ಹಂದಿಗನೂರ ಸಿದ್ದರಾಮಪ್ಪ ರಂಗ ಮಂದಿರ ಶೀಘ್ರ ನಿರ್ಮಾಣ: ಶಾಸಕ ಭೂಸನೂರ

243

ಪ್ರಜಾಸ್ತ್ರ ಸುದ್ದಿ

ಸಿಂದಗಿ: ನಟ ಭಯಂಕರ ಎಂದೇ ಖ್ಯಾತಿ ಪಡೆದಿದ್ದ ಹಂದಿಗನೂರ ಸಿದ್ದರಾಮಪ್ಪನವರ ರಂಗ ಮಂದಿರ ಸಿಂದಗಿ ಜನರ ಕನಸು. ಅದರ ನಿರ್ಮಾಣಕ್ಕಾಗಿ ಈಗಾಗ್ಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಅದರ ಕಾಮಗಾರಿಗಳು ನಡೆಯಲಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮಾಧ್ಯಮರಂಗ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದ ಅವರು, ಸಿಂದಗಿ ಕಲೆ, ಸಾಂಸ್ಕೃತಿ, ಸಾಹಿತ್ಯದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿರುವ ಈ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ನಮ್ಮ ತಾಲೂಕಿನ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ್ ಅವರು, ಹಂದಿಗನೂರ ಸಿದ್ದರಾಮಪ್ಪ, ಎಂ.ಎಂ ಕಲಬುರ್ಗಿ, ರಮಾನಂದತೀರ್ಥರು, ರೇವಡಿಗಾರರು ಸೇರಿ ಅನೇಕ ಪ್ರತಿಭೆಗಳನ್ನು ನಾಡಿಗೆ ನೀಡಿದ ಕೀರ್ತಿ ಸಿಂದಗಿಗೆ ಸಲ್ಲುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ನಾಗೇಶ ತಳವಾರ ಅವರ ನೇತೃತ್ವದ ಮಾಧ್ಯಮರಂಗ ಫೌಂಡೇಶನ್ ಆಲದ ಮರದಂತೆ ಬೆಳೆಯಲಿ ಎಂದು ಹೇಳಿದರು.

ಆರೂರು ಗೆಳೆಯರ ಬಳಗದ ಅಧ್ಯಕ್ಷ ಮಡಿವಾಳಪ್ಪ ದಾಳಿ ಅವರಿಗೆ ವಿಶೇಷ ಸನ್ಮಾನ

ಇನ್ನೋರ್ವ ಮುಖ್ಯ ಅತಿಥಿ ವಿಜಯವಾಣಿ ಜಿಲ್ಲಾ ವರದಿಗಾರ ಪರಶುರಾಮ ಭಾಸಗಿ ಅವರು ಮಾತನಾಡಿ, ಪತ್ರಿಕೋದ್ಯಮದಲ್ಲಿ ನಿಂತ ನೀರಾಗದೆ. ಸಾಹಿತ್ಯ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಮಾಧ್ಯಮರಂಗ ತಂಡದ ಸದಸ್ಯರ ಕಾರ್ಯ ಮೆಚ್ಚುವಂತದ್ದು. ನಾನು ಎಂ.ಎ ಪತ್ರಿಕೋದ್ಯಮವನ್ನು ಧಾರವಾಡದಲ್ಲಿ ಅಧ್ಯಯನ ಮಾಡುವಾಗ, ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ ಅವರು ಸೇರಿದಂತೆ ದಿಗ್ಗಜರನ್ನು ನೋಡಿ ರೋಮಾಂಚನ ಗೊಂಡಿದ್ದೆ. ಅವರ ಕಾರ್ಯಕ್ರಮಗಳನ್ನು ಕಂಡು ನಮಗೂ ಇಂತಹ ವೇದಿಕೆ ಸಿಗಲಿಲ್ಲ ಎಂದುಕೊಳ್ಳುತ್ತಿದೆ. ಆದರೆ, ಮಾಧ್ಯಮರಂಗ ತಂಡ ಆ ವೇದಿಕೆ ಸೃಷ್ಟಿಸಿಕೊಂಡು ಹೊರಟಿದೆ ಅವರಿಗೆ ಎಲ್ಲರೂ ಬೆಂಬಲಿಸೋಣ ಎಂದು ಶುಭ ಕೋರಿದರು.

ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಅವರು ಮಾತನಾಡಿ, ತಮ್ಮ ಬೆಂಗಳೂರು, ಧಾರವಾಡದ ದಿನಗಳನ್ನು ಹಾಗೂ ತಮ್ಮ ಇವತ್ತಿನ ಬೆಳವಣಿಗೆಗೆ ಕಾರಣರಾದ ಪ್ರತಿಯೊಬ್ಬರನ್ನು ನೆನಪಿಸಿಕೊಂಡರು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು, ಕಲೆ ಸಾಹಿತ್ಯ ಈಶ್ವರನ ಶಕ್ತಿ. ಶರಣರ ವಚನಗಳು ಹೇಳುವಂತೆ ಸಮಾಜಮುಖಿ ಕೆಲಸಗಳನ್ನು ಮಾಧ್ಯಮರಂಗ ಮಾಡುತ್ತಾ ಎಲ್ಲೆಡೆ ಹೆಸರು ಮಾಡಲಿ ಎಂದು ಆಶೀರ್ವಾದಿಸಿದರು.

ಇದೇ ಸಂದರ್ಭದಲ್ಲಿ ಸಮಾಜಸೇವೆ, ಶರಣ ಸಾಹಿತ್ಯದ ಪರಿಚಾರಿಕೆ ಕೆಲಸ ಮಾಡಿಕೊಂಡು ಬರುತ್ತಿರುವ ಕೊಂಡಗೂಳಿ ಆರೂರು ಗೆಳೆಯರ ಬಳಗದ ಅಧ್ಯಕ್ಷ ಮಡಿವಾಳಪ್ಪ ಕರದಾಳಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಇದೆ ವೇಳೆ ಅನೀಲಕುಮಾರ ಬಡಿಗೇರ, ವೀಣಾ ನಾಯಕ ಅವರ ಗಾಯನ, ಎಬಿಸಿಡಿ ಡ್ಯಾನ್ಸ್ ಅಕಾಡಿಮಿ ಅವರ ನೃತ್ಯ, ಜ್ಞಾನಭಾರತಿ ಶಾಲೆಯ ವಿದ್ಯಾರ್ಥಿಗಳ ರೂಪಕ ನೋಡುಗರ ಗಮನ ಸೆಳೆಯಿತು.

ಈ ವೇಳೆ ಫೌಂಡೇಶನ್ ಉಪಾಧ್ಯಕ್ಷ ಪಕ್ಕೀರಪ್ಪ ಏಳುಗುಡ್ಡ, ಖಜಾಂಚಿ ಲಕ್ಷ್ಮಣ ಬೆಳಗಾವಿ, ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯ ರಮೇಶ ಯಳಮೇಲಿ, ಭರತೇಶ ಹಿರೋಳ್ಳಿ, ಶಿವಾನಂದ ಕಲಬುರ್ಗಿ ಸೇರಿ ಅನೇಕರು ಉಪಸ್ಥಿತರಿದ್ದರು. ಸಂಜೀವಕುಮಾರ ಡಾಂಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವರಾಜ ಭೂತಿ ಸ್ವಾಗತಿಸಿದರು. ಬಸವರಾಜ ಕುರುನಹಳ್ಳಿ ನಿರೂಪಿಸಿದರು, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ರೇಣುಕಾ ತಳವಾರ ನಿರೂಪಿಸಿದರು. ಬೂದಿಹಾಳ ಅವರು ವಂದಿಸಿದರು.




Leave a Reply

Your email address will not be published. Required fields are marked *

error: Content is protected !!