮತಿ ನೀಡಿತು. ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂಪಾಯಿ, ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂಪಾಯಿ ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು. 2002ರ ಏಪ್ರಿಲ್ 30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನ ಹರಿಸಲು ವಾಜಪೇಯಿ ನೃತೃತ್ವದ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿದ ಪರಿಣಾಮ ಈ ಯೋಜನೆ ಇಂದಿಗೂ ಅರ್ಧದಲ್ಲೇ ನಿಂತಿದೆ.

ನ್ಯಾಯಾಧಿಕರಣ ರಚನೆ

ಈ ವಿಚಾರ ಇತ್ಯರ್ಥವಾಗಬೇಕಾದ್ರೆ ನ್ಯಾಯಾಧಿಕರಣ ರಚಿಸಿ ಎಂದು 2002ರಲ್ಲಿ ಕೇಂದ್ರ ಸರ್ಕಾರವನ್ನ ಗೋವಾ ಕೇಳಿಕೊಂಡಿತು. 2006ರಲ್ಲಿ ಕರ್ನಾಟಕ ಆರಂಭಿಸಿರುವ ಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿ ಮತ್ತು ನ್ಯಾಯಾಧಿಕರಣವನ್ನ ರಚಿಸುವುಂತೆ ಸುಪ್ರೀಂ ಕೋರ್ಟ್‍ ನಲ್ಲಿ ಮನವಿ ಮಾಡಿತು. 2006ರಲ್ಲಿ ಕೇಂದ್ರದ ಪರಿಸರ ಮಂತ್ರಾಲಯ, ಈ ಯೋಜನೆಯನ್ನ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಯ ಮೆರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕಕ್ಕೆ ತಿಳಿಸಿತು. 2010 ಜೂನ್‍ ನಲ್ಲಿ ಕರ್ನಾಟಕ, 2010ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ನ್ಯಾಯಾಧಿಕರಣ ರಚಿಸುವಂತೆ ಮನವಿ ಮಾಡಿದ್ವು. ಕೇಂದ್ರ ಸರ್ಕಾರ ನವೆಂಬರ್ 16, 2010ರಂದು ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ ರಚಿಸಿತು. ಈಗ ಈ ಯೋಜನೆ ವಿವಾದ ನ್ಯಾಯಾಧಿಕರಣದ ಅಂಗಳದಲ್ಲಿದೆ. 3 ರಾಜ್ಯಗಳು ನ್ಯಾಯಾಧಿಕರಣ ನೀಡುವ ತೀರ್ಪಿಗೆ ಬದ್ಧರಾಗಿರುತ್ತೇವೆ ಅನ್ನೋ ಪ್ರಮಾಣಪತ್ರ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿವೆ.




Leave a Reply

Your email address will not be published. Required fields are marked *

error: Content is protected !!