ರಾಜ್ಯ ಬಿಜೆಪಿ ನಾಯಕರ ಕಾಳಗ.. ಹೈಕಮಾಂಡ್ ಗೆ ಒಳಯೇಟು ಕೊಡುತ್ತಾ?

70

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭೆ ಚುನಾಣೆಯ ಮೊದಲ ಹಂತದ ಮತದಾನದ ದಿನ ಸಮೀಪಿಸುತ್ತಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಮುನಿಸು, ಬಂಡಾಯ ಶಮನವಾಗಿಲ್ಲ. ಇದನ್ನು ತಣ್ಣಗೆ ಮಾಡುವಲ್ಲಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ವಿಫಲರಾಗಿದ್ದಾರೆ ಎನ್ನಲಾಗುತ್ತಿದೆ.

ಕೆ.ಎಸ್ ಈಶ್ವರಪ್ಪ, ಅಪ್ಪ, ಮಕ್ಕಳ ಕೈಯಲ್ಲಿ ಬಿಜೆಪಿ ಸಿಲುಕಿಕೊಂಡಿದೆ ಎಂದು ನೇರವಾಗಿ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ವಿರುದ್ಧ ಕಟು ಮಾತುಗಳನ್ನಾಡುತ್ತಿದ್ದಾರೆ. ಇವರಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸೇರಿ ಇತರರು ಸಾಥ್ ನೀಡಿದ್ದಾರೆ. ಈಶ್ವರಪ್ಪ ಬಂಡಾಯ ಶಿವಮೊಗ್ಗದಲ್ಲಿ ಬಿಜೆಪಿ ಗೆಲುವಿಗೆ ಪೆಟ್ಟು ಕೊಡುತ್ತಾ ಕಾದು ನೋಡಬೇಕಿದೆ.

ದಾವಣಗೆರೆಯಲ್ಲಿ ಎಂ.ಪಿ ರೇಣುಕಾಚಾರ್ಯ ಅವರ ಬಣದಲ್ಲಿರುವ ಮಾಜಿ ಶಾಸಕರು ಜಿ.ಎಂ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ಕೊಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಅದು ಈಗಲೂ ಮುಂದುವರೆದಿದೆ. ತುಮಕೂರಿನಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಮುನಿಸಿಕೊಂಡಿದ್ದು, ಅವರು ಸಹ ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿ, ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧದ ಕೂಗು ತಣ್ಣಗಾದಂತೆ ಕಂಡರೂ ಒಳಗೊಳಗೆ ಕುದಿಯುತ್ತಿದೆ.

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಟಸ್ಥರಾಗಿ ಉಳಿದಿದ್ದಾರೆ. ಇವರು ಮಾತ್ರವಲ್ಲ ಜಿಲ್ಲೆಯಲ್ಲಿರುವ ಬಿಜೆಪಿ ನಾಯಕರು ಸಹ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಮತಯಾಚನೆ ನಡೆಸುತ್ತಿಲ್ಲ. ಹೀಗಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಹುತೇಕ ಕಡೆ ಬಿಜೆಪಿಗೆ ಒಳಯೇಟು ಕೊಡಲು ಸ್ವಪಕ್ಷೀಯರೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆ ಸೋಲಿನ ಹೊಡೆತದಿಂದ ಚೇತರಿಸಿಕೊಳ್ಳದ ಬಿಜೆಪಿ ಹೈಕಮಾಂಡ್ ನಾಯಕರಿಗೆ ಲೋಕಸಭೆಯಲ್ಲಿಯೂ ಸೋಲಿನ ರುಚಿ ತೋರಿಸುವ ಮೂಲಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಪ್ರತಿರೋಧ ತೀರಿಸಿಕೊಳ್ಳಲು ಮತದಾರ ಸಹ ಕಾಯುತ್ತಿದ್ದಾನೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಜೂನ್ 5ರಂದು ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!